ಸಾರಾಂಶ
ಮುಂಬೈ: ರನ್ ಬರ ಎದುರಿಸುತ್ತಿರುವ ಅನುಭವಿ ಆಟಗಾರರಾದ ಶ್ರೇಯಸ್ ಅಯ್ಯರ್ ಹಾಗೂ ಅಜಿಂಕ್ಯ ರಹಾನೆ ಕಳಪೆ ಆಟ ಮುಂದುವರಿಸಿದ ಪರಿಣಾಮ, ಭಾನುವಾರದಿಂದ ಆರಂಭಗೊಂಡ ರಣಜಿ ಟ್ರೋಫಿ ಫೈನಲ್‌ನಲ್ಲಿ ವಿದರ್ಭ ವಿರುದ್ಧ ಮುಂಬೈ 224 ರನ್‌ಗಳ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು.ಮೊದಲ ಇನ್ನಿಂಗ್ಸ್ ಆರಂಭಿಸಿರುವ ವಿದರ್ಭ ಮೊದಲ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿದ್ದು, ಇನ್ನೂ 193 ರನ್ ಹಿನ್ನಡೆಯಲ್ಲಿದೆ. ಮೊದಲ ಇನ್ನಿಂಗ್ಸ್ ಮುನ್ನಡೆಗಾಗಿ ಎರಡೂ ತಂಡಗಳು ತೀವ್ರ ಪೈಪೋಟಿ ನಡೆಸುತ್ತಿವೆ.ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ವಿದರ್ಭವನ್ನು ಮುಂಬೈ ಆರಂಭಿಕರಾದ ಪೃಥ್ವಿ ಶಾ(46) ಹಾಗೂ ಭುಪೆನ್ ಲಾಲ್‌ವಾನಿ(37) ಕಾಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 81 ರನ್ ಜೊತೆಯಾಟವಾಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಆದರೆ ಮುಂಬೈ ದಿಢೀರ್ ಕುಸಿತ ಅನುಭವಿಸಿತು. ಕೇವಲ 30 ರನ್ ಅಂತರದಲ್ಲಿ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.ಶಾರ್ದೂಲ್ ಠಾಕೂರ್ 69 ಎಸೆತದಲ್ಲಿ 8 ಬೌಂಡರಿ, 3 ಸಿಕ್ಸರ್‌ನೊಂದಿಗೆ 75 ರನ್ ಸಿಡಿಸಿ ತಂಡ 200ರ ಗಡಿ ದಾಟಲು ನೆರವಾದರು.ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ವಿದರ್ಭಕ್ಕೆ ಶಾರ್ದೂಲ್ ಮೊದಲ ಆಘಾತ ನೀಡಿದರು. ಧೃವ್ ಶೋರೆ (0)ಯನ್ನು ಪೆವಿಲಿಯನ್‌ಗಟ್ಟಿದರು. ಅಮನ್(8) ಹಾಗೂ ಕರುಣ್ ನಾಯರ್ (0)ರನ್ನು ಅನುಭವಿ ಧವಳ್ ಕುಲ್ಕರ್ಣಿ ಕಟ್ಟಿಹಾಕಿದರು.ಸ್ಕೋರ್: ಮುಂಬೈ 224/10 (ಶಾರ್ದೂಲ್ 75, ಪೃಥ್ವಿ 46, ಹರ್ಷ್ 3-62, ಯಶ್ 3-54), ವಿದರ್ಭ 31/3 (ಅಥರ್ವ 21*, ಧವಳ್ 2-9)