ಡಬ್ಲ್ಯುಪಿಎಲ್‌: ಆರ್‌ಸಿಬಿಗೆ ಮೊದಲ ಸೋಲು!

| Published : Mar 01 2024, 02:23 AM IST

ಸಾರಾಂಶ

2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌)ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಮೊದಲ ಸೋಲು ಎದುರಾಗಿದೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುರುವಾರ ಆರ್‌ಸಿಬಿ 25 ರನ್‌ಗಳಿಂದ ಪರಾಭವಗೊಂಡು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು ಸತತ 2 ಗೆಲುವುಗಳೊಂದಿಗೆ 2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಅಭಿಯಾನವನ್ನು ಆರಂಭಿಸಿದ್ದ ಆರ್‌ಸಿಬಿಗೆ ಮೊದಲ ಸೋಲು ಎದುರಾಗಿದೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ 25 ರನ್‌ ಸೋಲು ಕಂಡ ಆರ್‌ಸಿಬಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕಿಳಿದರೆ, ಡೆಲ್ಲಿ ಅಗ್ರಸ್ಥಾನಕ್ಕೇರಿದೆ. ಕಳಪೆ ಬೌಲಿಂಗ್‌, ಫೀಲ್ಡಿಂಗ್‌ನಿಂದಾಗಿ ಆರ್‌ಸಿಬಿ ಬೃಹತ್‌ ಗುರಿ ಬೆನ್ನತ್ತಬೇಕಾದ ಅನಿವಾರ್ಯತೆ ತಂದುಕೊಂಡಿತು. ಒಂದು ವೇಳೆ ಡೆಲ್ಲಿ ನೀಡಿದ 195 ರನ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ್ದರೆ, ಡಬ್ಲ್ಯುಪಿಎಲ್‌ನಲ್ಲಿ ಗರಿಷ್ಠ ಮೊತ್ತ ಬೆನ್ನತ್ತಿ ಗೆದ್ದ ದಾಖಲೆಯನ್ನು ಆರ್‌ಸಿಬಿ ಬರೆಯುತ್ತಿತ್ತು. ನಾಯಕಿ ಸ್ಮೃತಿ ಮಂಧನಾ ಅವರ ಮನಮೋಹಕ ಆಟದ ಹೊರತಾಗಿಯೂ ಆರ್‌ಸಿಬಿಗೆ ಗೆಲ್ಲಲಾಗಲಿಲ್ಲ. ಮೊದಲ ವಿಕೆಟ್‌ಗೆ ಸೋಫಿ ಡಿವೈನ್‌ (23) ಜೊತೆ ಸೇರಿ ಸ್ಮೃತಿ 77 ರನ್‌ ಸೇರಿಸಿದರು. ಆದರೂ ಅಗತ್ಯ ರನ್‌ರೇಟ್‌ ಒತ್ತಡ ಆರ್‌ಸಿಬಿಯನ್ನು ಕಾಡುತ್ತಲೇ ಇತ್ತು. 32 ಎಸೆತಗಳಲ್ಲಿ 50 ರನ್‌ ಪೂರೈಸಿ ಡಬ್ಲ್ಯುಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಸ್ಮತಿ, 43 ಎಸೆತದಲ್ಲಿ 10 ಬೌಂಡರಿ, 3 ಸಿಕ್ಸರ್‌ನೊಂದಿಗೆ 74 ರನ್‌ ಗಳಿಸಿ ಔಟಾದರು. ಬಳಿಕ ರಿಚಾ ಘೋಷ್‌ 2 ಸಿಕ್ಸರ್‌ ಸಿಡಿಸಿ ತಂಡ ಗೆಲುವಿನ ಆಸೆ ಕಳೆದುಕೊಳ್ಳದಂತೆ ಮಾಡಿದರೂ, 19 ರನ್‌ ಗಳಿಸಿ ಅವರು ನಿರ್ಗಮಿಸುತ್ತಿದ್ದಂತೆ ತಂಡ ಸೋಲಿನತ್ತ ಮುಖ ಮಾಡಿತು. 9 ವಿಕೆಟ್‌ ನಷ್ಟಕ್ಕೆ 169 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಕೊನೆ 5 ಓವರಲ್ಲಿ ಡೆಲ್ಲಿಗೆ 70 ರನ್‌ ಬಿಟ್ಟುಕೊಟ್ಟಿದ್ದ ಆರ್‌ಸಿಬಿ, ತನ್ನ ಇನ್ನಿಂಗ್ಸ್‌ನ ಕೊನೆಯ 5 ಓವರಲ್ಲಿ ಕೇವಲ 2 ಬೌಂಡರಿಯೊಂದಿಗೆ 31 ರನ್‌ ಗಳಿಸಿ 7 ವಿಕೆಟ್‌ ಕಳೆದುಕೊಂಡಿದ್ದೇ ಸೋಲಿಗೆ ಕಾರಣ. ಡೆಲ್ಲಿ ಸ್ಫೋಟಕ ಬ್ಯಾಟಿಂಗ್‌: ಟಾಸ್‌ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟ ಡೆಲ್ಲಿ ತನ್ನ ನಾಯಕಿ ಮೆಗ್ ಲ್ಯಾನಿಂಗ್‌ ವಿಕೆಟನ್ನು ಬೇಗನೆ ಕಳೆದುಕೊಂಡರೂ, ಶಫಾಲಿ ವರ್ಮಾ ಹಾಗೂ ಅಲೈಸ್‌ ಕ್ಯಾಪ್ಸಿ ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದರು. ಇವರಿಬ್ಬರ ಸ್ಫೋಟಕ ಆಟದ ಪರಿಣಾಮ, ಸ್ಮೃತಿ ಒಟ್ಟು 7 ಬೌಲರ್‌ಗಳನ್ನು ದಾಳಿಗಿಳಿಸಬೇಕಾಯಿತು. ಶಫಾಲಿ 31 ಎಸೆತದಲ್ಲಿ 50 ರನ್‌ ಸಿಡಿಸಿ, ಸತತ 2ನೇ ಫಿಫ್ಟಿ ದಾಖಲಿಸಿದರು. ಕ್ಯಾಪ್ಸಿ 46 ರನ್‌ ಸಿಡಿಸಿದರು. ಕೊನೆ 5 ಓವರಲ್ಲಿ 70 ರನ್‌: ಕೊನೆಯ 5 ಓವರಲ್ಲಿ ಡೆಲ್ಲಿ ಅಬ್ಬರಿಸಿತು. ಮಾರಿಯಾನೆ ಕಾಪ್‌ ಹಾಗೂ ಜೆಸ್‌ ಜೊನಾನ್ಸನ್‌ ಸೇರಿ 70 ರನ್‌ ಸಿಡಿಸಿದರು. ಕಾಪ್‌ 16 ಎಸೆತದಲ್ಲಿ 32 ರನ್‌ ಚಚ್ಚಿದರೆ, ಜೊನಾನ್ಸನ್‌ 16 ಎಸೆತದಲ್ಲಿ 36 ರನ್‌ ಪೇರಿಸಿದರು. ಇವರಿಬ್ಬರ ಆಟದಿಂದಾಗಿ ಡೆಲ್ಲಿ 190 ರನ್‌ಗಳ ಗಡಿ ದಾಟಿತು. ಆರ್‌ಸಿಬಿಯ ಎಲ್ಲಾ ಬೌಲರ್‌ಗಳು ಓವರ್‌ಗೆ 7 ರನ್‌ಗಿಂತ ಹೆಚ್ಚಿನ ಎಕಾನಮಿ ರೇಟ್‌ನಲ್ಲಿ ರನ್‌ ಬಿಟ್ಟುಕೊಟ್ಟರು.

ಸ್ಕೋರ್‌: ಡೆಲ್ಲಿ 20 ಓವರಲ್ಲಿ 194/5 (ಶಫಾಲಿ 50, ಕ್ಯಾಪ್ಸಿ 46, ಡಿವೈನ್‌ 2-23), ಆರ್‌ಸಿಬಿ 20 ಓವರಲ್ಲಿ 169/9 (ಸ್ಮೃತಿ 74, ಮೇಘನಾ 36, ಜೊನಾನ್ಸನ್‌ 3-21)