ಸಾರಾಂಶ
ಬೆಂಗಳೂರು: ಭಾರತ-ಪಾಕಿಸ್ತಾನ ನಡುವಿನ ಯುದ್ಧ ಪರಿಸ್ಥಿತಿಯಿಂದಾಗಿ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಐಪಿಎಲ್, ಶನಿವಾರ ಆರ್‌ಸಿಬಿ-ಕೆಕೆಆರ್ ಪಂದ್ಯದೊಂದಿಗೆ ಪುನಾರಂಭಗೊಳ್ಳಲಿದೆ. ಭಯದ ವಾತಾವರಣ ಸೃಷ್ಟಿಯಾಗಿದ್ದ ಕಾರಣ ತಮ್ಮ ತಮ್ಮ ದೇಶಗಳಿಗೆ ಹಿಂದಿರುಗಿದ್ದ ವಿದೇಶಿ ಆಟಗಾರರ ಪೈಕಿ ಬಹುತೇಕರು ಭಾರತಕ್ಕೆ ವಾಪಸಾಗಿದ್ದಾರೆ. ಅದರಲ್ಲೂ ಆರ್‌ಸಿಬಿ ತಂಡದ ಆಟಗಾರರೆಲ್ಲರೂ ಮರಳಿದ್ದು, ಪ್ಲೇ-ಆಫ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ತಂಡಕ್ಕೆ ಯಾವುದೇ ಆಟಗಾರನ ಅನುಪಸ್ಥಿತಿ ಎದುರಾಗುವ ಸಾಧ್ಯತೆ ಕಂಡುಬರುತ್ತಿಲ್ಲ.
ಇಂಗ್ಲೆಂಡ್ ಆಟಗಾರರಾದ ಫಿಲ್ ಸಾಲ್ಟ್, ಜೇಕಬ್ ಬೆತೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಆಸ್ಟ್ರೇಲಿಯಾದ ಟಿಮ್ ಡೇವಿಡ್, ವೆಸ್ಟ್‌ಇಂಡೀಸ್‌ನ ರೊಮಾರಿಯೋ ಶೆಫರ್ಡ್, ದ.ಆಫ್ರಿಕಾದ ಲುಂಗಿ ಎನ್‌ಗಿಡಿ ಬೆಂಗಳೂರಿಗೆ ಬಂದಿಳಿದಿದ್ದು, ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ತಂಡ ಸದ್ಯ 8 ಗೆಲುವುಗಳೊಂದಿಗೆ 16 ಅಂಕ ಗಳಿಸಿದ್ದು, ಇನ್ನೊಂದು ಗೆಲುವು ತಂಡವನ್ನು ಪ್ಲೇ-ಆಫ್‌ಗೇರಿಸಲಿದೆ.
ಸಾಲ್ಟ್, ಡೇವಿಡ್, ಲಿವಿಂಗ್‌ಸ್ಟೋನ್, ಶೆಫರ್ಡ್ ಟೂರ್ನಿಯಲ್ಲಿ ಆರ್‌ಸಿಬಿ ಆಡುವ ವರೆಗೂ ಇರಲಿದ್ದಾರೆ. ಬೆತೆಲ್ ಮಾತ್ರ 2 ಪಂದ್ಯಗಳನ್ನು ಆಡಿ ಇಂಗ್ಲೆಂಡ್‌ಗೆ ವಾಪಸಾಗಲಿದ್ದಾರೆ. ಮೇ 29ರಿಂದ ವಿಂಡೀಸ್ ವಿರುದ್ಧ ಆರಂಭಗೊಳ್ಳಲಿರುವ ಏಕದಿನ ಸರಣಿಗೆ ಬೆತೆಲ್ ಆಯ್ಕೆಯಾಗಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಆಯ್ಕೆಯಾಗಿರುವ ಎನ್‌ಗಿಡಿ ಕೂಡ ಮೇ 26ರ ವೇಳೆಗೆ ತಂಡ ತೊರೆಯಲಿದ್ದಾರೆ.
ಇನ್ನು, ಅನಾರೋಗ್ಯ ಕಾರಣ ಕೆಲ ಪಂದ್ಯಗಳಿಗೆ ಗೈರಾಗಿದ್ದ ಫಿಲ್ ಸಾಲ್ಟ್ ಸಂಪೂರ್ಣವಾಗಿ ಗುಣಮುಖರಾಗಿದ್ದು, ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನೆಟ್ಸ್ ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ ಜೊತೆ ಬ್ಯಾಟ್ ಮಾಡಿದರು. ಅತ್ಯುತ್ತಮ ಲಯದಲ್ಲಿರುವ ಡೇವಿಡ್, ನೆಟ್ಸ್‌ನಲ್ಲಿ ಬ್ಯಾಟ್ ಬೀಸುತ್ತಿದ್ದ ರೀತಿ ಮೈದಾನದ ಮತ್ತೊಂದು ಭಾಗದಲ್ಲಿ ಅಭ್ಯಾಸ ನಡೆಸುತ್ತಿದ್ದ ಕೆಕೆಆರ್ ಆಟಗಾರರಲ್ಲಿ ನಡುಕ ಹುಟ್ಟಿಸಿದ್ದು ಸುಳ್ಳಲ್ಲ. ಜೋಶ್ ಬರುವ ನಿರೀಕ್ಷೆ: ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಕೂಡ ಭಾರತಕ್ಕೆ ವಾಪಸಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸಣ್ಣ ಪ್ರಮಾಣದ ಗಾಯದ ಕಾರಣ ಒಂದು ಪಂದ್ಯವನ್ನು ತಪ್ಪಿಸಿಕೊಂಡಿದ್ದ ಹೇಜಲ್‌ವುಡ್ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆಯೇ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಅಭ್ಯಾಸ ಆರಂಭಿಸಿದ
ನಾಯಕ ಪಾಟೀದಾರ್
ಕೈ ಬೆರಳಿನ ಗಾಯಕ್ಕೆ ತುತ್ತಾಗಿದ್ದ ನಾಯಕ ರಜತ್ ಪಾಟೀದಾರ್ ಕನಿಷ್ಠ 3 ಪಂದ್ಯಗಳಿಂದ ಹೊರಬೀಳುವ ಆತಂಕದಲ್ಲಿದ್ದರು. ಆದರೆ ಐಪಿಎಲ್ ಸ್ಥಗಿತಗೊಂಡ ಕಾರಣ ಅವರಿಗೆ ಚೇತರಿಸಿಕೊಳ್ಳಲು ಸಮಯ ದೊರೆಯಿತು. ಗುರುವಾರ ರಜತ್ ನೆಟ್ಸ್‌ನಲ್ಲಿ ಬಹಳ ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಆದರೂ, ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅವರು ಆಡುವ ಬಗ್ಗೆ ತಂಡದ ವೈದ್ಯರು ಶನಿವಾರ ಬೆಳಗ್ಗೆ ನಿರ್ಧರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ರಜತ್ ಹೊರಗುಳಿದರೆ, ವಿಕೆಟ್ ಕೀಪರ್ ಜಿತೇಶ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.