ಚೊಚ್ಚಲ ಪಂದ್ಯದಲ್ಲೇ ಬೂಮ್ರಾರ ಬೆವರಿಳಿಸಿದ ಆಸ್ಟ್ರೇಲಿಯಾದ 19 ವರ್ಷದ ಕಾನ್ಸ್ಟಾಸ್‌!

| Published : Dec 27 2024, 12:47 AM IST / Updated: Dec 27 2024, 04:08 AM IST

ಸಾರಾಂಶ

ಕಾನ್ಸ್ಟಾಸ್‌ ಅವರ ಸ್ಕೂಪ್‌, ರಿವರ್ಸ್‌ ಸ್ಕೂಪ್‌ ಹೊಡೆತಗಳು ಪ್ರೇಕ್ಷಕರನ್ನು ರಂಜಿಸಿದವು. ಸಹಜವಾಗಿಯೇ ಕಾನ್ಸ್ಟಾಸ್‌ ತಾವು ಭವಿಷ್ಯ ತಾರೆ ಎನ್ನುವ ಭರವಸೆ ಮೂಡಿಸಿದ್ದಾರೆ.

ಮೆಲ್ಬರ್ನ್‌: ಸ್ಯಾಮ್‌ ಕಾನ್ಸ್ಟಾಸ್‌, ಈ ವರ್ಷದ ಆರಂಭದಲ್ಲಿ ಅಂಡರ್‌-19 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ವಿರುದ್ಧ ಆಡಿ ಸೋಲುಂಡಿದ್ದರು. ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಟೆಸ್ಟ್‌ ತಂಡದ ಆರಂಭಿಕನಾಗಿ ಕಣಕ್ಕಿಳಿದು, ಚೊಚ್ಚಲ ಪಂದ್ಯದಲ್ಲೇ ಮಿಂಚಿದ್ದಾರೆ. 

ವಿಶ್ವ ನಂ.1 ವೇಗಿ ಜಸ್‌ಪ್ರೀತ್‌ ಬೂಮ್ರಾರ ಬೌಲಿಂಗ್‌ ಅನ್ನು ನಿರಾಯಾಸವಾಗಿ ಎದುರಿಸಿದ ಕಾನ್ಸ್ಟಾಸ್‌ ಆಸ್ಟ್ರೇಲಿಯನ್ನರೇ ಅಚ್ಚರಿ ಪಡುವಂತೆ ಮಾಡಿದರು. ಅವರ ಸ್ಕೂಪ್‌, ರಿವರ್ಸ್‌ ಸ್ಕೂಪ್‌ ಹೊಡೆತಗಳು ಪ್ರೇಕ್ಷಕರನ್ನು ರಂಜಿಸಿದವು. ಸಹಜವಾಗಿಯೇ ಕಾನ್ಸ್ಟಾಸ್‌ ತಾವು ಭವಿಷ್ಯ ತಾರೆ ಎನ್ನುವ ಭರವಸೆ ಮೂಡಿಸಿದ್ದಾರೆ.

ಬೂಮ್ರಾರ ಒಂದೇ ಓವರಲ್ಲಿ 18 ರನ್‌ ದೋಚಿದ ಸ್ಯಾಮ್‌!

ಜಸ್‌ಪ್ರೀತ್‌ ಬೂಮ್ರಾರ ಒಂದೇ ಓವರಲ್ಲಿ ಸ್ಯಾಮ್‌ ಕಾನ್ಸ್ಟಾಸ್‌ 18 ರನ್‌ ಚಚ್ಚಿದರು. ತಮ್ಮ ಟೆಸ್ಟ್‌ ವೃತ್ತಿಬದುಕಿನಲ್ಲಿ ಬೂಮ್ರಾ ಒಂದು ಓವರಲ್ಲಿ ನೀಡಿದ ಅತಿಹೆಚ್ಚು ರನ್‌ ಇದು. ಇನ್ನು, ಬೂಮ್ರಾರ ಒಂದು ಸ್ಪೆಲ್‌ನಲ್ಲಿ ಕಾನ್ಸ್ಟಾಸ್‌ 36 ಎಸೆತದಲ್ಲಿ 34 ರನ್‌ ಚಚ್ಚಿದರು. ಇದು ಬೂಮ್ರಾ ಒಂದು ಸ್ಪೆಲ್‌ನಲ್ಲಿ ನೀಡಿದ ಅತಿಹೆಚ್ಚು ರನ್‌. 4483 ಎಸೆತ: ಬೂಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ 4483 ಎಸೆತಗಳಲ್ಲಿ ಸಿಕ್ಸರ್‌ ಚಚ್ಚಿಸಿಕೊಂಡಿರಲಿಲ್ಲ. ಆ ದಾಖಲೆಯನ್ನು ಸ್ಯಾಮ್‌ ಕಾನ್ಸ್ಟಾಸ್‌ ಅಂತ್ಯಗೊಳಿಸಿದರು.

02ನೇ ಬ್ಯಾಟರ್‌: ಟೆಸ್ಟ್‌ ಕ್ರಿಕೆಟ್‌ನಲ್ಲಿ ಬೂಮ್ರಾ ಬೌಲಿಂಗ್‌ನಲ್ಲಿ 2 ಸಿಕ್ಸರ್‌ ಬಾರಿಸಿದ ಕೇವಲ 2ನೇ ಆಟಗಾರ ಕಾನ್ಸ್ಟಾಸ್‌. ಜೋಸ್‌ ಬಟ್ಲರ್‌ ಮೊದಲಿಗ.