ಕೆ.ಎಲ್‌.ಶ್ರೀಜಿತ್‌ ಸ್ಫೋಟಕ 150 : ಮುಂಬೈ ವಿರುದ್ಧ 383 ರನ್‌ ಬೆನ್ನತ್ತಿ ಗೆದ್ದ ಕರ್ನಾಟಕ

| Published : Dec 22 2024, 01:32 AM IST / Updated: Dec 22 2024, 04:11 AM IST

ಸಾರಾಂಶ

ವಿಜಯ್‌ ಹಜಾರೆ ಏಕದಿನ. ಮುಂಬೈ ವಿರುದ್ಧ ಕರ್ನಾಟಕ ತಂಡಕ್ಕೆ 7 ವಿಕೆಟ್‌ ಭರ್ಜರಿ ಗೆಲುವು. ಶ್ರೇಯಸ್‌ 55 ಎಸೆತಕ್ಕೆ 114. ಮುಂಬೈ 4 ವಿಕೆಟ್‌ಗೆ 383. ಬೃಹತ್‌ ಗುರಿಯನ್ನು 46.2 ಓವರಲ್ಲೇ ಬೆನ್ನತ್ತಿ ಗೆದ್ದ ಮಯಾಂಕ್‌ ಪಡೆ

ಅಹಮದಾಬಾದ್‌: ಈ ಬಾರಿ ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಭರ್ಜರಿ ಶುಭಾರಂಭ ಮಾಡಿದೆ. ಬೌಲರ್‌ಗಳು ವೈಫಲ್ಯ ಅನುಭವಿಸಿದರೂ, ಕೆ.ಎಲ್‌.ಶ್ರೀಜಿತ್‌ ಸೇರಿದಂತೆ ಬ್ಯಾಟರ್‌ಗಳ ಅಭೂತಪೂರ್ವ ಆಟದ ನೆರವಿನಿಂದ ಬಲಿಷ್ಠ ಮುಂಬೈ ವಿರುದ್ಧ ರಾಜ್ಯ ತಂಡ 7 ವಿಕೆಟ್‌ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದೆ.

 383 ರನ್‌ಗಳ ಬೃಹತ್‌ ಗುರಿಯನ್ನು ಕೇವಲ 46.2 ಓವರ್‌ಗಳಲ್ಲೆ ಬೆನ್ನತ್ತಿ ಗೆದ್ದು ದಾಖಲೆ ಬರೆದಿದೆ.ಸ್ಫೋಟಕ ಆಟವಾಡಿದ ಮುಂಬೈ 50 ಓವರಲ್ಲಿ 4 ವಿಕೆಟ್‌ ಕಳೆದುಕೊಂಡು ಬರೋಬ್ಬರಿ 382 ರನ್ ಕಲೆಹಾಕಿತು. ಆಯುಶ್‌ ಮಾಥ್ರೆ 78, ಹಾರ್ದಿಕ್‌ ತಮೋರೆ 84 ರನ್‌ ಸಿಡಿಸಿದರು. 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಾಯಕ ಶ್ರೇಯಸ್ ಅಯ್ಯರ್ 50 ಎಸೆತಗಳಲ್ಲೇ ಶತಕ ಬಾರಿಸಿ ಕರ್ನಾಟಕವನ್ನು ಮತ್ತಷ್ಟು ಕಾಡಿದರು. 

ಅವರು 55 ಎಸೆತಗಳಲ್ಲಿ 5 ಬೌಂಡರಿ, 10 ಸಿಕ್ಸರ್‌ಗಳೊಂದಿಗೆ ಔಟಾಗದೆ 114 ರನ್‌ ಸಿಡಿಸಿದರು. ಕೊನೆಯಲ್ಲಿ ಅಬ್ಬರಿಸಿದ ಶಿವಂ ದುಬೆ 36 ಎಸೆತಗಳಲ್ಲಿ ಔಟಾಗದೆ 63 ರನ್‌ ಚಚ್ಚಿದರು. ಈ ಜೋಡಿ ಮುರಿಯದ 4ನೇ ವಿಕೆಟ್‌ಗೆ 65 ಎಸೆತಗಳಲ್ಲಿ 148 ರನ್‌ ಜೊತೆಯಾಟವಾಡಿತು.ರಾಜ್ಯದ ತಂಡದ ಯುವ ಬೌಲರ್‌ ವಿದ್ಯಾಧರ್‌ ಪಾಟೀಲ್‌ 10 ಓವರ್‌ಗಳಲ್ಲಿ ಬರೋಬ್ಬರಿ 103 ರನ್‌ ಬಿಟ್ಟುಕೊಟ್ಟು ಅತಿ ದುಬಾರಿ ಎನಿಸಿಕೊಂಡರು. ಪ್ರವೀನ್‌ ದುಬೆ 2 ವಿಕೆಟ್‌ ಕಿತ್ತರು.

ಯುವ ತಾರೆಗಳ ಮ್ಯಾಜಿಕ್‌: ಕರ್ನಾಟಕಕ್ಕೆ ಬೃಹತ್‌ ಗುರಿ ನೀಡಿದ ಮುಂಬೈ, ಗೆಲುವು ತನ್ನದೇ ಎಂಬ ವಿಶ್ವಾಸದಲ್ಲಿತ್ತು. ಕರ್ನಾಟಕದ ಇತ್ತೀಚಿಗಿನ ಬ್ಯಾಟಿಂಗ್‌ ಗಮನಿಸಿದರೆ ಮುಂಬೈ ತಂಡವೇ ಗೆಲ್ಲಲಿದೆ ಎಂದೇ ಅಭಿಮಾನಿಗಳು ಭಾವಿಸಿದ್ದರು. ಆದರೆ ಎಲ್ಲಾ ಲೆಕ್ಕಾಚಾರವನ್ನು ರಾಜ್ಯದ ಯುವ ತಾರೆಗಳು ಉಲ್ಟಾ ಮಾಡಿದರು. ನಿಕಿನ್‌ ಹೋಸ್‌ 21, ಮಯಾಂಕ್‌ 47ಕ್ಕೆ ವಿಕೆಟ್‌ ಒಪ್ಪಿಸಿದ ಬಳಿಕ, ಅನೀಶ್‌ ಕೆ.ವಿ. ಹಾಗೂ ಕೆ.ಎಲ್‌. ಶ್ರೀಜಿತ್‌ ಅಬ್ಬರಿಸಿದರು. ಮನೀಶ್‌ ಪಾಂಡೆ ಬದಲಿಗನಾಗಿ ಆಡಿದ ಅನೀಶ್‌ 66 ಎಸೆತಗಳಲ್ಲಿ 82 ರನ್‌ ಸಿಡಿಸಿ ಆಯ್ಕೆಯನ್ನು ಸಮರ್ಥಿಸಿಕೊಂಡರು. ಬಳಿಕ ಪ್ರವೀಣ್‌ ದುಬೆ ಜೊತೆಗೂಡಿದ ಶ್ರೀಜಿತ್‌, ಮುರಿಯದ 4ನೇ ವಿಕೆಟ್‌ಗೆ 119 ಎಸೆತಗಳಲ್ಲಿ 183 ರನ್‌ ಸೇರಿಸಿ ತಂಡವನ್ನು ಗೆಲ್ಲಿಸಿದರು. ಶ್ರೀಜಿತ್‌ 101 ಎಸೆತಗಳಲ್ಲಿ 20 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ ಔಟಾಗದೆ 150 ರನ್‌ ಚಚ್ಚಿದರೆ, ಪ್ರವೀಣ್‌ 50 ಎಸೆತಕ್ಕೆ ಔಟಾಗದೆ 65 ರನ್‌ ಬಾರಿಸಿದರು. ಸ್ಕೋರ್: ಮುಂಬೈ 50 ಓವರಲ್ಲಿ 382/4 (ಶ್ರೇಯಸ್‌ 114*, ತಮೋರೆ 84, ಆಯುಶ್‌ 78, ದುಬೆ 63*, ಪ್ರವೀಣ್‌ 2-89), ಕರ್ನಾಟಕ 46.2 ಓವರಲ್ಲಿ 383/3 (ಶ್ರೀಜಿತ್‌ 150*, ಅನೀಶ್‌ 82, ಪ್ರವೀಣ್‌ 65, ಮಯಾಂಕ್‌ 47, ಜುನೇದ್‌ 2-70)

ಪಂದ್ಯಶ್ರೇಷ್ಠ: ಕೆ.ಎಲ್‌.ಶ್ರೀಜಿತ್‌.

383: ಭಾರತದಲ್ಲಿ 2ನೇ ಗರಿಷ್ಠ ಚೇಸ್‌

ಕರ್ನಾಟಕ 383 ರನ್‌ ಯಶಸ್ವಿಯಾಗಿ ಬೆನ್ನತ್ತಿ ಗೆದ್ದಿತು. ಇದು ಭಾರತದಲ್ಲಿ ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಿ ದಾಖಲಾದ 2ನೇ ಗರಿಷ್ಠ ರನ್‌ ಚೇಸ್‌. 2011-12ರಲ್ಲಿ ಗೋವಾ ವಿರುದ್ಧ ಆಂಧ್ರ ತಂಡ 384 ರನ್‌ ಬೆನ್ನತ್ತಿ ಗೆದ್ದಿರುವುದು ಈಗಲೂ ದಾಖಲೆ.

 02ನೇ ಗರಿಷ್ಠ: 383 ರನ್‌ ಕರ್ನಾಟಕ ತಂಡ ವಿಜಯ್‌ ಹಜಾರೆಯಲ್ಲಿ ಗಳಿಸಿದ 2ನೇ ಗರಿಷ್ಠ ಸ್ಕೋರ್‌. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರ ವಿರುದ್ಧ 2 ವಿಕೆಟ್‌ಗೆ 402 ರನ್‌ ಗಳಿಸಿದ್ದು ದಾಖಲೆ.

03ನೇ ಆಟಗಾರ: ಅನೀಶ್‌ ವಿಜಯ್‌ ಹಜಾರೆ ಟೂರ್ನಿಯ ಪಾದಾರ್ಪಣಾ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ ಕರ್ನಾಟಕದ 3ನೇ ಆಟಗಾರ. ದೇವದತ್‌ ಪಡಿಕ್ಕಲ್‌, ಎಸ್‌.ಶರತ್‌ ಮೊದಲಿಗರು. 

ಬೆಂಗಾಲ್‌, ಬರೋಡಾ, ಪಂಜಾಬ್‌ ಶುಭಾರಂಭ

ಟೂರ್ನಿಯಲ್ಲಿ ಬೆಂಗಾಲ್‌, ಬರೋಡಾ, ಪಂಜಾಬ್‌, ಗೋವಾ, ಆಂಧ್ರ, ಗುಜರಾತ್‌, ಸರ್ವಿಸಸ್‌, ಹೈದರಾಬಾದ್‌, ಪುದುಚೇರಿ, ಮಹಾರಾಷ್ಟ್ರ, ಉಶುತ್ತರಾಖಂಡ, ಜಾರ್ಖಂಡ್‌, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ತಂಡಗಳು ಶುಭಾರಂಭ ಮಾಡಿದವು. ಮುಂಬೈ, ರೈಲ್ವೇಸ್‌, ಡೆಲ್ಲಿ, ರಾಜಸ್ಥಾನ, ಸೌರಾಷ್ಟ್ರ ಸೇರಿದಂತೆ ಪ್ರಮುಖ ತಂಡಗಳು ಸೋಲನುಭವಿಸಿದವು.

ಆಂಧ್ರದಲ್ಲಿ ನಡೆಯಬೇಕಿದ್ದ 3 ಪಂದ್ಯ ಮಳೆಯಿಂದ ರದ್ದು

ಆಂಧ್ರದಲ್ಲಿ ಶನಿವಾರ ನಡೆಯಬೇಕಿದ್ದ 3 ಪಂದ್ಯಗಳೂ ಮಳೆಯಿಂದ ರದ್ದಾದವು. ಛತ್ತೀಸ್‌ಗಢ ಹಾಗೂ ಮಿಜೋರಾಂ, ಜಮ್ಮು&ಕಾಶ್ಮೀರ ಹಾಗೂ ಉತ್ತರ ಪ್ರದೇಶ, ಚಂಡೀಗಢ ಹಾಗೂ ತಮಿಳುನಾಡು ನಡುವಿನ ಪಂದ್ಯ ಟಾಸ್‌ ಕೂಡಾ ಕಾಣದೆ ರದ್ದುಗೊಂಡಿತು.