ಬೆಂಗಳೂರು : 2026ರ ಐಪಿಎಲ್‌ನ ಉದ್ಘಾಟನಾ ಪಂದ್ಯದ ಟಿಕೆಟ್‌ ಕೇವಲ ಹತ್ತೇ ನಿಮಿಷದಲ್ಲಿ ಸೋಲ್ಡೌಟ್‌ ಆಗಿದೆ. ಮಾ.28ರಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ನಡುವಿನ ಪಂದ್ಯದ ಟಿಕೆಟನ್ನು ಆರ್‌ಸಿಬಿ ಮಂಗಳವಾರ ಮಾರಾಟ ಮಾಡಿತು. ಸಂಜೆ 4 ಗಂಟೆಗೆ ಆರ್‌ಸಿಬಿಯ ಅಧಿಕೃತ ವೆಬ್‌ಸೈಟ್‌ ಹಾಗೂ ಆ್ಯಪ್‌ನಲ್ಲಿ ಟಿಕೆಟ್‌ಗಳು ಖರೀದಿಗೆ ಲಭ್ಯವಾದವು. 4.10ರ ವೇಳೆಗೆ ಟಿಕೆಟ್‌ ಖಾಲಿಯಾದವು.

ಆಯ್ದ ಸ್ಟ್ಯಾಂಡ್‌ಗಳಿಗಷ್ಟೇ ಟಿಕೆಟ್‌ ಲಭ್ಯ

ಕೆಲವೇ ಕೆಲ ಆಯ್ದ ಸ್ಟ್ಯಾಂಡ್‌ಗಳಿಗಷ್ಟೇ ಟಿಕೆಟ್‌ ಲಭ್ಯವಿತ್ತು. ಟಿಕೆಟ್‌ನ ಕನಿಷ್ಠ ದರ ಜಿಎಸ್‌ಟಿ ಸೇರಿ ₹3750, ಗರಿಷ್ಠ ದರ ₹47000 ಇದೆ. ಟಿಕೆಟ್‌ ಖರೀದಿಸಲು ವೆಬ್‌ಸೈಟ್‌ ಅಥವಾ ಆ್ಯಪ್‌ನಲ್ಲಿ ಗ್ರಾಹಕರು ತಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿದರೆ ಒಟಿಪಿ ಬರಲಿದೆ. ಲಾಗಿನ್‌ ಆದ ಬಳಿಕ ಸ್ಟ್ಯಾಂಡ್‌ಗಳನ್ನು ಆಯ್ಕೆ ಮಾಡಿಕೊಂಡು, ಹಣ ಪಾವತಿಸಿ ಟಿಕೆಟ್‌ ಖರೀದಿಸಬಹುದಿತ್ತು. ಒಬ್ಬರು ಗರಿಷ್ಠ 2 ಟಿಕೆಟ್‌ ಖರೀದಿಸಲಷ್ಟೇ ಅವಕಾಶವಿತ್ತು.

ಒಬ್ಬರು ಟಿಕೆಟ್‌ ಖರೀದಿಸಿ ಅದನ್ನು ಮತ್ತೊಬ್ಬರಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದನ್ನು ತಡೆಯಲು ಈ ಬಾರಿ ಹೊಸ ವ್ಯವಸ್ಥೆ ಮಾಡಲಾಗಿದೆ. ಪಂದ್ಯ ಆರಂಭಕ್ಕೆ 5 ಗಂಟೆಗಳ ಮುಂಚೆ ಟಿಕೆಟ್‌ ಖರೀದಿಸಿದವರ ಮೊಬೈಲ್‌ಗೆ ಕ್ಯುಆರ್‌ ಕೋಡ್‌ ಬರಲಿದೆ. ಕ್ರೀಡಾಂಗಣವನ್ನು ಪ್ರವೇಶಿಲು ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಬೇಕು. ಒಂದು ಮೊಬೈಲ್‌ಗೆ ಬಂದ ಕೋಡ್‌ ಅನ್ನು ಮತ್ತೊಂದ ಮೊಬೈಲ್‌ ಸಂಖ್ಯೆಗೆ ಹಂಚಿಕೊಳ್ಳಲು ಸಾಧ್ಯವಿಲ್ಲ.


ಅಭಿಮಾನಿಗಳ ಸಿಟ್ಟು

ಈ ಹಿಂದಿನ ಆವೃತ್ತಿಗಳಲ್ಲೂ ಆರ್‌ಸಿಬಿ ಟಿಕೆಟ್‌ ಖರೀದಿ ವ್ಯವಸ್ಥೆ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವರ್ಷವೂ ಟಿಕೆಟ್‌ ಖರೀದಿಸಲು ಆಗದೆ ಅಭಿಮಾನಿಗಳು ಸಿಟ್ಟಾಗಿದ್ದು, ಸಾಮಾಜಿಕ ತಾಣಗಳಲ್ಲಿ ಫ್ರಾಂಚೈಸಿಯನ್ನು ಟೀಕಿಸಿದ್ದಾರೆ. ಟಿಕೆಟ್‌ ಮಾರಾಟ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಆರ್‌ಸಿಬಿ ಸಿಇಒ ರಾಜೇಶ್‌ ಮೆನನ್‌, ‘ಚಿನ್ನಸ್ವಾಮಿ ಕ್ರೀಡಾಂಗಣದ ಆಸನ ಸಾಮರ್ಥ್ಯ 1 ಲಕ್ಷ ಇದ್ದರೂ, ಕೆಲವೇ ನಿಮಿಷಗಳಲ್ಲಿ ಟಿಕೆಟ್‌ ಮಾರಾಟವಾಗಲಿದೆ. ಟಿಕೆಟ್‌ಗೆ ಬೆಂಗಳೂರಲ್ಲಿರುವಷ್ಟು ಬೇಡಿಕೆ ಇನ್ನೆಲ್ಲೂ ಇಲ್ಲ’ ಎಂದರು.