ಟಾಸ್‌ ವೇಳೆ ಗಿಲ್‌ಗೆ ಮದುವೆ ಬಗ್ಗೆ ಪ್ರಶ್ನೆ! ಮೊರಿಸನ್‌ ನಡೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆ

| N/A | Published : Apr 22 2025, 01:48 AM IST / Updated: Apr 22 2025, 05:08 AM IST

ಸಾರಾಂಶ

ಟಾಸ್‌ ವೇಳೆ ಗಿಲ್‌ ಮದುವೆ ಬಗ್ಗೆ ಪ್ರಶ್ನೆ. ಕಾಮೆಂಟೇಟರ್‌ ಡ್ಯಾನಿ ಮೊರಿಸನ್‌ ನಡೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆ. ಕ್ರಮಕ್ಕೆ ನೆಟ್ಟಿಗರ ಆಗ್ರಹ.

ಕೋಲ್ಕತಾ: ಐಪಿಎಲ್‌ನಲ್ಲಿನ ಹಲವು ಸನ್ನಿವೇಶ, ಬೆಳವಣಿಗೆಗಳು ಕ್ರಿಕೆಟ್‌ಗೆ ಮಾರಕ ಎನ್ನುವ ಅಭಿಪ್ರಾಯವನ್ನು ಹಲವು ವರ್ಷಗಳಿಂದ ಅನೇಕರು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಆಟಕ್ಕೆ ಅಗತ್ಯವಿರುವುದರ ಕಡೆಗೆ ಹೆಚ್ಚು ಪ್ರಾಮುಖ್ಯತೆ ನೀಡುವುದನ್ನು ಬಿಟ್ಟು ಅನಗತ್ಯ ವಿಷಯಗಳಿಗೆ ಮನ್ನಣೆ ನೀಡುವುದನ್ನು ನಿಲ್ಲಿಸಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. ಆದರೂ, ಐಪಿಎಲ್‌ನಲ್ಲಿ ಅಪ್ರಸ್ತುತ ವಿಚಾರಗಳ ಬಗ್ಗೆ ಪ್ರಸ್ತಾಪ ಮುಂದುವರಿಯುತ್ತಲೇ ಇದೆ. ಸೋಮವಾರ ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಕೋಲ್ಕತಾ ನೈಟ್‌ರೈಡರ್ಸ್‌ ಹಾಗೂ ಗುಜರಾತ್ ಟೈಟಾನ್ಸ್‌ ನಡುವಿನ ಪಂದ್ಯದಲ್ಲಿ ಇಂಥದ್ದೇ ಒಂದು ಘಟನೆ ನಡೆಯಿತು.

ಪಂದ್ಯ ಆರಂಭಕ್ಕೂ ಮುನ್ನ ಟಾಸ್‌ ವೇಳೆ, ವೀಕ್ಷಕ ವಿವರಣೆಗಾರ ಡ್ಯಾನಿ ಮೊರಿಸ್ಸನ್‌, ಗುಜರಾತ್‌ ಟೈಟಾನ್ಸ್‌ ತಂಡದ ನಾಯಕ ಶುಭ್‌ಮನ್‌ ಗಿಲ್‌ರನ್ನು ಮದುವೆ ಬಗ್ಗೆ ಪ್ರಶ್ನೆ ಕೇಳಿದರು. ಈ ವಿಷಯ ಸಾಮಾಜಿಕ ತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಮೊರಿಸ್ಸನ್‌ ನಡೆ ಬಗ್ಗೆ ಟೀಕಿಸಿದ್ದಾರೆ.

ಟಾಸ್‌ ವೇಳೆ ಮೊರಿಸ್ಸನ್‌, ‘ಬಹಳ ಹ್ಯಾಂಡ್‌ಸಮ್‌ ಆಗಿ ಕಾಣುತ್ತಿದ್ದೀರಿ. ಸದ್ಯದಲ್ಲಿ ಮದುವೆ ಆಗುತ್ತೀರಾ, ಹೇಗೆ? ಮದುವೆ ಸಿದ್ಧತೆ ನಡೆಯತ್ತಿದೆಯೇ?’ ಎಂದು ಪ್ರಶ್ನಿಸಿದರು. ಇದಕ್ಕೆ ನಗುತ್ತಲೇ ಉತ್ತರಿಸಿದ ಗಿಲ್‌, ‘ಇಲ್ಲ, ಅದೆಲ್ಲಾ ಏನೂ ಇಲ್ಲ’ ಎಂದರು.

ಶುಭ್‌ಮನ್‌ ಗಿಲ್‌ರ ಪ್ರೀತಿ ಬಗ್ಗೆ ಮಾಧ್ಯಮಗಳಲ್ಲಿ ಹಲವು ಸುದ್ದಿಗಳು ಪ್ರಕಟಗೊಂಡರೂ, ಕ್ರಿಕೆಟ್‌ ಮೈದಾನದಲ್ಲಿ ಈ ರೀತಿಯ ಪ್ರಶ್ನೆ ಕೇಳುವುದು ಎಷ್ಟು ಸರಿ ಎಂದು ಕ್ರಿಕೆಟ್‌ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಕೆಲವರು, ಮಾರಿಸ್ಸನ್‌ರನ್ನು ವೀಕ್ಷಕ ವಿವರಣೆ ತಂಡದಿಂದ ಹೊರಹಾಕುವಂತೆಯೂ ಆಗ್ರಹಿಸಿದ್ದಾರೆ.

ಬಂಗಾಳ ಕ್ರಿಕೆಟ್‌ ಸಂಸ್ಥೆ ಕಾಲೆಳೆಯಲು ಈ ಪ್ರಶ್ನೆ?:

ಪಿಚ್‌ ಬಗ್ಗೆ ಟೀಕೆ ಮಾಡಿದ್ದಕ್ಕೆ ಸೈಮನ್‌ ಡೂಲ್‌ ಹಾಗೂ ಹರ್ಷಾ ಭೋಗ್ಲೆಗೆ ಈಡನ್‌ ಗಾರ್ಡನ್ಸ್‌ ಪ್ರವೇಶ ನಿರಾಕರಿಸುವ ಬಗ್ಗೆ ಬಂಗಾಳ ಕ್ರಿಕೆಟ್‌ ಸಂಸ್ಥೆ ಬಿಸಿಸಿಐಗೆ ಪತ್ರ ಬರೆದಿದೆ ಎನ್ನುವ ಸುದ್ದಿ ಕ್ರಿಕೆಟ್‌ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ತಮ್ಮ ದೇಶದವರೇ ಆದ ಡೂಲ್‌ ವಿರುದ್ಧ ಸಿಎಬಿ ಕೈಗೊಳ್ಳಲು ಉದ್ದೇಶಿಸಿರುವ ನಡೆಯನ್ನು ಖಂಡಿಸಲು ಮೊರಿಸ್ಸನ್‌, ಶುಭ್‌ಮನ್‌ ಗಿಲ್‌ಗೆ ಪಿಚ್‌ ಬಗ್ಗೆ ಹೆಚ್ಚು ಕೇಳದೆ ಮದುವೆ ಬಗ್ಗೆ ಪ್ರಸ್ತಾಪಿಸಿ ತಿರುಗೇಟು ನೀಡಿದರು ಎಂದು ಅನೇಕರು ವಿಶ್ಲೇಷಿಸಿದರು.

ಕೋಲ್ಕತಾ ಕ್ಯುರೇಟರ್‌ ಬಗ್ಗೆ

ಟೀಕೆ: ಡೂಲ್‌, ಭೋಗ್ಲೆಯನ್ನು

ಬ್ಯಾನ್ ಮಾಡಲು ಸಿಎಬಿ ಪತ್ರ!

ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೈದಾನದ ಪಿಚ್‌ ಕ್ಯುರೇಟರ್‌ ನಮಗೆ ಸಹಕರಿಸುತ್ತಿಲ್ಲ. ತವರು ತಂಡಕ್ಕೆ ಬೇಕಿರುವ ರೀತಿ ಪಿಚ್‌ ಸಿದ್ಧಪಡಿಸಿಕೊಡುತ್ತಿಲ್ಲ ಎಂದು ಕೆಕೆಆರ್‌ ನಾಯಕ ಅಜಿಂಕ್ಯ ರಹಾನೆ ಇತ್ತೀಚೆಗೆ ದೂರಿದ್ದರು. ಕ್ರಿಕೆಟ್‌ ವೆಬ್‌ಸೈಟ್‌ವೊಂದರ ಕ್ರಿಕೆಟ್‌ ವಿಶ್ಲೇಷಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನ್ಯೂಜಿಲೆಂಡ್‌ನ ಮಾಜಿ ವೇಗಿ, ವೀಕ್ಷಕ ವಿವರಣೆಗಾರ ಸೈಮನ್‌ ಡೂಲ್‌, ಭಾರತದ ಖ್ಯಾತ ಕಾಮೆಂಟೇಟರ್‌ ಹರ್ಷಾ ಭೋಗ್ಲೆ, ತವರು ತಂಡಕ್ಕೆ ಅನುಕೂಲವಾಗುಂತಹ ಪಿಚ್‌ ನೀಡಲು ಬಂಗಾಳ ಕ್ರಿಕೆಟ್‌ ಸಂಸ್ಥೆ (ಸಿಎಬಿ) ನಿರಾಕರಿಸುತ್ತಿದ್ದರೆ, ಕೆಕೆಆರ್‌ ತಂಡ ತನ್ನ ತವರು ಮೈದಾನವನ್ನು ಬದಲಿಸಬೇಕು ಎಂದಿದ್ದರು. ಇದರಿಂದ ಸಿಟ್ಟಾಗಿರುವ ಸಿಎಬಿ, ಡೂಲ್‌ ಹಾಗೂ ಭೋಗ್ಲೆ ವೀಕ್ಷಕ ವಿವರಣೆ ನೀಡಲು ಈಡನ್‌ ಗಾರ್ಡನ್ಸ್‌ ಮೈದಾನಕ್ಕೆ ಬರಬಾರದು. ಅವರ ವಿರುದ್ಧ ನಿಷೇಧ ಹೇರಲು ನಾವು ಬಯಸುತ್ತೇವೆ ಎಂದು ಬಿಸಿಸಿಐಗೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ.