ಆರ್‌ಸಿಬಿಗೆ ಇಂದು ರಾಯಲ್ಸ್‌ ಟೆಸ್ಟ್‌ : ತವರಾಚೆ ಗೆಲುವಿನ ನಾಗಲೋಟ ಮುಂದುವರಿಸುತ್ತಾ

| N/A | Published : Apr 13 2025, 01:00 PM IST

RCB vs CSK

ಸಾರಾಂಶ

ಈ ಬಾರಿ ಕೋಲ್ಕತಾ, ಚೆನ್ನೈ, ಮುಂಬೈ ಭದ್ರಕೋಟೆಗಳನ್ನು ಬೇಧಿಸಿ ಗೆದ್ದಿರುವ ಆರ್‌ಸಿಬಿ, ತವರಿನಾಚೆ ತನ್ನ ಗೆಲುವಿನ ನಾಗಾಲೋಟ ಮುಂದುವರಿಸುವ ನಿರೀಕ್ಷೆಯಲ್ಲಿದೆ.

ಜೈಪುರ: ಈ ಬಾರಿ ಕೋಲ್ಕತಾ, ಚೆನ್ನೈ, ಮುಂಬೈ ಭದ್ರಕೋಟೆಗಳನ್ನು ಬೇಧಿಸಿ ಗೆದ್ದಿರುವ ಆರ್‌ಸಿಬಿ, ತವರಿನಾಚೆ ತನ್ನ ಗೆಲುವಿನ ನಾಗಾಲೋಟ ಮುಂದುವರಿಸುವ ನಿರೀಕ್ಷೆಯಲ್ಲಿದೆ. ತವರಿನ ಅಂಗಳದಲ್ಲಿ ಎರಡೆರಡು ಸೋಲು ಕಂಡರೂ, ಭಾನುವಾರ ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಜಯಭೇರಿ ಬಾರಿಸಲು ಆರ್‌ಸಿಬಿ ಕಾತರಿಸುತ್ತಿದೆ.

ಆರ್‌ಸಿಬಿ ಈ ಸಲ ಆಡಿರುವ 5 ಪಂದ್ಯಗಳ ಪೈಕಿ 2ರಲ್ಲಿ ಸೋತಿದೆ. ಈ ಎರಡೂ ಸೋಲುಗಳು ತನ್ನ ತವರಿನಲ್ಲೇ ಎದುರಾಗಿದ್ದು ತಂಡದ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಿದೆ. ಆದರೆ ತವರಿನಾಚೆ ಬಲಿಷ್ಠ ತಂಡಗಳನ್ನೇ ಬಗ್ಗುಬಡಿದಿರುವ ಉತ್ಸಾಹವೂ ತಂಡಕ್ಕಿದೆ. ಮತ್ತೊಂದೆಡೆ ರಾಯಲ್ಸ್ 5 ಪಂದ್ಯಗಳ ಪೈಕಿ ಕೇವಲ 2 ಗೆಲುವು ಸಾಧಿಸಿದ್ದು, ಜಯದ ಹಳಿಗೆ ಮರಳಲು ಕಾಯುತ್ತಿದೆ. ತಂಡ ಟೂರ್ನಿಯಲ್ಲಿ ಮೊದಲ ಬಾರಿ ತನ್ನ ತವರು ಜೈಪುರದಲ್ಲಿ ಆಡಲಿದೆ.

ಬ್ಯಾಟರ್ಸ್‌ಗೆ ಸವಾಲು: ಆರ್‌ಸಿಬಿ ಈ ಸಲವೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು ಬ್ಯಾಟಿಂಗ್‌ ವಿಭಾಗದಲ್ಲಿ. ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌, ರಜತ್‌ ಪಾಟೀದಾರ್‌ ಉತ್ತಮ ಲಯದಲ್ಲಿದ್ದು, ಮತ್ತೊಂದು ದೊಡ್ಡ ಇನ್ನಿಂಗ್ಸ್‌ ವಿಶ್ವಾಸದಲ್ಲಿದೆ. ಆದರೆ ರಾಯಲ್ಸ್‌ ವೇಗಿಗಳಾದ ಜೋಫ್ರಾ ಆರ್ಚರ್‌ ಹಾಗೂ ಸಂದೀಪ್‌ ಶರ್ಮಾರಿಂದ ಆರ್‌ಸಿಬಿ ಬ್ಯಾಟರ್ಸ್‌ಗೆ ಕಠಿಣ ಸವಾಲು ಎದುರಾಗಬಹುದು. ಅದರಲ್ಲೂ, ಐಪಿಎಲ್‌ನಲ್ಲಿ ಸಂದೀಪ್‌ ಬೌಲಿಂಗ್‌ನಲ್ಲಿ ಕೊಹ್ಲಿ 16 ಪಂದ್ಯಗಳ ಪೈಕಿ 7ರಲ್ಲಿ ಔಟಾಗಿದ್ದಾರೆ. ಇದು ಯಾವುದೇ ಬೌಲರ್‌ ಪೈಕಿ ಗರಿಷ್ಠ. ಹೀಗಾಗಿ ಕೊಹ್ಲಿ ಹಾಗೂ ಸಂದೀಪ್‌ ನಡುವಿನ ಹಣಾಹಣಿ ಕುತೂಹಲ ಕೆರಳಿಸಿದೆ.

ಬೌಲಿಂಗ್‌ ವಿಭಾಗದಲ್ಲಿ ಆರ್‌ಸಿಬಿಗೆ ಹೇಜಲ್‌ವುಡ್‌, ಭುವನೇಶ್ವರ್‌ ಬಲ ಒದಗಿಸಲಿದ್ದಾರೆ. ಆದರೆ ಸ್ಪಿನ್ನರ್‌ಗಳು ಇನ್ನಷ್ಟು ಸ್ಥಿರ ಪ್ರದರ್ಶನ ತೋರಬೇಕಾದ ಅಗತ್ಯವಿದೆ. ಕೃನಾಲ್‌ ಪಾಂಡ್ಯ, ಸುಯಶ್‌ ಶರ್ಮಾ ಮತ್ತಷ್ಟು ಪರಿಣಾಮಕಾರಿ ದಾಳಿ ಸಂಘಟಿಸಬೇಕಿದೆ.

ಮತ್ತೊಂದೆಡೆ ರಾಜಸ್ಥಾನದಲ್ಲಿ ಸ್ಫೋಟಕ ಯುವ ಬ್ಯಾಟರ್‌ಗಳಿದ್ದಾರೆ. ನಾಯಕ ಸಂಜು ಸ್ಯಾಮ್ಸನ್‌, ಯಶಸ್ವಿ ಜೈಸ್ವಾಲ್‌, ರಿಯಾನ್ ಪರಾಗ್‌, ನಿತೀಶ್‌ ರಾಣಾ ಅಬ್ಬರಿಸಬೇಕಿದೆ. ಧ್ರುವ್‌ ಜುರೆಲ್‌, ಹೆಟ್ಮೇಯರ್‌ ಲಯ ಕಂಡುಕೊಳ್ಳಬೇಕಾದ ಅವಶ್ಯಕತೆಯಿದೆ.

ಹಸಿರು ಜೆರ್ಸಿ ಧರಿಸಿ

ಆಡಿದಾಗ 9 ಸೋಲು!

ಆರ್‌ಸಿಬಿ ಈ ಪಂದ್ಯದಲ್ಲಿ ಹಸಿರು ಬಣ್ಣದ ಜೆರ್ಸಿ ಧರಿಸಿ ಆಡಲಿದೆ. ಪರಿಸರ ಸಂರಕ್ಷಣೆ ಜಾಗೃತಿಗಾಗಿ ಪ್ರತಿ ವರ್ಷ ಒಂದು ಪಂದ್ಯದಲ್ಲಿ ಆರ್‌ಸಿಬಿ ಹಸಿರು ಜೆರ್ಸಿ ಆಡುತ್ತದೆ. ಆದರೆ ತಂಡ ಹಸಿರು ಜೆರ್ಸಿನಲ್ಲಿ ಆಡಿದಾಗ ಸೋತಿದ್ದೇ ಹೆಚ್ಚು. ಈ ವರೆಗೂ 14 ಪಂದ್ಯಗಳ ಪೈಕಿ 9ರಲ್ಲಿ ಸೋತಿದೆ. 4ರಲ್ಲಿ ಮಾತ್ರ ಗೆಲುವು ಸಾಧಿಸಿದ್ದು, 1 ಪಂದ್ಯ ರದ್ದುಗೊಂಡಿದೆ.

ಮುಖಾಮುಖಿ: 31

ಆರ್‌ಸಿಬಿ: 15

ರಾಜಸ್ಥಾನ: 14

ಫಲಿತಾಂಶವಿಲ್ಲ: 2

ಸಂಭಾವ್ಯ ಆಟಗಾರರು

ಆರ್‌ಸಿಬಿ: ಫಿಲ್‌ ಸಾಲ್ಟ್‌, ಕೊಹ್ಲಿ, ದೇವದತ್‌, ರಜತ್‌(ನಾಯಕ), ಲಿವಿಂಗ್‌ಸ್ಟೋನ್/ಬೆಥೆಲ್‌, ಜಿತೇಶ್‌, ಡೇವಿಡ್‌, ಕೃನಾಲ್‌, ಭುವನೇಶ್ವರ್‌, ಹೇಜಲ್‌ವುಡ್‌, ದಯಾಳ್‌, ಸುಯಶ್‌.

ರಾಜಸ್ಥಾನ: ಸಂಜು(ನಾಯಕ), ಜೈಸ್ವಾಲ್‌, ನಿತೀಶ್‌ ರಾಣಾ, ರಿಯಾನ್‌, ಧ್ರುವ್‌ ಜುರೆಲ್‌, ಹೆಟ್ಮೇಯರ್‌, ಹಸರಂಗ, ಆರ್ಚರ್‌, ತೀಕ್ಷಣ, ತುಷಾರ್‌/ಕಾರ್ತಿಕೇಯ, ಸಂದೀಪ್‌, ಫಾರೂಖಿ.

ಪಂದ್ಯ: ಮಧ್ಯಾಹ್ನ 3.30ಕ್ಕೆ

ಪಿಚ್‌ ರಿಪೋರ್ಟ್‌

ಜೈಪುರ ಕ್ರೀಡಾಂಗಣ ಪಿಚ್‌ ಸ್ಪರ್ಧಾತ್ಮಕವಾಗಿದ್ದು, ಮೊದಲ ಇನ್ನಿಂಗ್ಸ್‌ ಸರಾಸರಿ ಮೊತ್ತ 162. ಇಲ್ಲಿ 57 ಐಪಿಎಲ್‌ ಪಂದ್ಯಗಳು ನಡೆದಿದ್ದು, 37ರಲ್ಲಿ ಚೇಸಿಂಗ್‌ ತಂಡ ಗೆದ್ದಿದೆ. ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳಬಹುದು.