17ನೇ ಆವೃತ್ತಿ ಪ್ಯಾರಾಲಿಂಪಿಕ್ಸ್‌ : ಶೂಟರ್‌ ರುಬಿನಾ ಫ್ರಾನ್ಸಿಸ್‌ ಪ್ಯಾರಾ ಕಂಚಿಗೆ ಕಿಸ್‌

| Published : Sep 01 2024, 01:56 AM IST / Updated: Sep 01 2024, 04:10 AM IST

17ನೇ ಆವೃತ್ತಿ ಪ್ಯಾರಾಲಿಂಪಿಕ್ಸ್‌ : ಶೂಟರ್‌ ರುಬಿನಾ ಫ್ರಾನ್ಸಿಸ್‌ ಪ್ಯಾರಾ ಕಂಚಿಗೆ ಕಿಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ಭಾರತ ಪಂಚ ಪದಕದ ಸಾಧನೆ. ಮಹಿಳೆಯರ 10 ಮೀಟರ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ರುಬಿನಾಗೆ 3ನೇ ಸ್ಥಾನ. ಶೂಟಿಂಗ್‌ನಲ್ಲೇ ಭಾರತಕ್ಕೆ ಈ ಬಾರಿ 4ನೇ ಪದಕ. ಬ್ಯಾಡ್ಮಿಂಟನ್‌ನಲ್ಲಿ ಭಾರತ ಉತ್ತಮ ಪ್ರದರ್ಶನ. ರೋಯಿಂಗ್‌, ಸೈಕ್ಲಿಂಗ್‌ನಲ್ಲಿ ವಿಫಲ

ಪ್ಯಾರಿಸ್‌: 17ನೇ ಆವೃತ್ತಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯರ ಪದಕ ಬೇಟೆ ಮುಂದುವರಿದಿದೆ. ಅದರಲ್ಲೂ ದೇಶದ ಶೂಟರ್‌ಗಳು ಕ್ರೀಡಾಕೂಟದಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಿದ್ದು, ಮತ್ತೊಂದು ಪದಕ ಕೊರಳಿಗೇರಿಸಿಕೊಂಡಿದ್ದಾರೆ. 

ಶುಕ್ರವಾರ ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ಎಸ್‌ಎಚ್‌1 ವಿಭಾಗದಲ್ಲಿ ರುಬಿನಾ ಫ್ರಾನ್ಸಿನ್‌ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಇದು ಕ್ರೀಡಾಕೂಟದಲ್ಲಿ ಭಾರತಕ್ಕೆ ಸಿಕ್ಕ ಒಟ್ಟಾರೆ 5, ಶೂಟಿಂಗ್‌ನಲ್ಲಿ 4ನೇ ಪದಕ.ಶನಿವಾರ ಅರ್ಹತಾ ಸುತ್ತಿನಲ್ಲಿ 7ನೇ ಸ್ಥಾನಿಯಾಗಿದ್ದ 25 ವರ್ಷದ ರುಬಿನಾ, ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರು. 

8 ಶೂಟರ್‌ಗಳಿದ್ದ ಫೈನಲ್‌ನಲ್ಲಿ ರುಬಿನಾ 211.1 ಅಂಕಗಳೊಂದಿಗೆ 3ನೇ ಸ್ಥಾನ ಗಿಟ್ಟಿಸಿಕೊಂಡರು. ಆರಂಭದಿಂದಲೂ 3ನೇ ಸ್ಥಾನ ಕಾಯ್ದುಕೊಂಡಿದ್ದ ರುಬಿನಾ ಕೊನೆಯಲ್ಲೂ ಯಾವುದೇ ಒತ್ತಡಕ್ಕೆ ಒಳಗಾಗದೆ ಪದಕ ಗೆದ್ದರು.

ಇರಾನ್‌ನ ಜವನ್‌ಮಾರ್ಡಿ ಸರೇಹ್‌ 236.8 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರೆ, ಟರ್ಕಿಯ ಅಯ್ಸೆಲ್‌ ಒಜ್ಗನ್‌ 231.1 ಅಂಕ ಪಡೆದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಇದಕ್ಕೂ ಮುನ್ನ ಶುಕ್ರವಾರ ಮಹಿಳೆಯರ 10 ಮೀ. ಏರ್‌ ರೈಫಲ್‌ (ಎಸ್‌ಎಚ್‌ 1)ನಲ್ಲಿ ಅವನಿ ಲೇಖರಾ ಚಿನ್ನ, ಮೋನಾ ಅಗರ್‌ವಾಲ್‌ ಕಂಚು, ಪುರುಷರ 10 ಮೀ. ಏರ್‌ ಪಿಸ್ತೂಲ್‌(ಎಸ್‌ಎಚ್‌1) ವಿಭಾಗದಲ್ಲಿ ಮನೀಶ್‌ ನರ್ವಾಲ್‌ ಬೆಳ್ಳಿ ಪದಕ ಗೆದ್ದಿದ್ದರು.

ಪಿಸ್ತೂಲ್‌ ವಿಭಾಗದಲ್ಲಿ ಪದಕ ಗೆದ್ದ ದೇಶದ ಮೊದಲ ಮಹಿಳೆ

ರುಬಿನಾ ಪ್ಯಾರಾಲಿಂಪಿಕ್ಸ್‌ ಶೂಟಿಂಗ್‌ನ ಪಿಸ್ತೂಲ್‌ ವಿಭಾಗದಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎನಿಸಿಕೊಂಡರು. ಅವನಿ ಲೇಖರಾ, ಮೋನಾ ಅಗರ್‌ವಾಲ್‌ ರೈಫಲ್‌ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ಪದಕ ಗೆದ್ದಿದ್ದಾರೆ.

ಮೆಕ್ಯಾನಿಕ್‌ ಮಗಳು ರುಬಿನಾ ಈಗ ಪ್ಯಾರಾಲಿಂಪಿಕ್‌ ಸಾಧಕಿ

ಮಧ್ಯಪ್ರದೇಶದ ಜಬಲ್‌ಪುರ್‌ನಲ್ಲಿ ಮಧ್ಯಮ ವರ್ಗದಲ್ಲಿ ಜನಿಸಿದ ರುಬಿನಾರ ಕಾಲಿನಲ್ಲಿ ಬಾಲ್ಯದಲ್ಲೇ ಸರಿಯಾದ ಚಲನೆಗಳಿರಲಿಲ್ಲ. ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಕುಟುಂಬದಲ್ಲಿ ಬೆಳೆದಿದ್ದ ರುಬಿನಾ 2015ರಲ್ಲಿ ಒಲಿಂಪಿಕ್‌ ಪದಕ ವಿಜೇತ ಶೂಟರ್‌ ಗಗನ್ ನಾರಂಗ್ ಅವರ ಸಾಧನೆಯಿಂದ ಸ್ಫೂರ್ತಿ ಪಡೆದು ಶೂಟಿಂಗ್‌ ಕಲಿಯಲು ಆರಂಭಿಸಿದರು. 

ಹಣಕಾಸಿನ ಅಡೆತಡೆಗಳ ಹೊರತಾಗಿಯೂ, ರುಬಿನಾರನ್ನು ಅವರ ತಂದೆ 2017ರಲ್ಲಿ ಪುಣೆಯ ಪುಣೆಯ ಗನ್ ಫಾರ್ ಗ್ಲೋರಿ ಶೂಟಿಂಗ್‌ ಅಕಾಡೆಮಿಗೆ ಸೇರಿಸಿದರು. ಜಯ್‌ಪ್ರಕಾಶಾ ನಾಟಿಯಾಲ್‌ರ ಕೋಚಿಂಗ್‌, ಖ್ಯಾತ ಕೋಚ್‌ ಜಸ್‌ಪಾಲ್‌ ರಾಣಾರ ಮಾರ್ಗದರ್ಶನದಲ್ಲಿ ಬೆಳೆದ ರುಬಿನಾ ಈ ವರೆಗೂ ಹಲವು ಜಾಗತಿಕ ಕ್ರೀಡಾಕೂಟಗಳಲ್ಲಿ ಪದಕ ಗೆದ್ದಿದ್ದಾರೆ. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 7ನೇ ಸ್ಥಾನ ಪಡೆದಿದ್ದ ರುಬಿನಾ, 2022ರ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಕಂಚು ಜಯಿಸಿದ್ದಾರೆ. ಶೂಟಿಂಗ್‌ ವಿಶ್ವಕಪ್‌ನಲ್ಲಿ ಒಟ್ಟು 6 ಪದಕಗಳನ್ನೂ ತಮ್ಮದಾಗಿಸಿಕೊಂಡಿದ್ದಾರೆ.

09 ಪದಕ: ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲೇ ಭಾರತ ಈ ವರೆಗೂ ಶೂಟಿಂಗ್‌ನಲ್ಲಿ 9 ಪದಕ ಗೆದ್ದಿದೆ.

05 ಪದಕ: ಪ್ಯಾರಾಲಿಂಪಿಕ್ಸ್‌ ಆವೃತ್ತಿಯೊಂದರಲ್ಲಿ ಭಾರತ 5+ ಪದಕ ಗೆದ್ದಿದ್ದು ಇದು 2ನೇ ಬಾರಿ. ಟೋಕಿಯೋದಲ್ಲಿ 19 ಪದಕ ಜಯಿಸಿತ್ತು.

03 ಶೂಟರ್‌: ರುಬಿನಾ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ 3ನೇ ಮಹಿಳಾ ಶೂಟರ್‌. ಅವನಿ, ಮೋನಾ ಇತರ ಸಾಧಕರು.