ಉದಯೋನ್ಮುಖರ ಏಷ್ಯಾಕಪ್‌ ಟಿ 20 : ಸೆಮೀಸಲ್ಲಿ ಐಪಿಎಲ್‌ ಸ್ಟಾರ್‌ಗಳಿದ್ದರೂ ಸೋತ ಭಾರತ

| Published : Oct 26 2024, 12:56 AM IST / Updated: Oct 26 2024, 05:03 AM IST

ಸಾರಾಂಶ

ಐಪಿಎಲ್‌ ಸ್ಟಾರ್‌ಗಳಿದ್ದರೂ ಸೋತ ಭಾರತ. ಅಫ್ಘಾನಿಸ್ತಾನದಿಂದ ಭರ್ಜರಿ ಪ್ರದರ್ಶನ. ತಿಲಕ್‌ ವರ್ಮಾ ಪಡೆಗೆ ಭಾರಿ ನಿರಾಸೆ.

ಅಲ್‌- ಅಮೆರತ್‌ (ಒಮಾನ್‌): ಉದಯೋನ್ಮುಖರ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ ಮುಗ್ಗರಿಸಿದೆ. ಶುಕ್ರವರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 20 ರನ್‌ ಸೋಲು ಎದುರಾಯಿತು. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಮಿಂಚಿದ ಆಟಗಾರರನ್ನು ಈ ಟೂರ್ನಿಗೆ ಆಯ್ಕೆ ಮಾಡಲಾಗಿತ್ತು. ಲೀಗ್‌ ಹಂತದಲ್ಲಿ ಅಬ್ಬರಿಸಿದ್ದ ಭಾರತ, ನಾಕೌಟ್‌ ಪಂದ್ಯದಲ್ಲಿ ನಿರೀಕ್ಷಿತ ಆಟವಾಡಲಿಲ್ಲ.

ಮೊದಲು ಬ್ಯಾಟ್‌ ಮಾಡಿದ ಆಫ್ಘನ್‌ 20 ಓವರಲ್ಲಿ 4 ವಿಕೆಟ್‌ಗೆ 206 ರನ್‌ ಕಲೆಹಾಕಿತು. ಸೆದಿಕುಲ್ಹಾ ಅಟಲ್‌ 83, ಜುಬೈದ್‌ ಅಕ್ಬರಿ 64, ಕರೀಂ ಜನತ್‌ 41 ರನ್‌ ಸಿಡಿಸಿದರು. ಭಾರತ ಪರ ರಸಿಖ್‌ ಸಲಾಂ 4 ಓವರಲ್ಲಿ 25ಕ್ಕೆ 3 ವಿಕೆಟ್‌ ಕಿತ್ತರು.

ದೊಡ್ಡ ಗುರಿ ಬೆನ್ನತ್ತಿದ ಭಾರತ 100 ರನ್‌ಗೆ 5 ವಿಕೆಟ್‌ ಕಳೆದುಕೊಂಡಿತು. ರಮಣ್‌ದೀಪ್‌ ಸಿಂಗ್‌ 64, ನಿಶಾಂತ್‌ ಸಿಂಧು 23 ರನ್‌ ಸಿಡಿಸಿ ಹೋರಾಟ ನಡೆಸಿದರೂ, ಗೆಲುವು ಒಲಿಯಲಿಲ್ಲ.

ಮತ್ತೊಂದು ಸೆಮೀಸಲ್ಲಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿದ ಶ್ರೀಲಂಕಾ ಫೈನಲ್‌ಗೇರಿತು. ಭಾನುವಾರ ಫೈನಲಲ್ಲಿ ಲಂಕಾ-ಅಫ್ಘಾನಿಸ್ತಾನ ಸೆಣಸಲಿವೆ.