ಜೈಸ್ವಾಲ್ ರಾಯಲ್‌ ಆಟಕ್ಕೆ ಮುಂಬೈ ಕಂಗಾಲು

| Published : Apr 23 2024, 12:45 AM IST / Updated: Apr 23 2024, 05:01 AM IST

ಸಾರಾಂಶ

ಜೈಪುರದಲ್ಲಿ ರಾಜಸ್ಥಾನದ ಮುಂದೆ ಮಂಡಿಯೂರಿದ ಮುಂಬೈ, 9 ವಿಕೆಟ್‌ ಹೀನಾಯ ಸೋಲು. ಮುಂಬೈ 179/9. ಸಂದೀಪ್‌ಗೆ 5 ವಿಕೆಟ್‌. ಜೈಸ್ವಾಲ್‌ ಸ್ಫೋಟಕ ಶತಕ, ರಾಜಸ್ಥಾನ 18.4 ಓವರಲ್ಲಿ 183/1. 7ನೇ ಗೆಲುವು. ಫ್ಲೇ-ಆಫ್‌ಗೆ ಮತ್ತಷ್ಟು ಹತ್ತಿರ. ಮುಂಬೈಗೆ 5ನೇ ಸೋಲು

ಜೈಪುರ: ಈ ಬಾರಿ ಐಪಿಎಲ್‌ನಲ್ಲಿ ಮಾಜಿ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್‌ ತಂಡದ ಓಟಕ್ಕೆ ಬ್ರೇಕ್‌ ಹಾಕಲು ಸದ್ಯಕ್ಕೆ ಯಾವ ತಂಡದಿಂದಲೂ ಕಷ್ಟಸಾಧ್ಯ ಎಂಬಂತಾಗಿದೆ. ತನ್ನ ಸ್ಫೋಟಕ ಬ್ಯಾಟಿಂಗ್‌ ಮೂಲಕವೇ ಮತ್ತೆ ಅಬ್ಬರಿಸಿದ ರಾಜಸ್ಥಾನ, ಸೋಮವಾರ ಮುಂಬೈ ಇಂಡಿಯನ್ಸ್‌ ವಿರುದ್ಧ 9 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಯಶಸ್ವಿ ಜೈಸ್ವಾಲ್‌ರ ಸ್ಫೋಟಕ ಆಟದ ಮುಂದೆ ನಲುಗಿದ ಮುಂಬೈ ಟೂರ್ನಿಯಲ್ಲಿ 5ನೇ ಸೋಲನುಭವಿಸಿದರೆ, ರಾಜಸ್ಥಾನ 8ರಲ್ಲಿ 7 ಪಂದ್ಯ ಗೆದ್ದು ಪ್ಲೇ-ಆಫ್‌ಗೆ ಇನ್ನಷ್ಟು ಹತ್ತಿರವಾಗಿದೆ.

ಮೊದಲು ಬ್ಯಾಟ್‌ ಮಾಡಿದ ಮುಂಬೈ, ತಿಲಕ್‌ ವರ್ಮಾ ಹಾಗೂ ನೇಹಲ್‌ ವಧೇರಾ ಸ್ಫೋಟಕ ಆಟದ ನೆರವಿನಿಂದ 20 ಓವರಲ್ಲಿ 9 ವಿಕೆಟ್‌ ಕಳೆದುಕೊಂಡು 179 ರನ್‌ ಕಲೆಹಾಕಿತು. ಗುರಿ ದೊಡ್ಡದಿದ್ದರೂ ರಾಜಸ್ಥಾನದ ಅಬ್ಬರದ ಮುಂದೆ ಈ ಮೊತ್ತ ತುಂಬಾ ಸಣ್ಣದಾಗಿ ಕಂಡುಬಂತು. ತಂಡ 18.4 ಓವರಲ್ಲೇ ಗೆಲುವಿನ ದಡ ಸೇರಿತು.ಪವರ್‌-ಪ್ಲೇನಲ್ಲಿ 61 ರನ್‌ ಸೇರಿಸಿದ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್‌ ಬಟ್ಲರ್‌ ಮೊದಲ ವಿಕೆಟ್‌ಗೆ 74 ರನ್‌ ಕಲೆಹಾಕಿದರು. 35 ರನ್ ಗಳಿಸಿದ್ದ ಬಟ್ಲರ್‌ಗೆ ಚಾವ್ಲಾ ಪೆವಿಲಿಯನ್‌ ಹಾದಿ ತೋರಿದ ಬಳಿಕ ಜೈಸ್ವಾಲ್‌ಗೆ ನಾಯಕ ಸಂಜು ಸ್ಯಾಮ್ಸನ್‌ ಜೊತೆಯಾದರು

. ಮುಂಬೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಜೈಸ್ವಾಲ್‌60 ಎಸೆತಗಳಲ್ಲಿ 9 ಬೌಂಡರಿ, 7 ಸಿಕ್ಸರ್‌ನೊಂದಿಗೆ 104 ರನ್‌ ಸಿಡಿಸಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಸ್ಯಾಮ್ಸನ್‌ ಔಟಾಗದೆ 38 ರನ್‌ ಗಳಿಸಿದರು.ವರ್ಮಾ ಫಿಫ್ಟಿ: ಇದಕ್ಕೂ ಮುನ್ನ ಮುಂಬೈನ ತಾರಾ ಬ್ಯಾಟರ್‌ಗಳು ಕೈಕೊಟ್ಟರು. ರೋಹಿತ್‌ 6, ಸೂರ್ಯಕುಮಾರ್‌ 10, ಇಶಾನ್‌ ಶೂನ್ಯಕ್ಕೆ ನಿರ್ಗಮಿಸಿದರು. ಆದರೆ ಯುವ ಪ್ರತಿಭೆಗಳಾದ ತಿಲಕ್‌ ವರ್ಮಾ ಹಾಗೂ ನೇಹಲ್‌ ವಧೇರಾ ತಂಡದ ಕೈ ಬಿಡಲಿಲ್ಲ. ತಿಲಕ್‌ 45 ಎಸೆತಗಳಲ್ಲಿ 65 ರನ್‌ ಚಚ್ಚಿದರೆ, 24 ಎಸೆತಗಳಲ್ಲಿ 49 ರನ್‌ ಸಿಡಿಸಿದ ನೇಹಲ್‌ ವಧೇರಾ ಅರ್ಧಶತಕದ ಅಂಚಿನಲ್ಲಿ ಎಡವಿದರು. ಸಂದೀಪ್‌ ಶರ್ಮಾ 18 ರನ್‌ಗೆ 5 ವಿಕೆಟ್‌ ಗೊಂಚಲು ಪಡೆದರು.ಸ್ಕೋರ್‌: ಮುಂಬೈ 20 ಓವರಲ್ಲಿ 179/9 (ತಿಲಕ್‌ 65, ನೇಹಲ್‌ 49, ಸಂದೀಪ್‌ 5-18), ರಾಜಸ್ಥಾನ 18.4 ಓವರಲ್ಲಿ 183/1 (ಜೈಸ್ವಾಲ್‌ 104, ಸ್ಯಾಮ್ಸನ್‌ 38*, ಚಾವ್ಲಾ 1-33)

ಮಳೆಗೆ 40 ನಿಮಿಷಸ್ಥಗಿತಗೊಂಡ ಪಂದ್ಯ: ಈ ಬಾರಿ ಐಪಿಎಲ್‌ನಲ್ಲಿ ಮೊದಲ ಬಾರಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ರಾಜಸ್ಥಾನ ತಂಡದ ಬ್ಯಾಟಿಂಗ್‌ ವೇಳೆ 6 ಓವರ್ ಮುಕ್ತಾಯಗೊಂಡಾಗ ಮಳೆ ಸುರಿಯಲಾರಂಭಿಸಿತು. ಸುಮಾರು 10.05ರ ಸುಮಾರಿಗೆ ಆರಂಭಗೊಂಡ ಮಳೆ 10.30ರ ವರೆಗೂ ಸುರಿಯಿತು. ಹೀಗಾಗಿ ಸುಮಾರು 40 ನಿಮಿಷಗಳ ಕಾಲ ಸ್ಥಗಿತಗೊಂಡ ಪಂದ್ಯ 10.45ರ ವೇಳೆಗೆ ಮತ್ತೆ ಆರಂಭಿಸಲಾಯಿತು.