ಸಾರಾಂಶ
ಅಡಿಲೇಡ್ ತಲುಪುತ್ತಿದ್ದಂತೆ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ. ನೆಟ್ಸ್‌ನಲ್ಲಿ 4 ಗಂಟೆಗಳ ಕಾಲ ಬೆವರಿಳಿಸಿದ ಆಟಗಾರರು. ಎಲ್ಲರಿಗಿಂತ ಹೆಚ್ಚು ಹೊತ್ತು ನೆಟ್ಸ್‌ನಲ್ಲಿ ಬ್ಯಾಟ್ ಮಾಡಿದ ನಾಯಕ ರೋಹಿತ್. ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಗುರಿ.
ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್ ಆಡಲು ಮಂಗಳವಾರ ಅಡಿಲೇಡ್‌ಗೆ ಬಂದಿಳಿದ ಭಾರತ ತಂಡ, ಸಮಯ ವ್ಯರ್ಥ ಮಾಡದೆ ನೆಟ್ಸ್ ಅಭ್ಯಾಸ ಆರಂಭಿಸಿತು. ಕ್ಯಾನ್‌ಬೆರ್ರಾದಲ್ಲಿ ನಡೆದ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಗೆಲುವು ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ, ಮಂಗಳವಾರ ಕಠಿಣ ಅಭ್ಯಾಸ ನಡೆಸಿತು. ಪ್ರಮುಖವಾಗಿ ನಾಯಕ ರೋಹಿತ್ ಶರ್ಮಾ, 4 ಗಂಟೆಗೂ ಹೆಚ್ಚು ಕಾಲ ನೆಟ್ಸ್‌ನಲ್ಲಿ ಬೆವರಿಳಿಸಿದರು.
ಎಲ್ಲರಿಗಿಂತ 1 ಗಂಟೆ ಮೊದಲೇ ನೆಟ್ಸ್‌ಗೆ ಆಗಮಿಸಿದ ರೋಹಿತ್, ನಿರಂತರವಾಗಿ ಬ್ಯಾಟ್ ಮಾಡಿದರು. ಭಾರತ 4 ನೆಟ್ಸ್‌ಗಳಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿತು. ಮೊದಲ ನೆಟ್ಸ್‌ನಲ್ಲಿ ಆರಂಭಿಕರಾದ ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್ ಆಡಿದರೆ, 2ನೇ ನೆಟ್ಸ್‌ನಲ್ಲಿ ಶುಭ್‌ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟ್ ಮಾಡಿದರು.3ನೇ ನೆಟ್ಸ್‌ನಲ್ಲಿ ರೋಹಿತ್ ಹಾಗೂ ರಿಷಭ್ ಪಂತ್, 4ನೇ ನೆಟ್ಸ್‌ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ ಆಡಿದರು. ಪಿಂಕ್ ಬಾಲ್ ಪಂದ್ಯದಲ್ಲಿ ಭಾರತದ 1-8ರ ವರೆಗಿನ ಬ್ಯಾಟಿಂಗ್ ಕ್ರಮಾಂಕ ಇದೇ ಕ್ರಮದಲ್ಲಿ ಇರಲಿದೆಯೇ ಎನ್ನುವ ಕುತೂಹಲ ಮೂಡಿತು. ಆಕಾಶ್‌ದೀಪ್, ಮುಕೇಶ್ ಕುಮಾರ್, ಹರ್ಷಿತ್ ರಾಣಾ ತಮ್ಮ ವೇಗದ ಬೌಲಿಂಗ್‌ನಿಂದ ಬ್ಯಾಟರ್‌ಗಳಿಗೆ ಸವಾಲೆಸೆದರು.
ಡಿ.6ರಿಂದ ಭಾರತ-ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಹಗಲು-ರಾತ್ರಿ ಮಾದರಿಯಲ್ಲಿ ನಡೆಯಲಿದೆ.