ಬೆಂಗಳೂರು : ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡ ಈ ಬಾರಿ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಶನಿವಾರ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ. ತಂಡ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಭಾರಂಭದ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.

ರಜತ್‌ ಪಾಟೀದಾರ್‌ ನಾಯಕತ್ವದ ಆರ್‌ಸಿಬಿ ಹೆಚ್ಚೂ ಕಡಿಮೆ ಕಳೆದ ಬಾರಿಯ ತಂಡವನ್ನೇ ಉಳಿಸಿಕೊಂಡಿದ್ದು, ಬಲಿಷ್ಠವಾಗಿ ತೋರುತ್ತಿದೆ. ಆದರೆ ಗಾಯಾಳು ಜೋಶ್‌ ಹೇಜಲ್‌ವುಡ್‌ ಅನುಪಸ್ಥಿತಿ ತಂಡವನ್ನು ಕಾಡಬಹುದು. ಮಾಜಿ ನಾಯಕ ವಿರಾಟ್‌ ಕೊಹ್ಲಿ ಈ ಬಾರಿಯೂ ಅಬ್ಬರದ ಆಟವಾಡುವ ವಿಶ್ವಾಸದಲ್ಲಿದ್ದು, ಫಿಲ್‌ ಸಾಲ್ಟ್‌ ಜೊತೆ ಆರಂಭಿಕನಾಗಿ ಆಡಲು ಸಜ್ಜಾಗಿದ್ದಾರೆ. ವೆಂಕಟೇಶ್‌ ಅಯ್ಯರ್‌, ರಜತ್‌, ಜಿತೇಶ್‌, ಕೃನಾಲ್‌ ಜೊತೆ ಟಿ20ಗೆ ಹೇಳಿ ಮಾಡಿಸಿದಂತಿರುವ ಟಿಮ್‌ ಡೇವಿಡ್‌, ರೊಮಾರಿಯೊ ಶೆಫರ್ಡ್‌ ತಂಡಕ್ಕೆ ಆಧಾರಸ್ತಂಭ. ಬೌಲಿಂಗ್‌ ವಿಭಾಗದಲ್ಲಿ ಭುವನೇಶ್ವರ್‌, ಸುಯಸ್‌ ಶರ್ಮಾ, ಯುವ ವೇಗಿ ಮಂಗೇಶ್‌ ಯಾದವ್‌ ಇದ್ದಾರೆ.

ಮತ್ತೊಂದೆಡೆ ಸನ್‌ರೈಸರ್ಸ್‌ ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿ. 2024ರಲ್ಲಿ ಆರ್‌ಸಿಬಿ ವಿರುದ್ಧ ಬೆಂಗಳೂರಿನಲ್ಲೇ ಸನ್‌ರೈಸರ್ಸ್‌ ತಂಡ 3 ವಿಕೆಟ್‌ಗೆ 287 ರನ್‌ ಗಳಿಸಿತ್ತು. ಈ ಬಾರಿಯೂ ಬೃಹತ್‌ ಮೊತ್ತ ದಾಖಲಾಗುವ ನಿರೀಕ್ಷೆಯಿದೆ. ತಂಡದಲ್ಲಿ ಅಭಿಷೇಕ್‌, ಹೆಡ್‌, ಕ್ಲಾಸೆನ್‌, ಲಿವಿಂಗ್‌ಸ್ಟೋನ್‌, ನಿತೀಶ್‌ ಕುಮಾರ್‌ ಸೇರಿ ಪ್ರಮುಖರಿದ್ದಾರೆ.


ಹೇಗಿರುತ್ತೆ ಆರ್‌ಸಿಬಿ ಟೀಂ ಸಂಯೋಜನೆ?

ಆರ್‌ಸಿಬಿ ತನ್ನ ಆಡುವ 11ರ ಬಳಗವನ್ನು ಬಹುತೇಕ ಖಚಿತಪಡಿಸಿಕೊಂಡಿದ್ದರೂ, ವಿದೇಶಿ ಆಟಗಾರರ ವಿಚಾರದಲ್ಲಿ ತಂಡಕ್ಕೆ ಗೊಂದಲ ಎದುರಾಗಬಹುದು. ಸಾಲ್ಟ್‌ ಆರಂಭಿಕನಾಗಿ ಆಡಿದರೆ, ಡೇವಿಡ್‌, ಶೆಫರ್ಡ್‌ ಆಲ್ರೌಂಡರ್‌ಗಳಾಗಿ ಸ್ಥಾನ ಪಡೆಯುತ್ತಾರೆ. ಹೇಜಲ್‌ವುಡ್‌ ಅನುಪಸ್ಥಿತಿಯಲ್ಲಿ ಜೇಕಬ್‌ ಡಫಿ ಅವರನ್ನು ಆಡಿಸಿಸಬಹುದು. ಹೀಗಾದರೆ ಯುವ ತಾರೆ ಜೇಕಬ್‌ ಬೆಥೆಲ್‌ಗೆ ಸ್ಥಾನವಿಲ್ಲ. ಬೆಥೆಲ್‌ರನ್ನು ಆಡಿಸಬೇಕಿದ್ದರೆ ಸಾಲ್ಟ್‌ರನ್ನು ಹೊರಗಿಡಬೇಕಾಗುತ್ತದೆ ಅಥವಾ ಆರಂಭಿಕ ಪಂದ್ಯಗಳಲ್ಲಿ ಡಫಿಯನ್ನು ಹೊರಗಿಟ್ಟು ಭಾರತೀಯ ವೇಗಿಗೆ ಅವಕಾಶ ನೀಡಬೇಕಾಗುತ್ತದೆ.

ಸಂಭವನೀಯ ಆಟಗಾರರು

ಆರ್‌ಸಿಬಿ: ಸಾಲ್ಟ್‌, ಕೊಹ್ಲಿ, ವೆಂಕಟೇಶ್‌, ರಜತ್‌(ನಾಯಕ), ಜಿತೇಶ್‌, ಕೃನಾಲ್‌, ಡೇವಿಡ್‌, ಶೆಫರ್ಡ್‌, ಸುಯಶ್‌, ಭುವನೇಶ್ವರ್‌, ಡಫಿ, ಮಂಗೇಶ್‌.

ಸನ್‌ರೈಸರ್ಸ್: ಅಭಿಷೇಕ್‌, ಹೆಡ್‌, ಇಶಾನ್‌(ನಾಯಕ), ನಿತೇಶ್‌, ಕ್ಲಾಸೆನ್‌, ಲಿವಿಂಗ್‌ಸ್ಟೋನ್‌, ಸಲೀಲ್‌, ಹರ್ಷ್‌ ದುಬೆ, ಶಿವಾಂಗ್‌, ಕಾರ್ಸ್‌, ಹರ್ಷಲ್‌, ಉನಾದ್ಕಟ್‌,

ಮುಖಾಮುಖಿ: 25

ಆರ್‌ಸಿಬಿ: 11

ಸನ್‌ರೈಸರ್ಸ್‌: 13

ಪಂದ್ಯ: ಸಂಜೆ 7.30 । ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌.

ಸಮಯದ ವಿರುದ್ಧ ಹೋರಾಡಿ ಐಪಿಎಲ್‌ಗೆ 

ಬೆಂಗಳೂರು : ಕಳೆದ ಜೂನ್‌ನಲ್ಲಿ ಕಾಲ್ತುಳಿತದ ಭೀಕರ ಘಟನೆಗೆ ಸಾಕ್ಷಿಯಾಗಿದ್ದ ಚಿನ್ನಸ್ವಾಮಿ ಕ್ರೀಡಾಂಗಣ ಈಗ ಐಪಿಎಲ್‌ಗೆ ಸಜ್ಜಾಗುತ್ತಿದೆ. ಆದರೆ ಲೀಗ್‌ಗೆ ಕ್ರೀಡಾಂಗಣವನ್ನು ಸಜ್ಜುಗೊಳಿಸಲು ಕೆಎಸ್‌ಸಿಎ ಕಳೆದ 3 ತಿಂಗಳಲ್ಲಿ ಅವಿರತ ಶ್ರಮ ಪಟ್ಟಿದ್ದು, ತನ್ನ ಕಾರ್ಯದಲ್ಲಿ ಕೊನೆಗೂ ಯಶಸ್ಸು ಸಾಧಿಸಿದೆ.

ಹಿಂದಿನ ಸಮಿತಿಯ ಅವಧಿ ಸೆಪ್ಟೆಂಬರ್‌ನಲ್ಲಿ ಕೊನೆಗೊಂಡು, ವೆಂಕಟೇಶ್‌ ಪ್ರಸಾದ್‌ ನಾಯಕತ್ವದ ಹೊಸ ಸಮಿತಿ ಡಿಸೆಂಬರ್‌ನಲ್ಲಿ ಅಧಿಕಾರಕ್ಕೆ ಬಂದಿತ್ತು. ಆಡಳಿತ ಕೈಗೆತ್ತಿಕೊಂಡ ಕೆಲ ದಿನಗಳಲ್ಲೇ ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಹಾಗೂ ಐಪಿಎಲ್‌ ಪಂದ್ಯಗಳನ್ನು ಮರಳಿತರುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿತ್ತು.

ಮೊದಲಿಗೆ ಸರ್ಕಾರದ ಅನುಮತಿಗಾಗಿ ಸತತ ಪ್ರಯತ್ನಪಟ್ಟ ಕೆಎಸ್‌ಸಿಎ, ಹಲವು ಇಲಾಖೆಗಳ ಜೊತೆ ನಿರಂತರ ಸಭೆ, ಪರಿಶೀಲನೆ ಬಳಿಕ ಷರತ್ತುಬದ್ಧ ಅನುಮತಿ ಗಿಟ್ಟಿಸಿಕೊಂಡಿತ್ತು. ಇದಾದ ಬಳಿಕ, ಬೆಂಗಳೂರಿನಲ್ಲಿ ಆಡುವಂತೆ ಆರ್‌ಸಿಬಿಯನ್ನು ಮನವೊಲಿಸಲು ಸಾಕಷ್ಟು ಶ್ರಮವಹಿಸಿತ್ತು. ಈ ನಡುವೆ, ಐಪಿಎಲ್‌ಗೆ ಷರತ್ತಿಲ್ಲದ ಅನುಮತಿ ನೀಡಬೇಕಿದ್ದರೆ ಹಲವು ಸುರಕ್ಷತಾ ಕ್ರಮಗಳನ್ನು ಕೆಎಸ್‌ಸಿಎ ಕೈಗೊಳ್ಳಬೇಕಿತ್ತು. ಆದರೆ ಸೀಮಿತ ಅವಧಿಯಲ್ಲಿ ಬೃಹತ್‌ ಪ್ರವೇಶದ್ವಾರ, ಟಿಕೆಟ್‌ ಪರಿಶೀಲನಾ ಗೇಟ್‌, ಹೋಲ್ಡಿಂಗ್‌ ಏರಿಯಾ ಸೇರಿದಂತೆ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಿದೆ. ಈ ಹಿಂದೆ ಎನ್‌ಸಿಎ ಇದ್ದ ಜಾಗವನ್ನು ಖಾಲಿ ಬಿಡಲಾಗಿದ್ದು, ಬೃಹತ್‌ ಗೇಟ್‌ಗಳ ಒಳಗೆ ಏರ್‌ಪೋರ್ಟ್‌ ರೀತಿಯ ಟಿಕೆಟ್‌ ಸ್ಕ್ಯಾನಿಂಗ್‌ ಕೌಂಟರ್‌ಗಳನ್ನು ಅಳವಡಿಸಲಾಗಿದೆ. ಕೆಲ ಮರಗಳನ್ನು ಕತ್ತರಿಸಿ, ಕಾಂಕ್ರೀಟ್ ಹಾಕಿ ಜಾಗವನ್ನು ಸಮತಟ್ಟು ಮಾಡಲಾಗಿದೆ. ಕ್ರೀಡಾಂಗಣದ ಸುತ್ತಲೂ ಸಿಸಿ ಕ್ಯಾಮರಾ ಅಳವಡಿಸಿ, ಆಯಕಟ್ಟಿನ ಜಾಗಗಳನ್ನು ಕಾಂಕ್ರೀಟ್ ಹಾಕಿ ಸರಿಪಡಿಸಲಾಗಿದೆ.

 ಸರ್ಕಾರದಿಂದ ಅನುಮತಿಗಾಗಿ ನಿರಂತರ ಪ್ರಯತ್ನ

ವಿವಿಧ ಇಲಾಖೆ ಜತೆ ಹಲವು ಸುತ್ತಿನ ಸಭೆ, ಪರಿಶೀಲನೆ

ಕ್ರೀಡಾಂಗಣದಲ್ಲಿ ಸುರಕ್ಷತಾ ಕ್ರಮಗಳ ಅಳವಡಿಕೆ

ಬೆಂಗಳೂರಿನಲ್ಲಿ ಆಡುವಂತೆ ಆರ್‌ಸಿಬಿಯ ಮನವೊಲಿಕೆ

ಹಲವು ಬೃಹತ್‌ ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣ

ಕ್ರೀಡಾಂಗಣದ ಸುತ್ತಲೂ ಹಲವು ಕಾಮಗಾರಿ

ಕಾರ್ಮಿಕರಿಂದಲೂ ಹಗಲು-ರಾತ್ರಿ ನಿರಂತರ ಕೆಲಸ