ಕೈ ಬೆರಳಿಗೆ ಗಾಯ : ಭಾರತ ವಿರುದ್ಧ 2ನೇ ಟೆಸ್ಟ್‌ಗೆ ಬಾಂಗ್ಲಾ ಆಟಗಾರ ಶಕೀಬ್‌ ಅಲ್‌ ಹಸನ್‌ ಡೌಟ್‌!

| Published : Sep 24 2024, 01:55 AM IST / Updated: Sep 24 2024, 04:25 AM IST

ಸಾರಾಂಶ

ಈ ಬಗ್ಗೆ ಬಾಂಗ್ಲಾ ಕ್ರಿಕೆಟ್‌ ಮಂಡಳಿ ಸೋಮವಾರ ಪ್ರಕಟಣೆ ಹೊರಡಿಸಿದೆ. ಆಟಗಾರನ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇವೆ ಎಂದಿದೆ. 2ನೇ ಟೆಸ್ಟ್‌ ಸೆ.27ರಿಂದ ಆರಂಭಗೊಳ್ಳಲಿದೆ.

ಕಾನ್ಪುರ: ಭಾರತ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದ್ದ ಬಾಂಗ್ಲಾದೇಶಕ್ಕೆ 2ನೇ ಟೆಸ್ಟ್‌ಗೂ ಮುನ್ನ ಆಘಾತ ಎದುರಾಗಿದೆ. ಆರಂಭಿಕ ಪಂದ್ಯದ ವೇಳೆ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದ ಹಿರಿಯ ಆಲ್ರೌಂಡರ್‌ ಶಕೀಬ್‌ ಅಲ್‌ ಹಸನ್‌ ಸೆ.27ರಿಂದ ಆರಂಭಗೊಳ್ಳಲಿರುವ 2ನೇ ಪಂದ್ಯದಲ್ಲಿ ಆಡುವುದು ಅನುಮಾನವೆನಿಸಿದೆ. 

ಈ ಬಗ್ಗೆ ಬಾಂಗ್ಲಾ ಕ್ರಿಕೆಟ್‌ ಮಂಡಳಿ ಸೋಮವಾರ ಪ್ರಕಟಣೆ ಹೊರಡಿಸಿದೆ. ಶಕೀಬ್‌ ಕೈ ಬೆರಳಿನ ಗಾಯದ ಬಗ್ಗೆ ವೈದ್ಯರು ನಿಗಾ ಇಟ್ಟಿದ್ದಾರೆ. ಅವರನ್ನು ಪರೀಕ್ಷಿಸಲಾಗಿದೆ. 2ನೇ ಪಂದ್ಯದಲ್ಲಿ ಶಕೀಬ್‌ ಆಡುವ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇವೆ ಎಂದಿದೆ. ಆರಂಭಿಕ ಪಂದ್ಯದಲ್ಲಿ ಜಸ್‌ಪ್ರೀತ್‌ ಬೂಮ್ರಾ ಎಸೆದ ಚೆಂಡು ಶಕೀಬ್‌ ಕೈಗೆ ಬಡಿದಿತ್ತು. ಪಂದ್ಯದ 2 ಇನ್ನಿಂಗ್ಸ್‌ಗಳಲ್ಲಿ ಶಕೀಬ್‌ ಒಟ್ಟು 57 ರನ್‌ ಸಿಡಿಸಿದ್ದರು. ಯಾವುದೇ ವಿಕೆಟ್ ಪಡೆದಿರಲಿಲ್ಲ.

ಇರಾನಿ ಕಪ್‌: ಶಾರ್ದೂಲ್‌, ಶ್ರೇಯಸ್‌ ಆಡುವ ಸಾಧ್ಯತೆ

ಲಖನೌ: ಅ.1ರಿಂದ 5ರ ವರೆಗೆ ಲಖನೌ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಶೇಷ ಭಾರತ ವಿರುದ್ಧದ ಇರಾನಿ ಕಪ್‌ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಹಾಗೂ ಶಾರ್ದೂಲ್‌ ಠಾಕೂರ್‌ ಹಾಲಿ ರಣಜಿ ಚಾಂಪಿಯನ್‌ ಮುಂಬೈ ತಂಡದ ಪರ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಮುಂಬೈ ಕ್ರಿಕೆಟ್‌ ಸಂಸ್ಥೆ(ಎಂಸಿಎ) ಇನ್ನಷ್ಟೇ ತಂಡ ಪ್ರಕಟಿಸಬೇಕಿದೆ. 

ಇತ್ತೀಚೆಗೆ ಅಜಿಂಕ್ಯ ರಹಾನೆ ನಾಯಕತ್ವದಲ್ಲೇ ಮುಂಬೈ ತಂಡ ರಣಜಿ ಟ್ರೋಫಿ ಗೆದ್ದಿತ್ತು. ಅವರೇ ಇರಾನಿ ಕಪ್‌ನಲ್ಲೂ ತಂಡ ಮುನ್ನಡೆಸುವ ನಿರೀಕ್ಷೆಯಿದೆ. ಶ್ರೇಯಸ್‌ ಹಾಗೂ ಶಾರ್ದೂಲ್‌ ಕೂಡಾ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಎಂಸಿಎ ಮಂಗಳವಾರ ತಂಡ ಪ್ರಕಟಿಸುವ ನಿರೀಕ್ಷೆಯಿದೆ.