ಸಾರಾಂಶ
ನವದೆಹಲಿ: ಲೈಂಗಿಕ ದೌರ್ಜನ್ಯ ಆರೋಪ ಹೊತ್ತುಕೊಂಡಿರುವ ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಹಾಗೂ ಡಬ್ಲ್ಯುಎಫ್‌ಐಗೆ ಬ್ರಿಜ್ ಆಪ್ತರ ಆಯ್ಕೆ ಪ್ರಶ್ನಿಸಿ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲ ಸೂಚಿಸಿದ್ದಾರೆ. ಬುಧವಾರ ಹರ್ಯಾಣದ ಝಾಜರ್‌ನಲ್ಲಿ ಒಲಿಂಪಿಕ್ ಪದಕ ವಿಜೇತ ಭಜರಂಗ್ ಪೂನಿಯಾರನ್ನು ಭೇಟಿ ಮಾಡಿದ ರಾಹುಲ್, ಅವರೊಂದಿಗೆ ಕೆಲ ಸಮಯ ಕಳೆದರು. ಕುಸ್ತಿಪಟುಗಳ ಅಭ್ಯಾಸ, ದೈನಂದಿನ ಚಟುವಟಿಕೆ ಬಗ್ಗೆ ತಿಳಿದುಕೊಂಡ ರಾಹುಲ್, ಬಜರಂಗ್ ಜೊತೆ ಕುಸ್ತಿ ಆಡಿ ಗಮನ ಸೆಳೆದರು. ಬಳಿಕ ಕುಸ್ತಿಪಟುಗಳ ಹೋರಾಟದ ಬಗ್ಗೆ ‘ಎಕ್ಸ್’ನಲ್ಲಿ ಬರೆದುಕೊಂಡಿರುವ ಅವರು, ‘ವರ್ಷಗಳ ಕಾಲ ಕಠಿಣ ಪರಿಶ್ರಮ, ಬದ್ಧತೆ, ತ್ಯಾಗದ ಮೂಲಕ ಕುಸ್ತಿಪಟುಗಳು ದೇಶಕ್ಕೆ ಪದಕ ತಂದುಕೊಡುತ್ತಾರೆ. ಆದರೆ ಕುಸ್ತಿ ಅಖಾಡದಲ್ಲಿ ಅಭ್ಯಾಸ ಮಾಡುವುದನ್ನು ಬಿಟ್ಟು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾದರೆ ಮುಂದೆ ಯಾರು ತಮ್ಮ ಮಕ್ಕಳನ್ನು ಕುಸ್ತಿ ಕ್ರೀಡೆಗೆ ಕಳುಹಿಸುತ್ತಾರೆ’ ಎಂದು ಪ್ರಶ್ನಿಸಿದ್ದಾರೆ.