ವಿಶ್ವಕಪ್‌ಗೆ ದ್ರಾವಿಡ್‌ ಅವಧಿ ಮುಕ್ತಾಯ: ಹೊಸ ಕೋಚ್‌ಗಾಗಿ ಬಿಸಿಸಿಐ ಹುಡುಕಾಟ

| Published : May 10 2024, 11:46 PM IST

ಸಾರಾಂಶ

ಕೆಲ ದಿನಗಳಲ್ಲೇ ಹೊಸ ಕೋಚ್‌ಗಾಗಿ ಅರ್ಜಿ ಆಹ್ವಾನಿಸುತ್ತೇವೆ ಎಂದಿದ್ದಾರೆ. ಕೋಚ್‌ ದ್ರಾವಿಡ್‌ ಮರು ಆಯ್ಕೆ ಬಯಸಿದರೆ ಅರ್ಜಿ ಹಾಕಬೇಕು ಎಂದು ಜಯ್‌ ಶಾ ಹೇಳಿದ್ದಾರೆ.

ಮುಂಬೈ: ಟಿ20 ವಿಶ್ವಕಪ್‌ ಬಳಿಕ ಟೀಂ ಇಂಡಿಯಾ ಹಾಲಿ ಕೋಚ್‌ ರಾಹುಲ್‌ ದ್ರಾವಿಡ್‌ರ ಅವಧಿ ಮುಕ್ತಾಯಗೊಳ್ಳಲಿದ್ದು, ಹೊಸ ಕೋಚ್‌ಗಾಗಿ ಬಿಸಿಸಿಐ ಹುಡುಕಾಟ ಆರಂಭಿಸಿದೆ. ಈ ಬಗ್ಗೆ ಶುಕ್ರವಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಹಿತಿ ನೀಡಿದ್ದು, ಕೆಲ ದಿನಗಳಲ್ಲೇ ಹೊಸ ಕೋಚ್‌ಗಾಗಿ ಅರ್ಜಿ ಆಹ್ವಾನಿಸುತ್ತೇವೆ ಎಂದಿದ್ದಾರೆ. ‘ಟಿ20 ವಿಶ್ವಕಪ್‌ ಮುಗಿಯುವ ತನಕ ದ್ರಾವಿಡ್‌ರ ಗುತ್ತಿಗೆ ಇರಲಿದೆ. ಅವರು ಮರು ಆಯ್ಕೆ ಬಯಸಿದರೆ ಮತ್ತೆ ಅರ್ಜಿ ಸಲ್ಲಿಸಬಹುದು’ ಎಂದು ಶಾ ತಿಳಿಸಿದ್ದಾರೆ. ಹೊಸ ಕೋಚ್‌ರನ್ನು 3 ವರ್ಷ ಅವಧಿಗೆ ನೇಮಕ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.ದ್ರಾವಿಡ್‌ರ 2 ವರ್ಷದ ಗುತ್ತಿಗೆ 2023ರ ಏಕದಿನ ವಿಶ್ವಕಪ್‌ ಮುಕ್ತಾಯಗೊಂಡ ಬಳಿಕ ಮುಗಿದಿತ್ತು. ಬಳಿಕ ಟಿ20 ವಿಶ್ವಕಪ್‌ ವರೆಗೂ ಹುದ್ದೆಯಲ್ಲಿ ಮುಂದುವರಿಯುವಂತೆ ಬಿಸಿಸಿಐ ಕೇಳಿಕೊಂಡಿತ್ತು.ಅರ್ಗಕರ್‌ ಹೇಳಿದ್ದಕ್ಕೆ ಕಿಶನ್‌, ಶ್ರೇಯಸ್‌ಗೆ ಗುತ್ತಿಗೆ ಇಲ್ಲ: ಶಾ

ಮುಂಬೈ: ಇಶಾನ್‌ ಕಿಶನ್‌ ಹಾಗೂ ಶ್ರೇಯಸ್‌ ಅಯ್ಯರ್‌ರನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಡುವ ನಿರ್ಧಾರ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್‌ ಅಗರ್ಕರ್‌ರದ್ದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ. ರಣಜಿ ಟ್ರೋಫಿ ಸೇರಿ ದೇಸಿ ಟೂರ್ನಿಗಳಲ್ಲಿ ಆಡುವಂತೆ ಬಿಸಿಸಿಐ ಸೂಚಿಸಿದರೂ, ಕಿವಿಗೊಡದ್ದಕ್ಕೆ ಇಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಕಿಶನ್‌, ಕಳೆದ ವರ್ಷ ಏಕದಿನ ವಿಶ್ವಕಪ್‌ ಬಳಿಕ ರಾಷ್ಟ್ರೀಯ ತಂಡಕ್ಕೆ ಆಯ್ಕೆಗೆ ಲಭ್ಯರಿರದೆ ಕೇವಲ ಐಪಿಎಲ್‌ ಸಿದ್ಧತೆ ಕಡೆಗೆ ಹೆಚ್ಚಿನ ಗಮನ ಹರಿಸಿದರೆ, ಶ್ರೇಯಸ್‌ ಮುಂಬೈ ರಣಜಿ ತಂಡದ ಸಿದ್ಧತೆ ನಡುವೆಯೇ ಕೆಕೆಆರ್‌ ತಂಡದ ಅಭ್ಯಾಸ ಶಿಬಿರಕ್ಕೆ ತೆರಳಿದ್ದು ಬಿಸಿಸಿಐ ಸಿಟ್ಟಿಗೆ ಕಾರಣವಾಗಿತ್ತು.