ಕರ್ನಾಟಕಕ್ಕೆ ಇನ್ನಿಂಗ್ಸ್‌ ಜಯದ ಗುರಿ!

| Published : Feb 19 2024, 01:30 AM IST

ಸಾರಾಂಶ

ಈಗಾಗಲೇ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವುದನ್ನು ಖಚಿತಪಡಿಸಿಕೊಂಡಿರುವ ಕರ್ನಾಟಕ, ಚಂಡೀಗಢ ವಿರುದ್ಧ ಇನ್ನಿಂಗ್ಸ್‌ ಜಯದೊಂದಿಗೆ ನಾಕೌಟ್‌ ಹಂತಕ್ಕೆ ಕಾಲಿಡಲು ಕಾಯುತ್ತಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಈಗಾಗಲೇ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವುದನ್ನು ಖಚಿತಪಡಿಸಿಕೊಂಡಿರುವ ಕರ್ನಾಟಕ, ಚಂಡೀಗಢ ವಿರುದ್ಧ ಇನ್ನಿಂಗ್ಸ್‌ ಜಯದೊಂದಿಗೆ ನಾಕೌಟ್‌ ಹಂತಕ್ಕೆ ಕಾಲಿಡಲು ಕಾಯುತ್ತಿದೆ.

ವೈಶಾಖ್‌ ವಿಜಯ್‌ ಕುಮಾರ್‌, ಎಸ್‌.ಶರತ್‌ರ ಅಜೇಯ ಶತಕಗಳ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 563 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದ ಕರ್ನಾಟಕ, 300 ರನ್‌ ಮುನ್ನಡೆ ಪಡೆಯಿತು. 2ನೇ ಇನ್ನಿಂಗ್ಸ್‌ ಆರಂಭಿಸಿರುವ ಚಂಡೀಗಢ 3ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 61 ರನ್‌ ಗಳಿಸಿದ್ದು, ಇನ್ನೂ 239 ರನ್‌ ಹಿನ್ನಡೆಯಲ್ಲಿದೆ.ಸೋಮವಾರ ಪಂದ್ಯದ ಕೊನೆಯ ದಿನವಾಗಿದ್ದು, ಕರ್ನಾಟಕ ಸಾಧ್ಯವಾದಷ್ಟು ಬೇಗ 10 ವಿಕೆಟ್‌ ಕಬಳಿಸಿ ಇನ್ನಿಂಗ್ಸ್‌ ಜಯ ಗಳಿಸುವ ವಿಶ್ವಾಸದಲ್ಲಿದೆ. ಚಂಡೀಗಢ ಒಂದು ವೇಳೆ ಹೋರಾಡಿ ಪಂದ್ಯವನ್ನು ಡ್ರಾ ಮಾಡಿಕೊಂಡರೂ, ಕರ್ನಾಟಕ ಕ್ವಾರ್ಟರ್‌ ಫೈನಲ್‌ಗೇರುವುದನ್ನು ತಪ್ಪಿಸಲು ಸಾಧ್ಯವಿಲ್ಲ.

2ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 268 ರನ್‌ ಗಳಿಸಿ 1 ರನ್‌ ಮುನ್ನಡೆ ಪಡೆದಿದ್ದ ರಾಜ್ಯ ತಂಡ, ಭಾನುವಾರ ತನ್ನ ಬಿರುಸಿನ ಬ್ಯಾಟಿಂಗ್‌ ಮುಂದುವರಿಸಿತು. ಹಾರ್ದಿಕ್‌ ರಾಜ್‌ ಹಾಗೂ ಮನೀಶ್‌ ಪಾಂಡೆ 4ನೇ ವಿಕೆಟ್‌ಗೆ 239 ರನ್‌ ಜೊತೆಯಾಟವಾಡಿದರು. 17 ವರ್ಷದ ಹಾರ್ದಿಕ್‌ 82 ರನ್‌ಗೆ ಔಟಾಗಿ ಚೊಚ್ಚಲ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರೆ, ಮನೀಶ್‌ 181 ಎಸೆತದಲ್ಲಿ 148 ರನ್‌ ಗಳಿಸಿ ವಿಕೆಟ್‌ ಕಳೆದುಕೊಂಡರು.ವೈಶಾಖ್‌, ಶರತ್‌ ಮಿಂಚು: ಈ ಋತುವಿನಲ್ಲಿ ತಮ್ಮ ಬ್ಯಾಟಿಂಗ್‌ ಮೂಲಕವೂ ಗಮನ ಸೆಳೆಯುತ್ತಿರುವ ವೇಗಿ ವೈಶಾಖ್‌ (103*) ಚೊಚ್ಚಲ ಶತಕ ಬಾರಿಸಿದರೆ, ವಿಕೆಟ್‌ ಕೀಪರ್‌ ಎಸ್‌.ಶರತ್‌(100*) ಆಕರ್ಷಕ ಶತಕ ಸಿಡಿಸಿ ತಮ್ಮ ಆಯ್ಕೆ ಸಮರ್ಥಿಸಿಕೊಂಡರು.ಸ್ಕೋರ್: ಚಂಡೀಗಢ 267/10 ಮತ್ತು 61/0, ಕರ್ನಾಟಕ 563/5 ಡಿ., (ಮನೀಶ್‌ 148, ವೈಶಾಕ್‌ 103*, ಎಸ್‌.ಶರತ್‌ 100*, ಹಾರ್ದಿಕ್‌ 82, ಕರಣ್‌ 3-143)