ಸಾರಾಂಶ
ಸೆಂಚೂರಿಯನ್: ಟೀಂ ಇಂಡಿಯಾ ಇತ್ತೀಚೆಗಷ್ಟೇ ದ.ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದಾಗ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದ ಆಟಗಾರಲ್ಲಿ ರೋಹಿತ್ ಶರ್ಮಾ ಕೂಡಾ ಒಬ್ಬರು. ಇದಕ್ಕೆ ಪ್ರಮುಖ ಕಾರಣ ಅವರು ವಿಶ್ವಕಪ್‌ನಲ್ಲಿ ಅಬ್ಬರಿಸಿದ ರೀತಿ. ಜೊತೆಗೆ ಈ ವರೆಗೂ ಅವರು ಆಫ್ರಿಕಾದಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ ಈ ಬಾರಿಯಾದರೂ ಮಿಂಚುತ್ತಾರೆ ಎಂಬ ವಿಶ್ವಾಸ. ಜೊತೆಗೆ ಭಾರತ ತಂಡ ದ.ಆಫ್ರಿಕಾದಲ್ಲಿ ಸಾಧಿಸಲಾಗದ್ದನ್ನು ರೋಹಿತ್ ನಾಯಕತ್ವದಲ್ಲಿ ಸಾಧಿಸಲಿದೆ ಎಂದು ನಿರೀಕ್ಷೆ ಭಾರತೀಯರಲ್ಲಿತ್ತು. ಆದರೆ ಇವೆಲ್ಲವೂ ಸದ್ಯ ಬುಡಮೇಲಾಗಿದೆ. ಇದರೊಂದಿಗೆ ಜ.3ರಿಂದ ಕೇಪ್‌ಟೌನ್‌ನಲ್ಲಿ ಆರಂಭಗೊಳ್ಳಲಿರುವ 2ನೇ ಟೆಸ್ಟ್‌ಗೂ ಮುನ್ನ ರೋಹಿತ್ ಮತ್ತಷ್ಟು ಒತ್ತಡಕ್ಕೊಳಗಾಗಿದ್ದಂತೂ ಸ್ಪಷ್ಟ. ಸದ್ಯದ ರೋಹಿತ್‌ರ ಅಂಕಿ ಅಂಶಗಳನ್ನು ಗಮನಿಸಿದಾಗ ದ.ಆಫ್ರಿಕಾದಲ್ಲಿ ಅವರ ಪ್ರದರ್ಶನ ತೀರಾ ಕಳಪೆ. ಅವರು ಈ ವರೆಗೂ 10 ವರ್ಷಗಳಲ್ಲಿ 3 ಬಾರಿ ದ.ಆಫ್ರಿಕಾ ಪ್ರವಾಸ ಕೈಗೊಂಡಿದ್ದಾರೆ. ಆದರೆ ಆಡಿರುವ 5 ಪಂದ್ಯಗಳ 10 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು ಕೇವಲ 128 ರನ್. ಇದರಲ್ಲಿ 2 ಬಾರಿ ಶೂನ್ಯ ಸುತ್ತಿದ್ದರೆ, ಗರಿಷ್ಠ ಸ್ಕೋರ್ 47. ಅಂದರೆ ಒಂದೂ ಅರ್ಧಶತಕ ದಾಖಲಿಸಲು ಸಾಧ್ಯವಾಗಿಲ್ಲ.2013-14ರಲ್ಲಿ ಮೊದಲ ಬಾರಿ ಪ್ರವಾಸ ಕೈಗೊಂಡಿದ್ದಾಗ ಆಡಿದ 2 ಪಂದ್ಯಗಳಲ್ಲಿ ಕೇವಲ 45 ರನ್ ಗಳಿಸಿದ್ದರು. ಬಳಿಕ 2017-18ರ ಪ್ರವಾಸದಲ್ಲೂ ಹೆಚ್ಚಿನ ಸದ್ದು ಮಾಡಲು ರೋಹಿತ್‌ಗೆ ಸಾಧ್ಯವಾಗಿರಲಿಲ್ಲ. ಅವರು 2 ಪಂದ್ಯಗಳನ್ನಾಡಿ 78 ರನ್ ಕಲೆಹಾಕಿದ್ದರು. ಇನ್ನು ಈ ಬಾರಿ ಮೊದಲ ಪಂದ್ಯದಲ್ಲಿ ಅವರ ಗಳಿಕೆ ಕೇವಲ 5 ರನ್ ಮಾತ್ರ.ಕೊನೆ ಪ್ರವಾಸ?: 36 ವರ್ಷದ ರೋಹಿತ್ ಇನ್ನು ಒಂದೆರಡು ವರ್ಷ ಮಾತ್ರ ಆಡಬಹುದು ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿ ಈ ಬಾರಿಯದ್ದೇ ಅವರಿಗೆ ಕೊನೆಯ ದ.ಆಫ್ರಿಕಾ ಪ್ರವಾಸವಾಗಿರುವ ಸಾಧ್ಯತೆ ಹೆಚ್ಚು. ಸಹಜವಾಗಿ ಅವರ ಮೇಲೆ ಒತ್ತಡ ಇರಲಿದೆ. ಹೀಗಾಗಿ ಕೇಪ್‌ಟೌನ್ ಟೆಸ್ಟ್‌ನಲ್ಲಾದರೂ ತಮ್ಮ ನೈಜ ಆಟ ಆಡಬಲ್ಲರೇ ಎಂಬುದು ಸದ್ಯದ ಕುತೂಹಲ.
ಟೆಸ್ಟ್ ಸರಣಿ ಸೋಲುತಪ್ಪಿಸಿಕೊಳ್ಳುವ ಗುರಿ!ಈ ವರೆಗೂ 3 ದಶಕದಿಂದಲೂ ಭಾರತ ತಂಡ ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಈಗಾಗಲೇ ಮೊದಲ ಪಂದ್ಯದಲ್ಲಿ ಸೋತಿರುವುದರಿಂದ ಈ ಬಾರಿಯೂ ಸರಣಿ ಗೆಲ್ಲಲು ಸಾಧ್ಯವಿಲ್ಲ. ಆದರೆ ಸರಣಿ ಸೋಲು ತಪ್ಪಿಸಿಕೊಳ್ಳಲು ಸಾಧ್ಯವಿದೆ. ನಾಯಕನಾಗಿ ಈ ವರೆಗೂ ಯಾರೂ ಸಾಧಿಸಲಾಗದ್ದನ್ನು ತಮಗೆ ಸಾಧಿಸುವ ಅವಕಾಶವಿದ್ದರೂ ಅದನ್ನು ಮೊದಲ ಪಂದ್ಯದಲ್ಲೇ ಕಳೆದುಕೊಂಡಿದ್ದಾರೆ. ಹೀಗಾಗಿ 2ನೇ ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್‌ನಲ್ಲಿ ಮಿಂಚಲೇಬೇಕಾದ ಒತ್ತಡ ಇರುವುದದ ಜೊತೆಗೆ, ಸರಣಿ ಉಳಿಸಿಕೊಳ್ಳುವ ಸವಾಲನ್ನೂ ಎದುರಿಸಬೇಕಿದೆ.