ಮಹಿಳಾ ವಿಭಾಗದ ರಾಷ್ಟ್ರೀಯ ನೆಟ್‌ ಬಾಲ್‌ ಚಾಂಪಿಯನ್‌ಶಿಪ್‌ : ಕಂಚಿನ ಪದಕಕ್ಕೆ ಕೊರಳೊಡ್ಡಿದ ಕರ್ನಾಟಕ

| Published : Jul 30 2024, 12:39 AM IST / Updated: Jul 30 2024, 04:36 AM IST

ಸಾರಾಂಶ

ಮಹಿಳಾ ವಿಭಾಗದಲ್ಲಿ ಕರ್ನಾಟಕ ತಂಡ ಕಂಚಿನ ಪದಕ ತನ್ನದಾಗಿಸಿಕೊಂಡರೆ, ಪುರುಷರ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿತು. ಆದರೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ.

ಭಿವಾನಿ(ಹರ್ಯಾಣ): ಇಲ್ಲಿ ನಡೆದ 42ನೇ ರಾಷ್ಟ್ರೀಯ ಹಿರಿಯರ ನೆಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಪುರುಷ ಹಾಗೂ ಮಹಿಳಾ ತಂಡಗಳು ಉತ್ತಮ ಸಾಧನೆ ಮಾಡಿದೆ. ಮಹಿಳಾ ವಿಭಾಗದಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡರೆ, ಪುರುಷರ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿತು. ಮಹಿಳಾ ತಂಡ ಗುಂಪು ಹಂತದಲ್ಲಿ ಚಂಡೀಗಢ ವಿರುದ್ಧ 17-15 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದರೆ, 2ನೇ ಪಂದ್ಯದಲ್ಲಿ ಗುಜರಾತ್‌ ವಿರುದ್ಧ ವಾಕ್‌ಓವರ್‌ ಪಡೆಯಿತು. 

ಬಳಿಕ ಪ್ರಿ ಕ್ವಾರ್ಟರ್‌ನಲ್ಲಿ ಕರ್ನಾಟಕ ಮಹಿಳಾ ತಂಡ ಪಶ್ಚಿಮ ಬಂಗಾಳ ವಿರುದ್ಧ ಪ್ರಾಬಲ್ಯ ಸಾಧಿಸಿ 22-10 ಅಂಕಗಳಲ್ಲಿ ಜಯಭೇರಿ ಬಾರಿಸಿತು. ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ರಾಜ್ಯ ತಂಡ ಕೇರಳವನ್ನು 26-23 ಅಂಕಗಳಿಂದ ಮಣಿಸಿತು. ಆದರೆ ಸೆಮಿಫೈನಲ್‌ನಲ್ಲಿ ಹರ್ಯಾಣ ವಿರುದ್ಧ 17-21ರಿಂದ ಸೋತಿತು. ಹೀಗಾಗಿ ಪಂಜಾಬ್‌ ಜೊತೆ ಕಂಚಿನ ಪದಕ ಹಂಚಿಕೊಂಡಿತು.

ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡ ಗುಂಪು ಹಂತದಲ್ಲಿ ಕ್ರಮವಾಗಿ ರಾಜಸ್ಥಾನ ವಿರುದ್ಧ 20-7 ಹಾಗೂ ಅಸ್ಸಾಂ ವಿರುದ್ಧ 20-10 ಅಂಕಗಳಿಂದ ಜಯಗಳಿಸಿತು. ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ತಂಡಕ್ಕೆ ಮಧ್ಯಪ್ರದೇಶ ವಿರುದ್ಧ 17-13 ಅಂಕಗಳಿಂದ ಗೆಲುವು ಲಭಿಸಿತು. ಆದರೆ ಕ್ವಾರ್ಟರ್‌ ಫೈನಲ್‌ನಲ್ಲಿ ಡೆಲ್ಲಿ ವಿರುದ್ಧ 20-25 ಅಂತರದಲ್ಲಿ ಸೋತು ಪದಕ ತಪ್ಪಿಸಿಕೊಂಡಿತು.