ಸಾರಾಂಶ
ರಾಜ್‌ಕೋಟ್: ತವರಿನಲ್ಲಿ ಕಳೆದ 6 ವರ್ಷಗಳಿಂದ ಸತತ 16 ಟಿ20 ಸರಣಿಗಳಲ್ಲಿ ಅಜೇಯವಾಗಿ ಉಳಿದಿರುವ ಭಾರತ ತಂಡ, ಇದೀಗ ಮತ್ತೊಂದು ಸರಣಿ ಜಯದೊಂದಿಗೆ ತನ್ನ ದಾಖಲೆಯನ್ನು ಮುಂದುವರಿಸಲು ಎದುರು ನೋಡುತ್ತಿದೆ. ಮಂಗಳವಾರ ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಸ್‌ಸಿಎ) ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ 3ನೇ ಟಿ20 ಪಂದ್ಯವನ್ನು ಆಡಲಿರುವ ಭಾರತ, ಸರಣಿ ಜಯದ ಮೇಲೆ ಕಣ್ಣಿಟ್ಟಿದೆ. 5 ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಭಾರತ, ಇನ್ನೂ 2 ಪಂದ್ಯ ಬಾಕಿ ಇರುವಾಗಲೇ ಸರಣಿಯನ್ನು ವಶಪಡಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.
ಕೋಲ್ಕತಾದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಆಲ್ರೌಂಡ್ ಆಟ ಪ್ರದರ್ಶಿಸಿ ಭರ್ಜರಿ ಗೆಲುವು ಸಾಧಿಸಿದ್ದ ಭಾರತ, ಚೆನ್ನೈನಲ್ಲಿ ನಡೆದ 2ನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡರೂ, ತಿಲಕ್ ವರ್ಮಾ ಅವರ ಏಕಾಂಗಿ ಹೋರಾಟದ ನೆರವಿನಿಂದ 2 ವಿಕೆಟ್ ರೋಚಕ ಜಯ ಪಡೆದಿತ್ತು. ಈ ಪಂದ್ಯದಲ್ಲಿ ಸುಧಾರಿತ ಬ್ಯಾಟಿಂಗ್ ಪ್ರದರ್ಶನ ತೋರಲು ಭಾರತ ಎದುರು ನೋಡುತ್ತಿದೆ.
ಪ್ರಮುಖವಾಗಿ ನಾಯಕ ಸೂರ್ಯಕುಮಾರ್ ಯಾದವ್ ಲಯಕ್ಕೆ ಮರಳಬೇಕಿದ್ದು, ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಅವರಿಂದ ಸ್ಥಿರ ಪ್ರದರ್ಶನ ಮೂಡಿಬರಬೇಕಿದೆ. ಆಲ್ರೌಂಡರ್ ನಿತೀಶ್ ರೆಡ್ಡಿ ಗಾಯಗೊಂಡು ಹೊರಬಿದ್ದಿರುವ ಕಾರಣ, ಅವರ ಬದಲು ತಂಡ ಕೂಡಿಕೊಂಡಿರುವ ಶಿವಂ ದುಬೆಗೆ ಅವಕಾಶ ಸಿಗಲಿದೆ. ಧೃವ್ ಜುರೆಲ್ ಹಾಗೂ ರಮಣ್‌ದೀಪ್ ಸಿಂಗ್‌ಗೆ ಸಹ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಈ ಪಂದ್ಯದಲ್ಲೂ ಭಾರತ 4 ಸ್ಪಿನ್ನರ್‌ಗಳನ್ನು ಆಡಿಸುವುದು ಬಹುತೇಕ ಖಚಿತ. ರಾಜ್‌ಕೋಟ್‌ನ ಪಿಚ್ ಸಾಮಾನ್ಯವಾಗಿ ಸ್ಪಿನ್ ಸ್ನೇಹಿಯಾಗಿರಲಿದ್ದು, ಬ್ಯಾಟರ್‌ಗಳಿಗೂ ಅನುಕೂಲಕಾರಿಯಾಗಿರಲಿದೆ. ಇಂಗ್ಲೆಂಡ್‌ಗೆ ಒತ್ತಡ: ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಇಂಗ್ಲೆಂಡ್‌ಗೆ ಈ ಪಂದ್ಯದಲ್ಲೂ ಭಾರತೀಯ ಸ್ಪಿನ್ನರ್‌ಗಳಿಂದ ಭಾರಿ ಸವಾಲು ಎದುರಾಗಲಿದೆ. ಪವರ್-ಪ್ಲೇನಲ್ಲಿ ಅರ್ಶ್‌ದೀಪ್ ಸಿಂಗ್, ಆನಂತರ ವರುಣ್ ಚಕ್ರವರ್ತಿ ಸೇರಿ ಭಾರತೀಯ ಸ್ಪಿನ್ನರ್‌ಗಳು ಇಂಗ್ಲೆಂಡ್ ಬ್ಯಾಟರ್‌ಗಳನ್ನು ಬಲವಾಗಿ ಕಾಡುತ್ತಿದ್ದಾರೆ. ಜೋಸ್ ಬಟ್ಲರ್ ಹೊರತುಪಡಿಸಿ ಇನ್ಯಾವ ಬ್ಯಾಟರ್‌ಗೂ ಕ್ರೀಸ್‌ನಲ್ಲಿ ನೆಲೆಯೂರಿ ರನ್ ಗಳಿಸಲು ಸಾಧ್ಯವಾಗುತ್ತಿಲ್ಲ. ಸುಧಾರಿತ ಪ್ರದರ್ಶನ ತೋರಲೇಬೇಕಾದ ಒತ್ತಡಕ್ಕೆ ಇಂಗ್ಲೆಂಡ್ ಸಿಲುಕಿದೆ.
ಆಟಗಾರರ ಪಟ್ಟಿ
ಭಾರತ (ಸಂಭವನೀಯ): ಸ್ಯಾಮ್ಸನ್, ಅಭಿಷೇಕ್, ತಿಲಕ್ , ಸೂರ್ಯ (ನಾಯಕ), ಹಾರ್ದಿಕ್, ಶಿವಂ ದುಬೆ, ಅಕ್ಷರ್, ವಾಷಿಂಗ್ಟನ್, ಬಿಷ್ಣೋಯ್, ಅರ್ಶ್‌ದೀಪ್, ವರುಣ್.
ಇಂಗ್ಲೆಂಡ್ (ಆಡುವ ಹನ್ನೊಂದು): ಸಾಲ್ಟ್, ಡಕೆಟ್, ಬಟ್ಲರ್ (ನಾಯಕ), ಬ್ರೂಕ್, ಲಿವಿಂಗ್‌ಸ್ಟೋನ್, ಸ್ಮಿತ್, ಓವರ್‌ಟನ್, ಬ್ರೈಡನ್ ಕಾರ್ಸ್, ಆರ್ಚರ್, ವುಡ್, ರಶೀದ್. ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್