73 ಸೆಕೆಂಡ್‌ನಲ್ಲೇ ಓವರ್‌ ಮುಗಿಸಿ ಭಾರತದ ಆಲ್ರೌಂಡರ್‌ ರವೀಂದ್ರ ಜಡೇಜಾ ಹೊಸ ದಾಖಲೆ

| N/A | Published : Feb 10 2025, 01:50 AM IST / Updated: Feb 10 2025, 04:08 AM IST

ಸಾರಾಂಶ

3ನೇ ಅತಿ ವೇಗದ ಓವರ್‌ ದಾಖಲೆ ಕೂಡಾ ಜಡೇಜಾ ಹೆಸರಲ್ಲಿದೆ. 2023ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 93 ಸೆಕಂಡ್‌ಗಳಲ್ಲಿ ಜಡೇಜಾ ಓವರ್‌ ಪೂರ್ಣಗೊಳಿಸಿದ್ದರು.

ಕಟಕ್‌: ಭಾರತದ ಆಲ್ರೌಂಡರ್‌ ರವೀಂದ್ರ ಜಡೇಜಾ ಇಂಗ್ಲೆಂಡ್‌ ವಿರುದ್ಧ 2ನೇ ಏಕದಿನದಲ್ಲಿ ವಿಶೇಷ ಸಾಧನೆ ಮಾಡಿದರು. ಅವರು ಎಸೆದ ಇನ್ನಿಂಗ್ಸ್‌ನ 24ನೇ ಓವರ್‌ ಕೇವಲ 73 ಸೆಕೆಂಡ್‌ಗಳಲ್ಲೇ ಮುಗಿಯಿತು. ಕ್ರೀಸ್‌ನಲ್ಲಿದ್ದ ಹ್ಯಾರಿ ಬ್ರೂಕ್‌ ಎಲ್ಲಾ 6 ಎಸೆತಗಳನ್ನು ಡಾಟ್‌ ಮಾಡಿದರು. ಜಡೇಜಾ ಸಾಧನೆ ಅಂತಾರಾಷ್ಟ್ರೀಯ ಕ್ರಿಕೆಟ್‌ನ 2ನೇ ಅತಿ ವೇಗದ ಓವರ್ ಎನಿಸಿಕೊಂಡಿದೆ. 2021ರಲ್ಲಿ ಇಂಗ್ಲೆಂಡ್‌ ವಿರುದ್ಧ 4ನೇ ಟೆಸ್ಟ್‌ನಲ್ಲಿ ಜಡೇಜಾ 64 ಸೆಕೆಂಡ್‌ಗಳಲ್ಲೇ ಓವರ್‌ ಮುಕ್ತಾಯಗೊಳಿಸಿದ್ದರು. ಇನ್ನು, 3ನೇ ಅತಿ ವೇಗದ ಓವರ್‌ ದಾಖಲೆ ಕೂಡಾ ಜಡೇಜಾ ಹೆಸರಲ್ಲಿದೆ. 2023ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 93 ಸೆಕಂಡ್‌ಗಳಲ್ಲಿ ಜಡೇಜಾ ಓವರ್‌ ಪೂರ್ಣಗೊಳಿಸಿದ್ದರು.

ಸಿಕ್ಸರ್‌ನಲ್ಲಿ ಕ್ರಿಸ್‌ ಗೇಲ್‌ ದಾಖಲೆ ಮುರಿದ ರೋಹಿತ್‌

ಕಟಕ್‌: ಇಂಗ್ಲೆಂಡ್‌ ವಿರುದ್ಧ ಪಂದ್ಯದ ಮೂಲಕ ರೋಹಿತ್‌ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್‌ ಬಾರಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರು. ಪಂದ್ಯದಲ್ಲಿ ಅವರು 7 ಸಿಕ್ಸರ್‌ ಬಾರಿಸಿದರು. ಈ ಮೂಲಕ ಏಕದಿನದ ಸಿಕ್ಸರ್‌ ಗಳಿಕೆಯನ್ನು 338ಕ್ಕೆ ಹೆಚ್ಚಿಸಿದರು. ಅವರು 267 ಪಂದ್ಯಗಳನ್ನಾಡಿದ್ದಾರೆ. ಕ್ರಿಸ್‌ ಗೇಲ್‌ 301 ಪಂದ್ಯಗಳಲ್ಲಿ 331 ಸಿಕ್ಸರ್‌ ಬಾರಿಸಿದ್ದರು. ಪಾಕಿಸ್ತಾನದ ಶಾಹಿದ್‌ ಅಫ್ರಿದಿ 398 ಪಂದ್ಯಗಳಲ್ಲಿ 351 ಸಿಕ್ಸರ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಇನ್ನು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್‌ ಈಗಾಗಲೇ ಅಗ್ರಸ್ಥಾನದಲ್ಲಿದ್ದಾರೆ. ಅವರು 493 ಪಂದ್ಯಗಳಲ್ಲಿ ಒಟ್ಟಾರೆ 631 ಸಿಕ್ಸರ್‌ ಸಿಡಿಸಿದ್ದಾರೆ.