ಧರ್ಮಶಾಲಾದಲ್ಲಿ ಆರ್‌ಸಿಬಿ ಗೆಲುವಿನ ನಾಗಾಲೋಟ. 5ನೇ ಜಯದೊಂದಿಗೆ ಪ್ಲೇ-ಆಫ್‌ ಆಸೆ ಜೀವಂತ. ಪಂಜಾಬ್‌ ಪ್ಲೇ-ಆಫ್‌ನಿಂದ ಔಟ್‌. ಕೊಹ್ಲಿ, ರಜತ್‌, ಗ್ರೀನ್‌ ಆರ್ಭಟ. ಆರ್‌ಸಿಬಿ 7 ವಿಕೆಟ್‌ಗೆ 241. 181ಕ್ಕೆ ಗಂಟುಮೂಟೆ ಕಟ್ಟಿದ ಪಂಜಾಬ್‌. ಆರ್‌ಸಿಬಿಗೆ 60 ರನ್‌ ಭರ್ಜರಿ ಜಯ.

ಧರ್ಮಶಾಲಾ: ಈ ಬಾರಿಯಾದರೂ ಕಪ್‌ ಗೆದ್ದೇ ಗೆಲ್ಲುವ ಆರ್‌ಸಿಬಿ ಕನಸು ಜೀವಂತವಾಗಿಯೇ ಉಳಿದಿದೆ. ಸತತ ಸೋಲುಗಳಿಂದ ಕಂಗೆಟ್ಟು ಇನ್ನೇನು ಪ್ಲೇ-ಆಫ್‌ನಿಂದ ಹೊರಬಿತ್ತು ಎಂಬ ಸ್ಥಿತಿಯಲ್ಲಿದ್ದ ಆರ್‌ಸಿಬಿ ಈಗ ಸತತ 4ನೇ, ಒಟ್ಟಾರೆ 5ನೇ ಜಯದೊಂದಿಗೆ ಫೀನಿಕ್ಸ್‌ನಂತೆ ಎದ್ದು ಬಂದಿದೆ.

ಗುರುವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧ ಅಭೂತಪೂರ್ವ ಆಟ ಪ್ರದರ್ಶಿಸಿ 60 ರನ್‌ಗಳಿಂದ ವಿಜಯಲಕ್ಷ್ಮಿಯನ್ನು ತನ್ನದಾಗಿಸಿಕೊಂಡ ಆರ್‌ಸಿಬಿ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಭದ್ರಪಡಿಸಿಕೊಂಡಿತು. 12ರಲ್ಲಿ 8ನೇ ಸೋಲುಂಡ ಪಂಜಾಬ್‌ ಅಧಿಕೃತವಾಗಿ ಪ್ಲೇ-ಆಫ್‌ನಿಂದ ಹೊರಬಿತ್ತು.ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ, ಕೊಹ್ಲಿ ಹಾಗೂ ರಜತ್‌ ಅಬ್ಬರದಿಂದಾಗಿ ಕಲೆಹಾಕಿದ್ದು ಬರೋಬ್ಬರಿ 241 ರನ್‌. ಇದು ಐಪಿಎಲ್‌ನಲ್ಲಿ ತಂಡದ 4ನೇ ಗರಿಷ್ಠ ಸ್ಕೋರ್‌. ಆದರೆ ಇತ್ತೀಚೆಗಷ್ಟೇ ರಾಜಸ್ಥಾನ ವಿರುದ್ಧ 262 ರನ್‌ ಗುರಿ ಬೆನ್ನತ್ತಿ ಗೆದ್ದಿದ್ದ ಪಂಜಾಬ್‌ಗೆ ಇದು ಅಸಾಧ್ಯ ಗುರಿಯೇನೂ ಆಗಿರಲಿಲ್ಲ. 

ಆದರೆ ರೋಸೌ, ಶಶಾಂಕ್‌ ಹೋರಾಟದ ಹೊರತಾಗಿಯೂ ತಂಡಕ್ಕೆ ಗೆಲುವು ಸಿಗಲಿಲ್ಲ.21 ಎಸೆತಗಳಲ್ಲಿ ಫಿಫ್ಟಿ ಸಿಡಿಸಿದದ ರೀಲಿ ರೋಸೌ ಆರ್‌ಸಿಬಿ ಬೌಲರ್‌ಗಳಲ್ಲಿ ನಡುಕ ಹುಟ್ಟಿಸಿದ್ದರು. ಆದರೆ 27 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್‌ನೊಂದಿಗೆ 61 ರನ್‌ ಗಳಿಸಿದ್ದ ರೋಸೌಗೆ ಕರ್ಣ್‌ ಶರ್ಮಾ ಪೆವಿಲಿಯನ್‌ ಹಾದಿ ತೋರಿದರು. ಬಳಿಕ ಶಶಾಂಕ್‌(19 ಎಸೆತಗಳಲ್ಲಿ 37) ಹೋರಾಡಿದರೂ ತಂಡ 17 ಓವರಲ್ಲಿ 181 ರನ್‌ಗೆ ಆಲೌಟಾಯಿತು. ಸಿರಾಜ್‌ 3 ವಿಕೆಟ್‌ ಕಿತ್ತರು.

ಆರ್‌ಸಿಬಿ ಸ್ಫೋಟಕ ಆಟ: ಪ್ಲೇ-ಆಫ್‌ ರೇಸ್‌ನಲ್ಲಿರಬೇಕಿದ್ದರೆ ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಆರ್‌ಸಿಬಿ ಸ್ಪಷ್ಟ ಗುರಿಯೊಂದಿಗೆ ಬ್ಯಾಟಿಂಗ್‌ಗೆ ಆಗಮಿಸಿತು. ಡು ಪ್ಲೆಸಿ(09), ಜ್ಯಾಕ್ಸ್‌(12) ಬೇಗನೇ ಔಟಾದರೂ, ಕೊಹ್ಲಿ-ರಜತ್‌ ಪಂಜಾಬ್‌ ಬೌಲರ್‌ಗಳನ್ನು ಚೆಂಡಾಡಿದರು. ರಜತ್‌ 23 ಎಸೆತಗಳಲ್ಲಿ 55 ರನ್‌ ಚಚ್ಚಿದರೆ, ಕೊಹ್ಲಿ 47 ಎಸೆತಗಳಲ್ಲಿ 92 ರನ್‌ ಸಿಡಿಸಿ ಶತಕದಂಚಿನಲ್ಲಿ ಎಡವಿದರು. ಗ್ರೀನ್‌(27 ಎಸೆತಗಳಲ್ಲಿ 46) 240ರ ಗಡಿ ದಾಟಿಸಿತು.

ಸ್ಕೋರ್‌: ಆರ್‌ಸಿಬಿ 20 ಓವರಲ್ಲಿ 241/7(ಕೊಹ್ಲಿ 92, ರಜತ್‌ 55, ಗ್ರೀನ್‌ 46, ಹರ್ಷಲ್‌ 3-38), ಪಂಜಾಬ್‌ 17 ಓವರಲ್ಲಿ 181/10 (ರೋಸೌ 61, ಶಶಾಂಕ್‌ 37, ಸಿರಾಜ್‌ 3-43)

ದ್ರಾವಿಡ್‌ರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಕಾರ್ತಿಕ್‌

ಆರ್‌ಸಿಬಿ ಪರ ಗರಿಷ್ಠ ರನ್‌ ಸರದಾರ ಭಾರತೀಯ ಬ್ಯಾಟರ್‌ಗಳ ಪಟ್ಟಿಯಲ್ಲಿ ದಿನೇಶ್‌ ಕಾರ್ತಿಕ್‌ 2ನೇ ಸ್ಥಾನಕ್ಕೇರಿದರು. ಅವರು 900+ ರನ್‌ ಗಳಿಸಿದ್ದು, 898 ರನ್‌ ಸಿಡಿಸಿರುವ ರಾಹುಲ್‌ ದ್ರಾವಿಡ್‌ರನ್ನು ಹಿಂದಿಕ್ಕಿದರು. ಕೊಹ್ಲಿ 7897 ರನ್‌ಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

01ನೇ ಬ್ಯಾಟರ್‌: ವಿರಾಟ್‌ ಪಂಜಾಬ್‌ ವಿರುದ್ಧ ಐಪಿಎಲ್‌ನಲ್ಲಿ 1000 ರನ್‌ ಪೂರ್ಣಗೊಳಿಸಿದರು. 3 ತಂಡಗಳ ವಿರುದ್ಧ 1000+ ರನ್‌ ಗಳಿಸಿದ ಏಕೈಕ ಬ್ಯಾಟರ್‌. ಚೆನ್ನೈ, ಡೆಲ್ಲಿ ವಿರುದ್ಧವೂಈ ಸಾಧನೆ ಮಾಡಿದ್ದಾರೆ.

241 ರನ್‌: ಆರ್‌ಸಿಬಿ ಗಳಿಸಿದ 241 ರನ್‌ ಐಪಿಎಲ್‌ನಲ್ಲಿ ತವರಿನಾಚೆ ತಂಡದ ಗರಿಷ್ಠ ಸ್ಕೋರ್‌.