ಇಂಗ್ಲೆಂಡ್‌ ಸರಣಿ: ಮತ್ತಷ್ಟು ದಾಖಲೆ ಅಂಚಿನಲ್ಲಿ ಗಿಲ್‌

| N/A | Published : Jul 09 2025, 12:03 PM IST

Shubhman Gill

ಸಾರಾಂಶ

ಇಂಗ್ಲೆಂಡ್‌ ಸರಣಿಯ ಆರಂಭಿಕ 2 ಪಂದ್ಯಗಳಲ್ಲೇ ಹಲವು ದಾಖಲೆಗಳನ್ನು ಸೃಷ್ಟಿಸಿರುವ ಭಾರತದ ಯುವ ನಾಯಕ ಶುಭ್‌ಮನ್‌ ಗಿಲ್‌ ರನ್‌ ಪ್ರವಾಹವನ್ನೇ ಹರಿಸುವ ಮುನ್ಸೂಚನೆ ನೀಡಿದ್ದಾರೆ

ಲಂಡನ್‌: ಇಂಗ್ಲೆಂಡ್‌ ಸರಣಿಯ ಆರಂಭಿಕ 2 ಪಂದ್ಯಗಳಲ್ಲೇ ಹಲವು ದಾಖಲೆಗಳನ್ನು ಸೃಷ್ಟಿಸಿರುವ ಭಾರತದ ಯುವ ನಾಯಕ ಶುಭ್‌ಮನ್‌ ಗಿಲ್‌ ರನ್‌ ಪ್ರವಾಹವನ್ನೇ ಹರಿಸುವ ಮುನ್ಸೂಚನೆ ನೀಡಿದ್ದಾರೆ. ಸರಣಿಯಲ್ಲಿ ಇನ್ನೂ 3 ಪಂದ್ಯಗಳಿದ್ದು, ಯುವ ಸೂಪರ್‌ಸ್ಟಾರ್‌ ಗಿಲ್‌ ಮತ್ತಷ್ಟು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಳ್ಳುವ ಉತ್ಸಾಹದಲ್ಲಿದ್ದಾರೆ.

ಮೊದಲೆರಡು ಪಂದ್ಯಗಳಲ್ಲಿ 25 ವರ್ಷದ ಗಿಲ್‌ 1 ದ್ವಿಶತಕ, 2 ಶತಕ ಸಿಡಿಸಿದ್ದಾರೆ. ಬರೋಬ್ಬರಿ 146.25ರ ಸರಾಸರಿಯಲ್ಲಿ 585 ರನ್‌ ಕಲೆಹಾಕಿದ್ದಾರೆ. ಪಂದ್ಯವೊಂದರಲ್ಲಿ ಭಾರತದ ಪರ ಗರಿಷ್ಠ, ವಿಶ್ವದಲ್ಲೇ 2ನೇ ಗರಿಷ್ಠ ರನ್‌ ಸಿಡಿಸಿದ್ದು ಸೇರಿ ಕೆಲ ದಾಖಲೆಗಳನ್ನೂ ಬರೆದಿದ್ದಾರೆ. ಇನ್ನುಳಿದ 3 ಪಂದ್ಯಗಳಲ್ಲಿ ಗಿಲ್ ಮುರಿಯಬಹುದಾದ ದಾಖಲೆಗಳ ಪಟ್ಟಿ ಇಲ್ಲಿವೆ.

ಸರಣಿಯಲ್ಲಿ ನಾಯಕನಾಗಿ ಗರಿಷ್ಠ ರನ್‌

ಟೆಸ್ಟ್‌ ಸರಣಿಯೊಂದರಲ್ಲಿ ನಾಯಕನಾಗಿ ಗರಿಷ್ಠ ರನ್‌ ಸೇರಿಸಿದ ಆಟಗಾರ ಎನಿಸಿಕೊಳ್ಳಲು ಗಿಲ್‌ಗೆ 225 ರನ್‌ ಅಗತ್ಯವಿದೆ. 1936-37ರ ಆ್ಯಶಸ್‌ ಸರಣಿಯ 5 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ನಾಯಕರಾಗಿ ಡಾನ್‌ ಬ್ರಾಡ್ಮನ್‌ 90ರ ಸರಾಸರಿಯಲ್ಲಿ 810 ರನ್‌ ಗಳಿಸಿದ್ದರು. 88 ವರ್ಷಗಳ ಬಳಿಕ ದಿಗ್ಗಜ ಆಟಗಾರನ ಮಹತ್ವದ ದಾಖಲೆಯೊಂದನ್ನು ಮುರಿಯುವ ಅವಕಾಶ ಗಿಲ್‌ಗೆ ಇದೆ. ಇನ್ನು, ಭಾರತದ ನಾಯಕರಾಗಿ ಸರಣಿಯಲ್ಲಿ ಗರಿಷ್ಠ ರನ್‌ ಸಿಡಿಸಿದ ಆಟಗಾರ ಎಂಬ ದಾಖಲೆ ಸುನಿಲ್‌ ಗವಾಸ್ಕರ್‌ ಹೆಸರಲ್ಲಿದೆ. 1978-79ರಲ್ಲಿ ವಿಂಡೀಸ್‌ ವಿರುದ್ಧ ಗವಾಸ್ಕರ್‌ 732 ರನ್‌ ಗಳಿಸಿದ್ದರು. ಅದನ್ನು ಮುರಿಯಲು ಗಿಲ್‌ಗೆ 148 ರನ್‌ ಬೇಕು.

ಟೆಸ್ಟ್‌ ಸರಣಿಯಲ್ಲಿ ಗರಿಷ್ಠ ರನ್‌

ಟೆಸ್ಟ್‌ ಸರಣಿಯೊಂದರಲ್ಲಿ ಗರಿಷ್ಠ ರನ್‌ ಸಿಡಿಸಿದ ಆಟಗಾರ ಎಂಬ ದಾಖಲೆ ಸದ್ಯ ಬ್ರಾಡ್ಮನ್‌ ಹೆಸರಲ್ಲಿದೆ. ಅವರು 1930ರ ಆ್ಯಶಸ್‌ ಸರಣಿಯಲ್ಲಿ 974 ರನ್‌ ಗಳಿಸಿದ್ದರು. ಈ ವಿಶ್ವದಾಖಲೆ ಮುರಿಯಲು ಗಿಲ್‌ ಇನ್ನೂ 390 ರನ್‌ ಗಳಿಸಬೇಕು. ಸರಣಿಯಲ್ಲಿ ಗರಿಷ್ಠ ರನ್‌ ಸಿಡಿಸಿದ ಭಾರತೀಯ ಆಟಗಾರ ಗವಾಸ್ಕರ್‌. ಅವರು 1971ರಲ್ಲಿ ವಿಂಡೀಸ್‌ ವಿರುದ್ಧ 5 ಟೆಸ್ಟ್‌ನಲ್ಲಿ 774 ರನ್‌ ಗಳಿಸಿದ್ದು. ಅವರನ್ನು ಹಿಂದಿಕ್ಕಲು ಗಿಲ್‌ 189 ರನ್‌ ಗಳಿಸಬೇಕಿದೆ.

ಸರಣಿಯಲ್ಲಿ ಅತಿ ಹೆಚ್ಚು ಶತಕ

1955ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನ ಸರಣಿಯಲ್ಲಿ ವೆಸ್ಟ್‌ಇಂಡೀಸ್‌ನ ಕ್ಲೈಡ್‌ ವಾಲ್ಕಟ್‌ 5 ಶತಕ ಬಾರಿಸಿದ್ದರು. ಗಿಲ್‌ ಈಗಾಗಲೇ 3 ಶತಕ ಗಳಿಸಿದ್ದು, ಇನ್ನೂ 3 ಶತಕ ಅಗತ್ಯವಿದೆ. ನಾಯಕರಾಗಿ ಸರಣಿಯಲ್ಲಿ ಗರಿಷ್ಠ ಶತಕ ಬಾರಿಸಿದ ಆಟಗಾರ ಬ್ರಾಡ್ಮನ್‌. ಅವರು 1947ರಲ್ಲಿ ಭಾರತ ವಿರುದ್ಧ 4 ಶತಕ ದಾಖಲಿಸಿದ್ದರು. ಇನ್ನು, ಸರಣಿಯಲ್ಲಿ ಭಾರತದ ನಾಯಕರಾಗಿ ಮತ್ತು ಆಟಗಾರರಾಗಿ ಗರಿಷ್ಠ ಸೆಂಚುರಿ ಬಾರಿಸಿದ ಆಟಗಾರ ಗವಾಸ್ಕರ್‌. ಅವರು ವಿಂಡೀಸ್‌ ವಿರುದ್ಧ 1971ರಲ್ಲಿ ಕೇವಲ ಬ್ಯಾಟರ್ ಆಗಿ 4, 1978-79ರಲ್ಲಿ ನಾಯಕರಾಗಿ 4 ಶತಕ ಬಾರಿಸಿದ್ದರು.

ನಾಯಕರಾಗಿ ವೇಗದ 1000 ರನ್‌

ಬ್ರಾಡ್ಮನ್‌ರ ಮತ್ತೊಂದು ದಾಖಲೆ ಮುರಿಯುವ ಅವಕಾಶ ಗಿಲ್‌ಗೆ ಇದೆ. ಟೆಸ್ಟ್‌ನಲ್ಲಿ ವೇಗವಾಗಿ 1000 ರನ್‌ ಸಿಡಿಸಿದ ನಾಯಕ ಎನಿಸಿಕೊಳ್ಳಲು ಗಿಲ್‌ ಇನ್ನು 6 ಇನ್ನಿಂಗ್ಸ್‌ಗಳಲ್ಲಿ 415 ರನ್‌ ಗಳಿಸಬೇಕು. ಬ್ರಾಡ್ಮನ್‌ 11 ಇನ್ನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ಸಾಧಿಸಿದರು. ಭಾರತೀಯ ದಾಖಲೆ ಗವಾಸ್ಕರ್‌ ಹೆಸರಲ್ಲಿದೆ. ಅವರು 14 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.

ಇಂಗ್ಲೆಂಡ್‌ ಸರಣಿಯಲ್ಲಿ ಗರಿಷ್ಠ ರನ್‌

ಇಂಗ್ಲೆಂಡ್‌ ವಿರುದ್ಧ ಸರಣಿಯಲ್ಲಿ ಗರಿಷ್ಠ ರನ್‌ ಸಿಡಿಸಿದ ಆಟಗಾರ ಯಶಸ್ವಿ ಜೈಸ್ವಾಲ್‌. ಕಳೆದ ವರ್ಷ ತವರಿನ ಸರಣಿಯಲ್ಲಿ ಅವರು 712 ರನ್‌ ಸಿಡಿಸಿದ್ದರು. ಇದನ್ನು ಮುರಿಯಲು ಗಿಲ್‌ ಕೇವಲ 127 ರನ್‌ ಗಳಿಸಬೇಕಿದೆ. ಇನ್ನು, ಇಂಗ್ಲೆಂಡ್‌ ವಿರುದ್ಧ ಅವರದೇ ತವರಿನಲ್ಲಿ ಗರಿಷ್ಠ ರನ್‌ ಗಳಿಸಿದ ಭಾರತೀಯ ಆಟಗಾರ ರಾಹುಲ್‌ ದ್ರಾವಿಡ್‌. ಅವರು 2002ರಲ್ಲಿ 602 ರನ್‌ ಸಿಡಿಸಿದ್ದರು. ದ್ರಾವಿಡ್‌ರನ್ನು ಹಿಂದಿಕ್ಕಲು ಗಿಲ್‌ ಬೇಕಿರುವುದು ಕೇವಲ 18 ರನ್‌. ಭಾರತದ ನಾಯಕರಾಗಿ ಗರಿಷ್ಠ ರನ್‌ ಸಿಡಿಸಿದ್ದು ವಿರಾಟ್‌ ಕೊಹ್ಲಿ. 2016ರಲ್ಲಿ ತವರಿನಲ್ಲಿ 655 ರನ್‌ ಬಾರಿಸಿದ್ದರು. ಅದನ್ನು ಮುರಿಯಲು 91 ರನ್‌ ಅಗತ್ಯವಿದೆ.

 

Read more Articles on