ಸಾರಾಂಶ
ಧರ್ಮಶಾಲಾ: ಆರಂಭದಲ್ಲಿ ಕುಲ್ದೀಪ್ ಯಾದವ್, ಕೊನೆಯಲ್ಲಿ ಆರ್.ಅಶ್ವಿನ್ ಪ್ರದರ್ಶಿಸಿದ ಸ್ಪಿನ್ ಜಾದೂ ಹಾಗೂ ಭಾರತದ ಬ್ಯಾಟರ್‌ಗಳ ಸ್ಫೋಟಕ ಆಟದ ಮುಂದೆ ಇಂಗ್ಲೆಂಡ್ ಅಕ್ಷರಶಃ ತತ್ತರಿಸಿದೆ.
ಗುರುವಾರ ಧರ್ಮಶಾಲಾ ಕ್ರೀಡಾಂಗಣದಲ್ಲಿ ಆರಂಭಗೊಂಡ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ದಿನವೇ ಅಧಿಪತ್ಯ ಸಾಧಿಸಿದೆ.
ಬ್ಯಾಟಿಂಗ್‌ಗೆ ಅನುಕೂಲಕರ ಎನಿಸಿದ್ದ ಪಿಚ್‌ನಲ್ಲೂ ರನ್ ಗಳಿಸಲು ತಿಣುಕಾಡಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಕಲೆಹಾಕಿದ್ದು 218 ರನ್. ಸ್ಪಿನ್ನರ್‌ಗಳನ್ನು ಬಳಸಿ ಭಾರತವನ್ನೂ ಸುಲಭದಲ್ಲಿ ಕಟ್ಟಿಹಾಕುತ್ತೇವೆಂಬ ಇಂಗ್ಲೆಂಡ್‌ನ ಕನಸಿಗೆ ಟೀಂ ಇಂಡಿಯಾ ಬ್ಯಾಟರ್ಸ್ ತಣ್ಣೀರೆರಚಿದ್ದು, ಮೊದಲ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 135 ರನ್ ಕಲೆಹಾಕಿದ್ದಾರೆ. ತಂಡ ಇನ್ನು 83 ರನ್ ಹಿನ್ನಡೆಯಲ್ಲಿದೆ.
ಸ್ಪಿನ್ ಮ್ಯಾಜಿಕ್: ಧರ್ಮಶಾಲಾ ಪಿಚ್ ಆರಂಭದಲ್ಲಿ ಬ್ಯಾಟರ್ಸ್‌ಗೆ ನೆರವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಬೆನ್ ಸ್ಟೋಕ್ಸ್‌ರ ಲೆಕ್ಕಾಚಾರ ಸರಿಯಿದ್ದರೂ ಭಾರತದ ಯೋಜನೆ ಬೇರೆಯೇ ಇತ್ತು.
ಮೊದಲ ಅವಧಿಯಲ್ಲಿ ವೇಗಿಗಳಾದ ಬೂಮ್ರಾ-ಸಿರಾಜ್ ಇಂಗ್ಲೆಂಡ್ ಬ್ಯಾಟರ್ಸ್ ಮೇಲೆ ನಿರಂತರ ಒತ್ತಡ ಹೇರಿದ್ದರಿಂದ ಬಳಿಕ ಪ್ರವಾಸಿ ತಂಡ ರನ್ ವೇಗ ಹೆಚ್ಚಿಸುವ ಅನಿವಾರ್ಯತೆಗೆ ಒಳಗಾಯಿತು.
ಇದರ ಲಾಭ ಪಡೆದಿದ್ದು ಭಾರತೀಯ ಸ್ಪಿನ್ನರ್ಸ್. ಊಟದ ವಿರಾಮಕ್ಕೂ ಮುನ್ನ ಕೊನೆ ಓವರಲ್ಲಿ ಓಲಿ ಪೋಪ್‌ರನ್ನು ಪೆವಿಲಿಯನ್‌ಗೆ ಅಟ್ಟಿದ ಕುಲ್ದೀಪ್, 2ನೇ ಅವಧಿಯಲ್ಲಿ ಇಂಗ್ಲೆಂಡ್‌ಗೆ ದುಸ್ವಪ್ನವಾಗಿ ಪರಿಣಮಿಸಿದರು.
100 ರನ್‌ಗೆ ಒಂದೇ ವಿಕೆಟ್ ಕಳೆದುಕೊಂಡಿದ್ದರೂ ಬಳಿಕ ನಡೆದಿದ್ದು ಪೆವಿಲಿಯನ್ ಪರೇಡ್. ಜ್ಯಾಕ್ ಕ್ರಾವ್ಲಿ(79) ವಿಕೆಟ್ ಒಪ್ಪಿಸಿದ ಬಳಿಕ ಇತರ ಬ್ಯಾಟರ್‌ಗಳಿಗೆ ಕುಲ್ದೀಪ್, ಅಶ್ವಿನ್ ದಾಳಿಯನ್ನು ಎದುರಿಸಿ ನಿಲ್ಲಲಾಗಲಿಲ್ಲ.
ಡಕೆಟ್(27), ರೂಟ್(26), ಬೇರ್‌ಸ್ಟೋವ್(29), ಫೋಕ್ಸ್(24) ಯಾರಿಂದಲೂ ದೊಡ್ಡ ಇನ್ನಿಂಗ್ಸ್ ಮೂಡಿಬರಲಿಲ್ಲ. 175ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಬಳಿಕ 87 ಎಸೆತಗಳಲ್ಲಿ 43 ರನ್ ಸೇರಿಸುವಷ್ಟರಲ್ಲಿ ಉಳಿದ 7 ವಿಕೆಟ್‌ಗಳನ್ನೂ ಕಳೆದುಕೊಂಡಿತು. ಕುಲ್ದೀಪ್ 5 ವಿಕೆಟ್ ಗೊಂಚಲು ಪಡೆದರೆ, ಅಶ್ವಿನ್ 4 ವಿಕೆಟ್ ಕಿತ್ತು 100ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯಗೊಳಿಸಿದರು.
ಸ್ಫೋಟಕ ಆರಂಭ: ಬಳಿಕ ಇನ್ನಿಂಗ್ಸ್ ಆರಂಭಿಸಿದ ಭಾರತ, ಇಂಗ್ಲೆಂಡ್‌ಗೆ ನಿಜವಾದ ‘ಬಾಜ್‌ಬಾಲ್’ ಬಿಸಿಯನ್ನು ಮುಟ್ಟಿಸಿತು. ಇಂಗ್ಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಜೈಸ್ವಾಲ್ ಹಾಗೂ ರೋಹಿತ್ 124 ಎಸೆತಗಳಲ್ಲಿ 104 ರನ್ ಜೊತೆಯಾಟವಾಡಿದರು. 58 ಎಸೆತಗಳಲ್ಲಿ 57 ರನ್ ಚಚ್ಚಿದ ಜೈಸ್ವಾಲ್ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಕಳೆದುಕೊಂಡರೆ, ರೋಹಿತ್ ಶರ್ಮಾ 0000 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಸ್ಕೋರ್: ಇಂಗ್ಲೆಂಡ್ 218/10(ಕ್ರಾವ್ಲಿ 79, ಕುಲ್ದೀಪ್ 5-72, ಅಶ್ವಿನ್ 4-51), ಭಾರತ 135/1 (ಮೊದಲ ದಿನದಂತ್ಯಕ್ಕೆ)(ಜೈಸ್ವಾಲ್ 57, ರೋಹಿತ್ 52*, ಬಶೀರ್ 1-64)ಕುಲ್ದೀಪ್ ವೇಗದ 50 ವಿಕೆಟ್ ದಾಖಲೆ
ಕುಲ್ದೀಪ್ ಭಾರತದ ಪರ ಟೆಸ್ಟ್‌ನಲ್ಲಿ ಎಸೆತದಗಳ ಆಧಾರದಲ್ಲಿ ಅತಿ ವೇಗವಾಗಿ 50 ವಿಕೆಟ್ ಕಿತ್ತ ಸಾಧನೆ ಮಾಡಿದರು. ಕುಲ್ದೀಪ್ 1871ನೇ ಎಸೆತದಲ್ಲಿ 50 ವಿಕೆಟ್ ಮೈಲಿಗಲ್ಲು ಸಾಧಿಸಿದರು. ಅಕ್ಷರ್ ಪಟೇಲ್ 2205, ಬೂಮ್ರಾ 2465 ಎಸೆತಗಳನ್ನು ಬಳಸಿಕೊಂಡಿದ್ದರು. ಒಟ್ಟಾರೆ ಭಾರತದ ಪರ 50 ಟೆಸ್ಟ್ ವಿಕೆಟ್ ಕಿತ್ತ 43ನೇ ಬೌಲರ್.