ಸಾರಾಂಶ
ಬೆಂಗಳೂರು: ಕಳೆದ ವರ್ಷ ಕರ್ನಾಟಕ ತಂಡ ಬಿಟ್ಟು ಕೇರಳ ತಂಡ ಸೇರಿಕೊಂಡಿದ್ದ ತಾರಾ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಮತ್ತೆ ರಾಜ್ಯ ತಂಡಕ್ಕೆ ಮರಳಿದ್ದಾರೆ. ಇದನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ. 2013ರಿಂದ 10 ಋತುಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಶ್ರೇಯಸ್ ಕಳೆದ ವರ್ಷ ಕೇರಳ ತಂಡಕ್ಕೆ ಸೇರ್ಪಡೆಗೊಂಡಿದ್ದರು. 31 ವರ್ಷದ ಶ್ರೇಯಸ್ ಈ ವರೆಗೂ 82 ಪ್ರಥಮ ದರ್ಜೆ, 65 ಲಿಸ್ಟ್ ‘ಎ’ ಹಾಗೂ 97 ಟಿ20 ಪಂದ್ಯಗಳನ್ನಾಡಿದ್ದಾರೆ.
ಏಕಲವ್ಯ ಪ್ರಶಸ್ತಿಗೆ ಕ್ರೀಡಾ ಇಲಾಖೆ ಅರ್ಜಿ ಆಹ್ವಾನ
ಬೆಂಗಳೂರು: 2023ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ರಾಜ್ಯ ಸರ್ಕಾರದ ಕ್ರೀಡಾ ಇಲಾಖೆ ಅರ್ಜಿ ಆಹ್ವಾನಿಸಿದೆ. ಅರ್ಹ ಕ್ರೀಡಾಪಟುಗಳು ಸೆ.20 ಒಳಗಾಗಿ ಆಯಾ ಜಿಲ್ಲೆಗಳ ಕ್ರೀಡಾ ಇಲಾಖೆಯ ಉಪ/ಸಹಾಯಕ ನಿರ್ದೇಶಕರ ಮೂಲಕ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. 2019 ಜನವರಿ 1ರಿಂದ 2023ರ ಡಿಸೆಂಬರ್ 31ರ ವರೆಗಿನ ಸಾಧನೆಯನ್ನು ಪ್ರಶಸ್ತಿಗೆ ಪರಿಗಣಿಸುವುದಾಗಿ ಇಲಾಖೆ ತಿಳಿಸಿದೆ.
ಟೆಸ್ಟ್: ಇಂಗ್ಲೆಂಡ್ ವಿರುದ್ಧ ಲಂಕಾ 236ಕ್ಕೆ ಆಲೌಟ್
ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ 236 ರನ್‌ಗೆ ಆಲೌಟಾಗಿದೆ. ಕೇವಲ 6 ರನ್ ಗಳಿಸುವಷ್ಟರಲ್ಲೇ ತಂಡ 3 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಅಲ್ಪ ಚೇತರಿಸಿದ ತಂಡ 113 ರನ್ ಗಳಿಸುವಷ್ಟರಲ್ಲಿ ಮತ್ತೆ 4 ವಿಕೆಟ್ ನಷ್ಟಕ್ಕೊಳಗಾಯಿತು. ಆದರೆ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದ ಧನಂಜಯ ಡಿ ಸಿಲ್ವ(84 ಎಸೆತಗಳಲ್ಲಿ 74) ಹಾಗೂ ಮಿಲಾನ್ ರತ್ನಾಯಕೆ(135 ಎಸೆತಗಳಲ್ಲಿ 72) ತಂಡವನ್ನು ಕಾಪಾಡಿದರು. 8ನೇ ವಿಕೆಟ್‌ಗೆ ಈ ಜೋಡಿ 63 ರನ್ ಸೇರಿಸಿತು. ಬಳಿಕ 9ನೇ ವಿಕೆಟ್‌ಗೆ ರತ್ನಾಯಕೆ ಅವರು ವಿಶ್ವಾ ಫೆರ್ನಾಂಡೊ(13) ಜೊತೆಗೂಡಿ 50 ರನ್ ಒಟ್ಟುಗೂಡಿಸಿದರು. ಕ್ರಿಸ್ ವೋಕ್ಸ್ ಹಾಗೂ ಶೋಯೆಬ್ ಬಶೀರ್ ತಲಾ 3 ವಿಕೆಟ್ ಪಡೆದರು.