ಚಿನ್ನಸ್ವಾಮಿಯ ಸ್ಟ್ಯಾಂಡ್‌ಗೆ 10 ದಿಗ್ಗಜರ ಹೆಸರು : ಡೈಮಂಡ್‌ ಬಾಕ್ಸ್‌ಗೆ ಕುಂಬ್ಳೆ, ಎನ್‌ ಸ್ಟ್ಯಾಂಡ್‌ಗೆ ದ್ರಾವಿಡ್‌?

| Published : Dec 02 2024, 01:15 AM IST / Updated: Dec 02 2024, 04:25 AM IST

ಚಿನ್ನಸ್ವಾಮಿಯ ಸ್ಟ್ಯಾಂಡ್‌ಗೆ 10 ದಿಗ್ಗಜರ ಹೆಸರು : ಡೈಮಂಡ್‌ ಬಾಕ್ಸ್‌ಗೆ ಕುಂಬ್ಳೆ, ಎನ್‌ ಸ್ಟ್ಯಾಂಡ್‌ಗೆ ದ್ರಾವಿಡ್‌?
Share this Article
  • FB
  • TW
  • Linkdin
  • Email

ಸಾರಾಂಶ

ಆದರೆ ರಾಜ್ಯದ ಮಹಿಳಾ ಕ್ರಿಕೆಟ್‌ ದಂತಕಥೆ ಶಾಂತಾ ರಂಗಸ್ವಾಮಿ ಹೆಸರನ್ನು ಕೆಎಸ್‌ಸಿಎ ಯಾವುದೇ ಸ್ಟ್ಯಾಂಡ್‌ಗೆ ಇಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕ್ರಿಕೆಟ್‌ ಅಭಿಮಾನಿಗಳು, ಮಾಜಿ ಕ್ರಿಕೆಟಿಗರಿಂದಲೂ ಟೀಕೆ ವ್ಯಕ್ತವಾಗುತ್ತಿದೆ.

 ಬೆಂಗಳೂರು :  ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಯು ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ರಾಜ್ಯದ 10 ದಿಗ್ಗಜ ಕ್ರಿಕೆಟಿಗ ಹೆಸರಿಡಲು ನಿರ್ಧರಿಸಿದೆ. ಈಗಾಗಲೇ ಕೆಎಸ್‌ಸಿಎ ಸ್ಟ್ಯಾಂಡ್‌ಗಳ ಹೆಸರನ್ನೂ ಅಂತಿಮಗೊಳಿಸಿದೆ ಎಂದು ಹೇಳಲಾಗುತ್ತಿದೆ.

ವಿವಿಧ ಸ್ಟ್ಯಾಂಡ್‌ಗಳಿಗೆ ಇಡಲಾಗಿರುವ 10 ಕ್ರಿಕೆಟಿಗರ ಪಟ್ಟಿ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಆದರೆ ಇದನ್ನು ಕೆಎಸ್‌ಸಿಎ ಅಧಿಕಾರಿಗಳು ಖಚಿತಪಡಿಸಿಲ್ಲ. ಯಾವ ಸ್ಟ್ಯಾಂಡ್‌ಗೆ ಯಾವ ಹೆಸರು ಎಂಬುದರ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಪಿ1 ಸ್ಟ್ಯಾಂಡ್‌ಗೆ ಎರಪಳ್ಳಿ ಪ್ರಸನ್ನ, ಪಿ2 ಸ್ಟ್ಯಾಂಡ್‌ಗೆ ಜಿ.ಆರ್‌.ವಿಶ್ವನಾಥ್‌, ಪಿ ಟೆರೇಸ್‌ಗೆ ಬಿಎಸ್‌ ಚಂದ್ರಶೇಖರ್‌, ಪಿ ಕಾರ್ಪೊರೇಟ್‌ಗೆ ಸಯ್ಯದ್‌ ಕೀರ್ಮಾನಿ, ಎಮ್‌1 ಸ್ಟ್ಯಾಂಡ್‌ಗೆ ಬ್ರಿಜೇಶ್‌ ಪಟೇಲ್‌, ಎಮ್‌2 ಸ್ಟ್ಯಾಂಡ್‌ಗೆ ರೋಜರ್‌ ಬಿನ್ನಿ ಹೆಸರಿಡಲಾಗಿದೆ. ಡೈಮಂಡ್‌ ಬಾಕ್ಸ್‌ಗೆ ಅನಿಲ್‌ ಕುಂಬ್ಳೆ, ಎನ್‌ ಸ್ಟ್ಯಾಂಡ್‌ಗೆ ರಾಹುಲ್‌ ದ್ರಾವಿಡ್‌, ಪಿ1 ಎ ಸ್ಟ್ಯಾಂಡ್‌ಗೆ ಜಾವಗಲ್‌ ಶ್ರೀನಾಥ್‌, ಪಿ4 ಸ್ಟ್ಯಾಂಡ್‌ಗೆ ವೆಂಕಟೇಶ್‌ ಪ್ರಸಾದ್‌ ಹೆಸರನ್ನು ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ರಾಜ್ಯದ ಮಹಿಳಾ ಕ್ರಿಕೆಟ್‌ ದಂತಕಥೆ ಶಾಂತಾ ರಂಗಸ್ವಾಮಿ ಹೆಸರನ್ನು ಕೆಎಸ್‌ಸಿಎ ಯಾವುದೇ ಸ್ಟ್ಯಾಂಡ್‌ಗೆ ಇಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕ್ರಿಕೆಟ್‌ ಅಭಿಮಾನಿಗಳು, ಮಾಜಿ ಕ್ರಿಕೆಟಿಗರಿಂದಲೂ ಟೀಕೆ ವ್ಯಕ್ತವಾಗುತ್ತಿದೆ.