ಶಶಾಂಕ್‌ ಮ್ಯಾಜಿಕ್‌ಗೆ ತಲೆಬಾಗಿದ ಟೈಟಾನ್ಸ್‌!

| Published : Apr 05 2024, 01:01 AM IST / Updated: Apr 05 2024, 04:14 AM IST

ಸಾರಾಂಶ

ಗುಜರಾತ್‌ ವಿರುದ್ಧ ಪಂಜಾಬ್‌ಗೆ 3 ವಿಕೆಟ್‌ ರೋಚಕ ಜಯ. ಶುಭ್‌ಮನ್‌ ಸ್ಫೋಟಕ 89, ಗುಜರಾತ್‌ 20 ಓವರಲ್ಲಿ 4 ವಿಕೆಟ್‌ಗೆ 199. ಸೋಲಿನ ಭೀತಿಯಲ್ಲಿದ್ದಾಗ ಶಶಾಂಕ್‌ ಸಿಂಗ್‌ 29 ಎಸೆತದಲ್ಲಿ 61, ಅಶುತೋಶ್‌ 31 ರನ್‌. 19.5 ಓವರಲ್ಲಿ ಗೆದ್ದು ಬೀಗಿದ ಪಂಜಾಬ್‌

ಅಹಮದಾಬಾದ್‌: ಪ್ರತಿ ಬಾರಿಯಂತೆ ಈ ಬಾರಿಯೂ ಐಪಿಎಲ್‌ ಹಲವು ಪ್ರತಿಭಾವಂತ ಆಟಗಾರರನ್ನು ಕ್ರಿಕೆಟ್‌ ಜಗತ್ತಿಗೆ ಪರಿಚಯಿಸುತ್ತಿದೆ. ಗುರುವಾರ ಈ ಪಟ್ಟಿಗೆ ಸೇರ್ಪಡೆಗೊಂಡವರು ಶಶಾಂಕ್‌ ಸಿಂಗ್‌. ತಮ್ಮ ತಂಡ ಪಂಜಾಬ್‌ ಕಿಂಗ್ಸ್‌ ಇನ್ನೇನು ಸೋತೇ ಬಿಟ್ಟಿತು ಅನ್ನುವಷ್ಟರಲ್ಲಿ ಆಕರ್ಷಕ ಸಿಕ್ಸರ್‌, ಬೌಂಡರಿಗಳ ಮೂಲಕ ಶಶಾಂಕ್‌ ಗೆಲುವು ತಂದುಕೊಟ್ಟಿದ್ದಾರೆ. 

ನಿರ್ಣಾಯಕ ಘಟ್ಟದಲ್ಲಿ ಅಶುತೋಶ್‌ ಜೊತೆಗೂಡಿ ಅಬ್ಬರಿಸಿದ ಶಶಾಂಕ್‌ ಗುಜರಾತ್‌ ವಿರುದ್ಧ ಪಂಜಾಬ್‌ 3 ವಿಕೆಟ್‌ಗಳಿಂದ ಗೆಲ್ಲಲು ನೆರವಾಗಿದ್ದಾರೆ.ಪಂಜಾಬ್‌ 2 ಸೋಲಿನ ಬಳಿಕ ಗೆಲುವಿನ ಹಳಿಗೆ ಮರಳಿದರೆ, 3ನೇ ಜಯದ ನಿರೀಕ್ಷೆಯಲ್ಲಿದ್ದ ಗುಜರಾತ್‌ ಕನಸು ಭಗ್ನಗೊಂಡಿತು.ಮೊದಲು ಬ್ಯಾಟ್‌ ಮಾಡಿದ ಗುಜರಾತ್‌, ಶುಭ್‌ಮನ್‌ ಗಿಲ್ ಅಬ್ಬರದಿಂದಾಗಿ 20 ಓವರಲ್ಲಿ 4 ವಿಕೆಟ್‌ಗೆ 199 ರನ್‌ ಕಲೆಹಾಕಿತು. ಬೃಹತ್‌ ಗುರಿ ಬೆನ್ನತ್ತುವಾಗ ಒಂದು ಹಂತದಲ್ಲಿ ಪಂಜಾಬ್‌ ಎಡವಿದರೂ ಯುವ ಬ್ಯಾಟರ್‌ಗಳು ತಂಡಕ್ಕೆ ಆಪತ್ಬಾಂಧವರಾಗಿ ಮೂಡಿಬಂದರು.

ನಾಯಕ ಧವನ್‌ 1 ರನ್‌ಗೆ ವಿಕೆಟ್‌ ಒಪ್ಪಿಸಿದ ಬಳಿಕ ಬೇರ್‌ಸ್ಟೋವ್‌(22), ಪ್ರಭ್‌ಸಿಮ್ರನ್‌(35) ತಂಡಕ್ಕೆ ಆಸರೆಯಾದರು. ಪವರ್‌-ಪ್ಲೇನಲ್ಲಿ 54 ರನ್‌ ಗಳಿಸಿದ್ದ ತಂಡ ಬಳಿಕ ಕುಸಿಯಿತು. ಕೊನೆ 5 ಓವರಲ್ಲಿ 62 ರನ್‌ ಬೇಕಿದ್ದಾಗ ಜಿತೇಶ್‌(16) ಔಟಾದರು. ಆದರೆ 7ನೇ ವಿಕೆಟ್‌ಗೆ ಜೊತೆಯಾದ ಶಶಾಂಕ್‌ ಹಾಗೂ ಅಶುತೋಶ್‌ 22 ಎಸೆತದಲ್ಲಿ 43 ರನ್‌ ಸೇರಿಸಿ ತಂಡವನ್ನು ಗೆಲುನಿನತ್ತ ಕೊಂಡೊಯ್ದರು. ಅಶುತೋಶ್‌(17 ಎಸೆತಗಳಲ್ಲಿ 31) ಕೊನೆ ಓವರಿನ ಮೊದಲ ಎಸೆತದಲ್ಲಿ ಔಟಾದರೆ, 29 ಎಸೆತಗಳಲ್ಲಿ 61 ರನ್‌ ಚಚ್ಚಿದ ಶಶಾಂಕ್‌ ಇನ್ನೊಂದು ಎಸೆತ ಬಾಕಿ ಇರುವಂತೆ ತಂಡವನ್ನು ಗೆಲ್ಲಿಸಿದರು.

ಗಿಲ್ ಅಬ್ಬರ: ಆರಂಭದಲ್ಲೇ ಅಬ್ಬರದ ಆಟಕ್ಕೆ ಒತ್ತುಕೊಟ್ಟ ಗುಜರಾತ್‌ ಪವರ್‌-ಪ್ಲೇನಲ್ಲಿ 52 ರನ್‌ ಸಿಡಿಸಿತು. ವೃದ್ಧಿಮಾನ್‌ ಸಾಹ(11) ಹಾಗೂ ಕೇನ್‌ ವಿಲಿಯಮ್ಸನ್‌(26) ತಮ್ಮ ಮೇಲಿನ ನಿರೀಕ್ಷೆ ಉಳಿಸಿಕೊಳ್ಳಲು ವಿಫಲರಾದರು. ಆದರೆ ನಾಯಕ ಶುಭ್‌ಮನ್‌ ಗಿಲ್‌ ತಂಡವನ್ನು ಏಕಾಂಗಿಯಾಗಿಯೇ ಬೃಹತ್‌ ಮೊತ್ತದತ್ತ ಕೊಂಡೊಯ್ದರು. ಅವರಿಗೆ ತಕ್ಕ ಮಟ್ಟಿನ ಸಾಥ್‌ ನೀಡಿದ್ದು ಸಾಯಿ ಸುದರ್ಶನ್‌. 19 ಎಸೆತದಲ್ಲಿ 33 ರನ್ ಸಿಡಿಸಿ ಸುದರ್ಶನ್‌ ಔಟಾದರೂ, ಕೊನೆವರೆಗೂ ಕ್ರೀಸ್‌ನಲ್ಲಿ ನೆಲೆಯೂರಿದ ಗಿಲ್‌ 48 ಎಸೆತಗಳಲ್ಲಿ 89 ರನ್‌ ಚಚ್ಚಿದರು. 8 ಎಸೆತಗಳಲ್ಲಿ 23 ರನ್‌ ಸಿಡಿಸಿದ ತೆವಾಟಿಯಾ ತಂಡವನ್ನು 200ರ ಸನಿಹಕ್ಕೆ ತಲುಪಿಸಿದರು.ಸ್ಕೋರ್: ಗುಜರಾತ್‌ 20 ಓವರಲ್ಲಿ 199/4 (ಗಿಲ್‌ 89, ಸುದರ್ಶನ್‌ 33, ರಬಾಡ 2-44), ಪಂಜಾಬ್‌ 19.5 ಓವರಲ್ಲಿ 200/7 (ಶಶಾಂಕ್‌ 61, ಪ್ರಭ್‌ಸಿಮ್ರನ್‌ 35, ನೂರ್‌ 2-32) ಪಂದ್ಯಶ್ರೇಷ್ಠ: ಶಶಾಂಕ್‌ ಸಿಂಗ್‌