ನವದೆಹಲಿ: ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಒಂದೇ ದಿನ ಬರೋಬ್ಬರಿ 32000 ಕೋಟಿ ರು. ವಹಿವಾಟು ನಡೆದಿದೆ. ಮಂಗಳವಾರ ಮಧ್ಯಾಹ್ನ ರಾಜಸ್ಥಾನ ರಾಯಲ್ಸ್‌ ತಂಡ ಮಾರಾಟವಾದರೆ, ಸಂಜೆ ರಾಯಲ್‌ ಚಾಲೆಂಜರ್ಸ್‌ ತಂಡದ ಮಾರಾಟ ಅಂತಿಮಗೊಂಡಿತು.

ಭಾರತದ ಆದಿತ್ಯಾ ಬಿರ್ಲಾ ಸಮೂಹ, ಟೈಮ್ಸ್‌ ಆಫ್‌ ಇಂಡಿಯಾ(ಟಿಒಐ) ಸಮೂಹ, ಅಮೆರಿಕದ ಬೋಲ್ಟ್‌ ವೆಂಚರ್ಸ್‌ ಹಾಗೂ ಬ್ಲ್ಯಾಕ್‌ಸ್ಟೋನ್‌ ಸಂಸ್ಥೆಗಳು 1.78 ಬಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು ₹16706 ಕೋಟಿ)ಗೆ ಆರ್‌ಸಿಬಿ ಫ್ರಾಂಚೈಸಿಯನ್ನು ಖರೀದಿಸಿವೆ. ಬ್ರಿಟನ್‌ನ ಮದ್ಯ ಮಾರಾಟ ಸಂಸ್ಥೆಯಾದ ಡಿಯಾಜಿಯೋದ ಅಂಗಸಂಸ್ಥೆಯಾದ ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ (ಯುಎಸ್‌ಎಲ್‌) ಜೊತೆಗೆ ಬಿರ್ಲಾ ಹಾಗೂ ಟಿಒಐ ನೇತೃತ್ವದ ತಂಡ ಒಪ್ಪಂದಕ್ಕೆ ಸಹಿ ಹಾಕಿತು.

ಆರ್‌ಸಿಬಿಯ ಪುರುಷ ಹಾಗೂ ಮಹಿಳಾ ತಂಡಗಳೆರಡೂ ಈಗ ಸಂಪೂರ್ಣವಾಗಿ ಹೊಸ ಮಾಲಿಕರ ಪಾಲಾಗಿವೆ. ಆದರೆ, ಮೇಲ್ಕಂಡ ನಾಲ್ಕು ಸಂಸ್ಥೆಗಳು ಫ್ರಾಂಚೈಸಿಯಲ್ಲಿ ಎಷ್ಟೆಷ್ಟು ಹೂಡಿಕೆ ಮಾಡಿವೆ, ಎಷ್ಟೆಷ್ಟು ಪಾಲು ಹೊಂದಿವೆ ಎನ್ನುವುದರ ವಿವರ ಬಹಿರಂಗಗೊಂಡಿಲ್ಲ.


ಹೊಸ ಮಾಲಿಕತ್ವ ರಚನೆಯಲ್ಲಿ ಆದಿತ್ಯ ಬಿರ್ಲಾ ಸಮೂಹದ ನಿರ್ದೇಶಕ ಆರ್ಯಮನ್‌ ಬಿರ್ಲಾ ಫ್ರಾಂಚೈಸಿಯ ಅಧ್ಯಕ್ಷರಾಗಿರಲಿದ್ದು, ಟಿಒಐನ ಸತ್ಯನ್‌ ಗಜ್ವಾನಿ ಉಪಾಧ್ಯಕ್ಷರಾಗಿರಲಿದ್ದಾರೆ. ಈ ತಂಡದಲ್ಲಿ ಬೋಲ್ಟ್‌ ವೆಂಚರ್ಸ್‌ನ ಡೇವಿಡ್‌ ಬ್ಲಿಟ್ಜರ್‌ ಹಾಗೂ ಬ್ಲ್ಯಾಕ್‌ಸ್ಟೋನ್‌ನ ವಿರಲ್‌ ಪಟೇಲ್‌ ಕೂಡ ಇದ್ದಾರೆ.

ಈ ಒಪ್ಪಂದಕ್ಕೆ ಬಿಸಿಸಿಐ ಹಾಗೂ ಭಾರತೀಯ ಸ್ಪರ್ಧಾ ಆಯೋಗದ ಒಪ್ಪಿಗೆ ಸಿಕ್ಕ ಬಳಿಕ ಫ್ರಾಂಚೈಸಿಯ ಮಾರಾಟದ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ.

2008ರಲ್ಲಿ ಮಲ್ಯ ಖರೀದಿಸಿದ್ದ ತಂಡ

ಐಪಿಎಲ್‌ ಸ್ಥಾಪನೆಯಾದಾಗ ಆರ್‌ಸಿಬಿ ತಂಡವನ್ನು ಮದ್ಯದ ದೊರೆ ವಿಜಯ್‌ ಮಲ್ಯ 111.6 ಮಿಲಿಯನ್‌ ಡಾಲರ್‌ಗೆ ಖರೀದಿಸಿದ್ದರು. ಅಂದರೆ ಅಂದಿನ ಡಾಲರ್‌ ಮೌಲ್ಯದ ಪ್ರಕಾರ ಅಂದಾಜು ₹480 ಕೋಟಿ. 2016 ಮಲ್ಯ ತಂಡದ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ ಬಳಿಕ, ಫ್ರಾಂಚೈಸಿಯನ್ನು ಡಿಯಾಜಿಯೋ ಸಂಸ್ಥೆ ನಿರ್ವಹಿಸುತ್ತಿತ್ತು.

- ಟೀಮ್‌ ಬಿರ್ಲಾಗೆ ಆರ್‌ಸಿಬಿ, ಪುರುಷ, ಮಹಿಳಾ ತಂಡ ಮಾರಾಟ

- 19 ವರ್ಷದಲ್ಲಿ ಆರ್‌ಸಿಬಿ ಫ್ರಾಂಚೈಸಿ ಮೌಲ್ಯ 1500 ಪಟ್ಟು ಏರಿಕೆ

- 2008ರಲ್ಲಿ ₹480 ಕೋಟಿಗೆ ಆರ್‌ಸಿಬಿ ಖರೀದಿಸಿದ್ದ ವಿಜಯ್‌ ಮಲ್ಯ

- 2016ರಿಂದ ಡಿಯಾಜಿಯೋ ಸಂಸ್ಥೆಯಿಂದ ಫ್ರಾಂಚೈಸಿ ನಿರ್ವಹಣೆ

- ಐಪಿಎಲ್‌ ತಂಡಗಳಲ್ಲೇ ಅತಿ ಜನಪ್ರಿಯ ಹಿರಿಮೆ ಹೊಂದಿದ್ದ ತಂಡ

- ಇದೀಗ ಮಾರಾಟದ ಬಳಿ ಅತಿ ದುಬಾರಿ ತಂಡವೆನಿಸಿದ ಆರ್‌ಸಿಬಿ

- ಫ್ರಾಂಚೈಸಿಗೆ ಆರ್ಯಮನ್‌ ಬಿರ್ಲಾ ಅಧ್ಯಕ್ಷ, ಸತ್ಯನ್‌ ಉಪಾಧ್ಯಕ್ಷ

- ಎರಡೂ ಟೀಂ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಆರ್‌ಸಿಬಿ ಫ್ರಾಂಚೈಸಿ ಸೇಲ್‌

2018ರಲ್ಲಿ ರಾಜಸ್ಥಾನ ತಂಡದಲ್ಲಿದ್ದ

ಕೋಟ್ಯಧಿಪತಿ ಕುಮಾರ್‌ ಮಂಗಳಂ ಬಿರ್ಲಾ ಅವರ ಪುತ್ರ ಆರ್ಯಮನ್‌ ಒಬ್ಬ ಕ್ರಿಕೆಟಿಗ. 2018-19ರಲ್ಲಿ ಮಧ್ಯಪ್ರದೇಶ ಪರ ದೇಸಿ ಕ್ರಿಕೆಟ್‌ ಆಡಿದ್ದಾರೆ. 4 ಪ್ರಥಮ ದರ್ಜೆ, 9 ಲಿಸ್ಟ್‌ ‘ಎ’ ಪಂದ್ಯಗಳನ್ನಾಡಿದ್ದಾರೆ. 2018ರ ಐಪಿಎಲ್‌ನಲ್ಲಿ ಅವರು ರಾಜಸ್ಥಾನ ರಾಯಲ್ಸ್‌ ತಂಡದಲ್ಲಿದ್ದರು. ಆದರೆ ಆಡುವ ಅವಕಾಶ ಸಿಕ್ಕಿರಲಿಲ್ಲ.

₹320 ಕೋಟಿಯ ಆರ್‌ಆರ್‌ ₹15297 ಕೋಟಿಗೆ ಸೇಲ್‌! 

ನವದೆಹಲಿ: ಐಪಿಎಲ್‌ನ ರಾಜಸ್ಥಾನ ರಾಯಲ್ಸ್‌ ತಂಡವನ್ನು ಭಾರತೀಯ ಮೂಲದ ಅಮೆರಿಕ ಟೆಕ್‌ ಉದ್ಯಮಿ ಕಲ್‌ ಸೋಮಾನಿ ಅವರ ನೇತೃತ್ವದ ತಂಡ ಬರೋಬ್ಬರಿ 1.6 ಬಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು ₹15297.45 ಕೋಟಿ)ಗೆ ಖರೀದಿ ಮಾಡಿದೆ. ಇದರೊಂದಿಗೆ ರಾಜಸ್ಥಾನ ಐಪಿಎಲ್‌ನ ಎರಡನೇ ಅತಿ ದುಬಾರಿ ತಂಡ ಎನ್ನುವ ಹಿರಿಮೆ ಗಳಿಸಿದೆ.

2021ರಲ್ಲಿ ಬಿಸಿಸಿಐ, 2 ಹೊಸ ಐಪಿಎಲ್‌ ತಂಡಗಳನ್ನು ಪರಿಚಯಿಸಿದಾಗ ಲಖನೌ ಸೂಪರ್‌ ಜೈಂಟ್ಸ್‌ ಫ್ರಾಂಚೈಸಿಯನ್ನು ಉದ್ಯಮಿ ಸಂಜೀವ್‌ ಗೋಯೆಂಕಾ ₹7090ಗೆ ಖರೀದಿಸಿದ್ದರು. ಈ ವರೆಗೂ ಲಖನೌ, ಐಪಿಎಲ್‌ನ ಅತಿದುಬಾರಿ ತಂಡ ಎನಿಸಿತ್ತು. ಇದೀಗ ಆ ಹಿರಿಮೆ ಆರ್‌ಸಿಬಿಗೆ ಸಂದಿದೆ.

ಇದೀಗ ರಾಜಸ್ಥಾನ ರಾಯಲ್ಸ್‌ ತಂಡದಲ್ಲಿ ಶೇ.100ರಷ್ಟು ಪಾಲನ್ನು ಸೋಮಾನಿ ನೇತೃತ್ವದ ತಂಡ ಖರೀದಿಸಿದೆ. ಈ ತಂಡದಲ್ಲಿ ಅಮೆರಿಕದ ವಾಲ್‌ಮಾರ್ಟ್‌ ಕುಟುಂಬಕ್ಕೆ ಸೇರಿದ ಉದ್ಯಮಿ ರಾಬ್‌ ವಾಲ್ಟನ್‌, ಅಮೆರಿಕದ ಎನ್‌ಎಫ್‌ಎಲ್‌ನಲ್ಲಿ ಡೆಟ್ರಾಯ್ಟ್‌ ಲಯನ್ಸ್‌ ತಂಡದ ಮಾಲಿಕರಾಗಿರುವ ಶೆಲಾ ಫೋರ್ಡ್‌ ಹ್ಯಾಂಪ್‌ ಇದ್ದಾರೆ. ಶೆಲಾ, ಜಗತ್ತಿನ ಪ್ರಸಿದ್ಧ ಆಟೋಮೊಬೈಲ್‌ ತಯಾರಕ ಸಂಸ್ಥೆಯಾದ ಫೋರ್ಡ್‌ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ರಾಜಸ್ಥಾನ ರಾಯಲ್ಸ್‌ ತಂಡದ ಮಾರಾಟ ಪ್ರಕ್ರಿಯೆ ಕಳೆದ 6 ತಿಂಗಳಿಂದ ಚಾಲ್ತಿಯಲ್ಲಿತ್ತು. 2026ರ ಐಪಿಎಲ್‌ ಮುಕ್ತಾಯಗೊಂಡ ಬಳಿಕ ಹೊಸ ಮಾಲಿಕರಿಗೆ ಫ್ರಾಂಚೈಸಿ ಹಸ್ತಾಂತರಗೊಳ್ಳಲಿದೆ ಎಂದು ತಿಳಿದುಬಂದಿದೆ.

ಫ್ರಾಂಚೈಸಿ ಮೌಲ್ಯ 23 ಪಟ್ಟು ಹೆಚ್ಚಳ!

2008ರಲ್ಲಿ ಮೊದಲ ಬಾರಿಗೆ ಐಪಿಎಲ್‌ ತಂಡಗಳ ಮಾರಾಟ ನಡೆದಾಗ, ಫ್ರಾಂಚೈಸಿಯನ್ನು 67 ಮಿಲಿಯನ್‌ ಡಾಲರ್‌ (ಅಂದಿನ ರುಪಾಯಿ ಮೌಲ್ಯದಲ್ಲಿ 320 ಕೋಟಿ)ಗೆ ಬಿಡ್‌ ಆಗಿತ್ತು. 8 ಫ್ರಾಂಚೈಸಿಗಳ ಪೈಕಿ ಅತಿಕಡಿಮೆ ಮೊತ್ತಕ್ಕೆ ಬಿಕರಿಯಾಗಿದ್ದ ತಂಡ ರಾಜಸ್ಥಾನ ರಾಯಲ್ಸ್‌. ಬ್ರಿಟನ್‌ ಮೂಲದ ಉದ್ಯಮಿ ಮನೋಜ್‌ ಬದಾಲೆ, ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್‌ ಕುಂದ್ರಾ ಹಾಗೂ ಇನ್ನಿತರರು ಸೇರಿ ತಂಡ ಖರೀದಿಸಿದ್ದರು. ಇದೀಗ ತಂಡದ ಮೌಲ್ಯ ಬರೋಬ್ಬರಿ 22.88 ಪಟ್ಟು ಅಥವಾ ಶೇ.2288 ಹೆಚ್ಚಾಗಿದೆ.

ಆರ್‌ಆರ್‌ ಹಾದಿ

- 2008ರಲ್ಲಿ ₹480 ಕೋಟಿಗೆ ಆರ್‌ಸಿಬಿ ಖರೀದಿಸಿದ್ದ ವಿಜಯ್‌ ಮಲ್ಯ

2008ರಲ್ಲಿ 320 ಕೋಟಿ ರು.ಗೆ ರಾಜಸ್ಥಾನ್‌ ರಾಯಲ್ಸ್‌ ತಂಡ ಮಾರಾಟ

ಮನೋಜ್‌ ಬದಾಲೆ, ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾರಿಂದ ಖರೀದಿ

ಮೊದಲ ವರ್ಷವೇ ಶೇನ್‌ ವಾರ್ನ್‌ ನೇತೃತ್ವದಲ್ಲಿ ಐಪಿಎಲ್‌ ಚಾಂಪಿಯನ್

2013-15ರ ಅವಧಿಯಲ್ಲಿ ಸ್ಪಾಟ್‌ ಫಿಕ್ಸಿಂಗ್‌ ಆರೋಪ. ಕುಂದ್ರಾಗೆ ನಿಷೇಧ

2024ರಲ್ಲಿ ರಾಯಲ್ಸ್‌ ಸ್ಫೋರ್ಟ್ಸ್‌ ತಂಡದಿಂದ ಆರ್‌ಆರ್‌ ಫ್ರಾಂಚೈಸಿ ಖರೀದಿ