ಸಾರಾಂಶ
ನವದೆಹಲಿ: ಐಸಿಸಿ ಟಿ20 ವಿಶ್ವಕಪ್‌ನ ಭಾರತ ತಂಡಕ್ಕೆ ಯುವ ಬ್ಯಾಟರ್ ರಿಂಕು ಸಿಂಗ್ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದ ಅವರ ತಂದೆ ಖಾನ್‌ಚಂದ್ರ ಸಿಂಗ್, ‘ರಿಂಕು ಆಯ್ಕೆಯಾದರೆ ಸಂಭ್ರಮಿಸಲು ಪಟಾಕಿ ಹಾಗೂ ಸ್ವೀಟ್ ತಂದು ಕಾಯುತ್ತಿದ್ದೆವು’ ಎಂದು ತಿಳಿಸಿದ್ದಾರೆ.
ಮಂಗಳವಾರ ಭಾರತ ತಂಡ ಪ್ರಕಟಗೊಂಡಿದ್ದು, ರಿಂಕು ಮೀಸಲು ಆಟಗಾರರ ಪಟ್ಟಿಯಲ್ಲಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಂಕು ತಂದೆ, ‘ರಿಂಕು ಮುಖ್ಯ ತಂಡಕ್ಕೆ ಆಯ್ಕೆಯಾಗುವ ಭರವಸೆ ಇತ್ತು. ಆದರೆ ಸುದ್ದಿ ನೋಡಿ ಆಘಾತವಾಯಿತು. ರಿಂಕುರ ಹೃದಯವೂ ಒಡೆದು ಹೋಗಿದೆ.
ಆದರೆ ಮೀಸಲು ಆಟಗಾರನಾಗಿ ತಂಡದ ಜೊತೆಗಿರುವುದಕ್ಕೆ ಸಮಾಧಾನವಿದೆ’ ಎಂದು ತಿಳಿಸಿದ್ದಾರೆ.
ಥಾಮಸ್ ಕಪ್: ಇಂಡೋನೇಷ್ಯಾ ವಿರುದ್ಧ ಭಾರತಕ್ಕೆ 1-4 ಸೋಲು
ಚೆಂಗ್ಡು(ಚೀನಾ): ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಪುರುಷರ ತಂಡ ‘ಸಿ’ ಗುಂಪಿನ ತನ್ನ 3ನೇ ಪಂದ್ಯದಲ್ಲಿ ಇಂಡೋನೇಷ್ಯಾ ವಿರುದ್ಧ 1-4 ಅಂತರದಲ್ಲಿ ಸೋಲನುಭವಿಸಿತು. ಕ್ರಮವಾಗಿ ಥಾಯ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯಗಳನ್ನು ಗೆದ್ದು ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದ ಹಾಲಿ ಚಾಂಪಿಯನ್ ಭಾರತ ಬುಧವಾರ ಕಳೆದ ಬಾರಿ ರನ್ನರ್-ಅಪ್ ತಂಡದ ವಿರುದ್ಧ ಪರಾಭವಗೊಂಡಿತು.
ಮೊದಲ ಸಿಂಗಲ್ಸ್‌ನಲ್ಲಿ ಎಚ್.ಎಸ್.ಪ್ರಣಯ್ ಗೆದ್ದು ಭಾರತಕ್ಕೆ ಮುನ್ನಡೆ ಒದಗಿಸಿದರೂ, ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್ ಶೆಟ್ಟಿಗೆ ಸೋಲು ಎದುರಾಯಿತು. 2ನೇ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌ಗೆ ಸೋಲು ಎದುರಾದರೆ, 2ನೇ ಡಬಲ್ಸ್‌ನಲ್ಲಿ ಅರ್ಜುನ್-ಧ್ರುವ್ ಕಪಿಲಾ ಕೂಡಾ ಪರಾಭವಗೊಂಡರು. ಕೊನೆ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್ ಕೂಡಾ ಸೋತರು.
ಇನ್ನು, ಉಬರ್ ಕಪ್‌ನಲ್ಲಿ ಭಾರತ ಮಹಿಳಾ ತಂಡ ಗುರುವಾರ ಜಪಾನ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಸೆಣಸಾಡಲಿದೆ. ಪುರುಷರ ತಂಡಕ್ಕೆ ಚೀನಾ ಸವಾಲು ಎದುರಾಗಲಿದೆ.