ನಾಯಕ ಶುಭ್‌ಮನ್‌ ಗಿಲ್‌ ಮತ್ತೆ ಆರ್ಭಟಿಸಿದ್ದಾರೆ. ಅಭೂತಪೂರ್ವ ಲಯದಲ್ಲಿರುವ ಅವರು ಸತತ 2ನೇ ಇನ್ನಿಂಗ್ಸ್‌ನಲ್ಲೂ 150+ ರನ್‌ ಗಳಿಸಿದ್ದು, ಹೊಸ ದಾಖಲೆ ಬರೆದಿದ್ದಾರೆ.

ಬರ್ಮಿಂಗ್‌ಹ್ಯಾಮ್‌: ನಾಯಕ ಶುಭ್‌ಮನ್‌ ಗಿಲ್‌ ಮತ್ತೆ ಆರ್ಭಟಿಸಿದ್ದಾರೆ. ಅಭೂತಪೂರ್ವ ಲಯದಲ್ಲಿರುವ ಅವರು ಸತತ 2ನೇ ಇನ್ನಿಂಗ್ಸ್‌ನಲ್ಲೂ 150+ ರನ್‌ ಗಳಿಸಿದ್ದು, ಹೊಸ ದಾಖಲೆ ಬರೆದಿದ್ದಾರೆ. ಇದರೊಂದಿಗೆ 2ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಗೆಲುವಿಗೆ ದಾಖಲೆಯ ಗುರಿ ನಿಗದಿಪಡಿಸಲು ನೆರವಾಗಿದ್ದಾರೆ. ಆರಂಭಿಕ ಟೆಸ್ಟ್‌ನಲ್ಲಿ 371 ರನ್‌ ಚೇಸ್‌ ಮಾಡಿದ್ದ ಆತಿಥೇಯರು ಈ ಪಂದ್ಯದಲ್ಲಿ ಗೆಲ್ಲಲು ಬರೋಬ್ಬರಿ 608 ರನ್‌ ಗಳಿಸಬೇಕಿದೆ. 2022ರಲ್ಲಿ ಭಾರತ ವಿರುದ್ಧದೇ 378 ರನ್‌ ಗುರಿ ಬೆನ್ನತ್ತಿ ಗೆದ್ದಿದ್ದು ಇಂಗ್ಲೆಂಡ್‌ನ ದಾಖಲೆ. ಇತಿಹಾಸದಲ್ಲಿ ಯಾವುದೇ ತಂಡ 414ಕ್ಕಿಂತ ಹೆಚ್ಚು ರನ್‌ ಚೇಸ್‌ ಮಾಡಿ ಗೆದ್ದಿಲ್ಲ.

ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್‌ ಮುನ್ನಡೆ ಪಡೆದಿದ್ದ ಭಾರತ, 2ನೇ ಇನ್ನಿಂಗ್ಸ್‌ನಲ್ಲಿ 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 64 ರನ್‌ ಗಳಿಸಿತ್ತು. ಪಂದ್ಯದ 4ನೇ ದಿನವಾದ ಶನಿವಾರವೂ ಭಾರತ ಬ್ಯಾಟಿಂಗ್‌ನಲ್ಲಿ ವಿಜೃಂಭಿಸಿತು. 83 ಓವರ್‌ಗಳಲ್ಲಿ 6 ವಿಕೆಟ್‌ಗೆ 427 ರನ್‌ ಗಳಿಸಿ ಡಿಕ್ಲೇರ್‌ ಘೋಷಿಸಿತು.

ಬ್ಯಾಟಿಂಗ್ ವೈಭವ: ಕರುಣ್‌ ನಾಯರ್‌ 26 ರನ್‌ಗೆ ಔಟಾದರೆ, ಕೆ.ಎಲ್‌.ರಾಹುಲ್‌(55) ಆಕರ್ಷಕ ಅರ್ಧಶತಕ ಸಿಡಿಸಿ ನಿರ್ಗಮಿಸಿದರು. 4ನೇ ವಿಕೆಟ್‌ಗೆ ಜೊತೆಯಾದ ಗಿಲ್‌ ಹಾಗೂ ರಿಷಭ್‌ ಪಂತ್‌ 103 ಎಸೆತಕ್ಕೆ 110 ರನ್ ಜೊತೆಯಾಟವಾಡಿದರು. ರಿಷಭ್‌ 65 ರನ್‌ ಗಳಿಸಿದರು. ಬಳಿಕ ಗಿಲ್-ಜಡೇಜಾ 175 ರನ್‌ ಸೇರಿಸಿ ತಂಡದ ಮುನ್ನಡೆಯನ್ನು 600ಕ್ಕೆ ಹೆಚ್ಚಿಸಿದರು. ಸ್ಫೋಟಕ ಆಟವಾಡುತ್ತಿದ್ದ ಗಿಲ್‌ ಮತ್ತೊಂದು ದ್ವಿಶತಕದ ನಿರೀಕ್ಷೆಯಲ್ಲಿದ್ದರೂ, 162 ಎಸೆತಗಳಲ್ಲಿ 13 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ 161 ರನ್‌ ಸಿಡಿಸಿ ಔಟಾದರು. ಜಡೇಜಾ ಔಟಾಗದೆ 69 ರನ್‌ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್‌ ಘೋಷಿಸಲಾಯಿತು.

ದಾಖಲೆಯ ಗುರಿ ಬೆನ್ನತ್ತಿರುವ ಇಂಗ್ಲೆಂಡ್‌ಗೆ ಆರಂಭಿಕ ಆಘಾತ ಕಾದಿತ್ತು. ಜ್ಯಾಕ್‌ ಕ್ರಾವ್ಲಿ ರನ್‌ ಖಾತೆ ತೆರೆಯುವ ಮೊದಲೇ ಸಿರಾಜ್‌ಗೆ ವಿಕೆಟ್‌ ಒಪ್ಪಿಸಿದರು.