ಸಾರಾಂಶ
ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧ 5ನೇ ಪಂದ್ಯದ ಮೂಲಕ ಭಾರತದ ಮಾಂತ್ರಿಕ ಸ್ಪಿನ್ನರ್ ಆರ್.ಅಶ್ವಿನ್ 100ನೇ ಟೆಸ್ಟ್ ಮೈಲಿಗಲ್ಲು ಸಾಧಿಸಿದರು. ಅವರು ಈ ಸಾಧನೆ ಮಾಡಿದ ಭಾರತದ 14ನೇ ಆಟಗಾರ.ಪಂದ್ಯಕ್ಕೂ ಮುನ್ನ ಭಾರತೀಯ ಆಟಗಾರರು ಅಶ್ವಿನ್‌ಗೆ ‘ಗಾರ್ಡ್ ಆಫ್ ಹಾನರ್’ ಗೌರವ ನೀಡದರೆ, ಬಳಿಕ ಬಿಸಿಸಿಐನಿಂದ ವಿಶೇಷ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ವೇಳೆ ಅಶ್ವಿನ್‌ರ ಪತ್ನಿ, ಇಬ್ಬರು ಮಕ್ಕಳು ಜೊತೆಗಿದ್ದರು. ಅಶ್ವಿನ್ ಜೊತೆಗೆ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಜಾನಿ ಬೇರ್‌ಸ್ಟೋವ್ ಕೂಡಾ ಇಂಗ್ಲೆಂಡ್ ಪರ 100ನೇ ಟೆಸ್ಟ್ ಪಂದ್ಯವನ್ನಾಡುತ್ತಿದ್ದಾರೆ.ಅಶ್ವಿನ್‌ಗೂ ಮುನ್ನ ಭಾರತದ ಪರ 13 ಮಂದಿ ತಲಾ 100ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ಕಪಿಲ್ ದೇವ್, ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್ಸರ್ಕಾರ್, ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ, ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್ ಹಾಗೂ ಚೇತೇಶ್ವರ ಪೂಜಾರ ಈ ಸಾಧನೆ ಮಾಡಿದ್ದಾರೆ.2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಆಶ್ವಿನ್ ಇದುವರೆಗೆ 100 ಟೆಸ್ಟ್ ಪಂದ್ಯಗಳಲ್ಲಿ 187 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಒಟ್ಟು 507 ವಿಕೆಟ್ಗಳನ್ನು ಕಬಳಿಸಿದ್ದಾರೆ. 35 ಬಾರಿ 5 ವಿಕೆಟ್ ಪಡೆದಿದ್ದಾರೆ.