ಕಪ್‌ ಗೆಲ್ಲುವ ಕನಸಲ್ಲಿರುವ ಆರ್‌ಸಿಬಿಗೆ ಹ್ಯಾಟ್ರಿಕ್‌ ಸೋಲಿನ ಆಘಾತ. ವಿರಾಟ್‌ ಕೊಹ್ಲಿ ಸೆಂಚುರಿ ಹೊಡೆದರೂ ಆರ್‌ಸಿಬಿ 3 ವಿಕೆಟ್‌ಗೆ 183 ರನ್‌. ಬಟ್ಲರ್‌ ಸ್ಫೋಟಕ ಶತಕ, ಸ್ಯಾಮ್ಸನ್‌ ಅಬ್ಬರಕ್ಕೆ ಆರ್‌ಸಿಬಿ ಬೌಲರ್ಸ್‌ ಕಂಗಾಲು. ರಾಜಸ್ಥಾನ 19.1 ಓವರಲ್ಲಿ 189/4. ಸತತ 4ನೇ ಜಯ

ಜೈಪುರ: ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿಯ ಸೋಲಿನ ಹಣೆಬರಹ ಬದಲಾಗುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಸೋಲೇ ತಮ್ಮ ಹೊಸ ಅಧ್ಯಾಯ ಎಂಬಂತೆ ಆಡುತ್ತಿರುವ ಆರ್‌ಸಿಬಿಯನ್ನು ಶನಿವಾರ ರಾಜಸ್ಥಾನ ರಾಯಲ್ಸ್‌ ತನ್ನ ಅಭೂತಪೂರ್ವ ಆಟದ ಮೂಲಕ ಮಕಾಡೆ ಮಲಗಿಸಿತು. 

ವಿರಾಟ್‌ ಕೊಹ್ಲಿ ಶತಕದ ಜೋಶ್‌ಅನ್ನು ಜೋಸ್‌ ಬಟ್ಲರ್‌ ಭರ್ಜರಿ ಸೆಂಚುರಿ ಮೂಲಕ ಇಳಿಸಿದ್ದು, ರಾಜಸ್ಥಾನಕ್ಕೆ 6 ವಿಕೆಟ್‌ ಭರ್ಜರಿ ಗೆಲುವು ತಂದುಕೊಟ್ಟರು. ತಂಡಕ್ಕಿದು ಟೂರ್ನಿಯಲ್ಲಿ ಸತತ 4ನೇ ಗೆಲುವು.ತನ್ನ ಬೌಲರ್‌ಗಳ ಸಾಮರ್ಥ್ಯ ಗೊತ್ತಿದ್ದರೂ ಆರ್‌ಸಿಬಿ ಈ ಪಂದ್ಯದಲ್ಲೂ ದೊಡ್ಡ ಮೊತ್ತದ ಗುರಿ ಇಟ್ಟುಕೊಂಡಂತೆ ಕಂಡುಬರಲಿಲ್ಲ. 

ವಿಕೆಟ್‌ ಉಳಿಸಿಕೊಂಡರೂ ನಿಧಾನ ಆಟವಾಡಿದ ತಂಡ 20 ಓವರಲ್ಲಿ 3 ವಿಕೆಟ್‌ಗೆ 183 ರನ್‌ ಗಳಿಸಿತು. ಆದರೆ ಈ ಗುರಿ ಜೈಪುರದ ಅಂಗಳದಲ್ಲಿ ರಾಜಸ್ಥಾನಕ್ಕೆ ದೊಡ್ಡ ಸವಾಲು ಎನಿಸಲೇ ಇಲ್ಲ. ರನ್‌ ಖಾತೆ ತೆರೆಯುವ ಮೊದಲೇ ಜೈಸ್ವಾಲ್‌ ಔಟಾದರೂ, 2ನೇ ವಿಕೆಟ್‌ಗೆ ಬಟ್ಲರ್‌-ಸ್ಯಾಮ್ಸನ್‌ 148 ರನ್‌ ಜೊತೆಯಾಟವಾಡಿ ಆರ್‌ಸಿಬಿ ಬೌಲರ್‌ಗಳ ಚಳಿ ಬಿಡಿಸಿದರು. 42 ಎಸೆತದಲ್ಲಿ 69 ರನ್‌ ಗಳಿಸಿ ಸ್ಯಾಮ್ಸನ್‌ ಔಟಾದರೂ, ಕೊನೆವರೆಗೂ ಕ್ರೀಸ್‌ನಲ್ಲಿ ನಿಂತು ಅಬ್ಬರಿಸಿದ ಬಟ್ಲರ್‌ 58 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್‌ನೊಂದಿಗೆ ಅಜೇಯ 100 ರನ್‌ ಸಿಡಿಸಿ. 19.1 ಓವರಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು. ಟಾಪ್ಲಿ 2 ವಿಕೆಟ್‌ ಕಿತ್ತರು.

ಒನ್‌ ಮ್ಯಾನ್‌ ಶೋ: ಆರ್‌ಸಿಬಿಯ ಆಟ ಈ ಪಂದ್ಯದಲ್ಲೂ ಒನ್ ಮ್ಯಾನ್‌ ಶೋಗೆ ಸೀಮಿತವಾಯಿತು. ಮೊದಲ 4 ಓವರಲ್ಲಿ 42 ರನ್‌ ಗಳಿಸಿದ್ದ ತಂಡ ಬಳಿಕ ಗೇರ್‌ ಬದಲಿಸಿ ರನ್‌ ವೇಗವನ್ನು ಕಡಿಮೆಗೊಳಿಸಿತು. ಮೊದಲ ವಿಕೆಟ್‌ಗೆ ಡು ಪ್ಲೆಸಿ-ಕೊಹ್ಲಿ 125 ರನ್‌ ಸೇರಿಸಿದರು. ಡು ಪ್ಲೆಸಿ 44ಕ್ಕೆ ನಿರ್ಗಮಿಸಿದರೆ, ಮ್ಯಾಕ್ಸ್‌ವೆಲ್‌(01), ಹೊಸ ಬ್ಯಾಟರ್‌ ಸೌರವ್‌ ಚೌಹಾಣ್‌(09) ಯಾವುದೇ ಮ್ಯಾಜಿಕ್‌ ಮಾಡಲು ಸಾಧ್ಯವಾಗಲಿಲ್ಲ. ತಮ್ಮ ಸ್ಟ್ರೈಕ್‌ರೇಟ್‌ ಹೆಚ್ಚಿಸುವತ್ತ ಯಾವುದೇ ಗಮನ ಕೊಡದಂತೆ ಆಡಿದ ಕೊಹ್ಲಿ 67 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. 72 ಎಸೆತಕ್ಕೆ 113 ರನ್‌ ಸಿಡಿಸಿ ಅವರು ಔಟಾಗದೆ ಉಳಿದರೂ, ತಂಡದ ಮೊತ್ತ 190 ದಾಟಲಿಲ್ಲ.

ಸ್ಕೋರ್‌: ಆರ್‌ಸಿಬಿ 20 ಓವರಲ್ಲಿ 183/3(ಕೊಹ್ಲಿ 113*, ಡು ಪ್ಲೆಸಿ 44, ಚಹಲ್‌ 2-34), ರಾಜಸ್ಥಾನ 19.1 ಓವರಲ್ಲಿ 189/4(ಬಟ್ಲರ್ 100*, ಸ್ಯಾಮ್ಸನ್‌ 69, ಟಾಪ್ಲಿ 2-27)