ಸಾರಾಂಶ
ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಕರ್ನಾಟಕದ ದಿಗ್ಗಜ ಕ್ರಿಕೆಟಿಗರ ಹೆಸರನ್ನು ನಾಮಕರಣ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಅಧ್ಯಕ್ಷ ರಘುರಾಮ್ ಭಟ್ ಅವರಿಗೆ ಪತ್ರ ಬರೆದಿದ್ದಾರೆ. ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು ತಮಗೆ ಪತ್ರ ಬರೆದು ಕರ್ನಾಟಕ ದಿಗ್ಗಜರ ಹೆಸರನ್ನು ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಇಡುವಂತೆ ಮನವಿ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಸೋಮವಾರ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.
‘1974ರಲ್ಲಿ ಕರ್ನಾಟಕ ರಣಜಿ ತಂಡ ಮೊದಲ ಬಾರಿಗೆ ಟ್ರೋಫಿ ಜಯಿಸಿ ಇತಿಹಾಸ ನಿರ್ಮಿಸಿತ್ತು. ಕನ್ನಡಿಗರ ಈ ಸಾಧನೆಗೆ 50 ವರ್ಷಗಳು ತುಂಬುತ್ತಿರುವ ಸ್ಮರಣಾರ್ಥ ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಪ್ರಶಸ್ತಿ ವಿಜೇತ ರಣಜಿ ತಂಡದ ಪ್ರಮುಖ ಆಟಗಾರರಾದ ಜಿ.ಆರ್. ವಿಶ್ವನಾಥ್, ಇ.ಎ.ಎಸ್. ಪ್ರಸನ್ನ ಹಾಗೂ ಬಿ.ಎಸ್. ಚಂದ್ರಶೇಖರ್ ಅವರ ಹೆಸರನ್ನು ನಾಮಕರಣ ಮಾಡಬೇಕು’ ಎಂದು ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಅಲ್ಟ್ರಾ ರನ್ನಿಂಗ್: ಭಾರತದ ಅಮರ್‌ಗೆ ಚಿನ್ನದ ಪದಕ
ಕ್ಯಾನ್‌ಬೆರ್ರಾ(ಆಸ್ಟ್ರೇಲಿಯಾ): ಇಲ್ಲಿ ನಡೆದ ಏಷ್ಯಾ-ಓಶಿಯಾನಿಯಾ ಅಲ್ಟ್ರಾ ರನ್ನಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಮರ್ ಸಿಂಗ್ ದೇವಾಂಡ ಚಿನ್ನದ ಪದಕ ಗೆದ್ದಿದ್ದಾರೆ. 24 ಗಂಟೆಗಳ ಓಟದ ಸ್ಪರ್ಧೆಯಲ್ಲಿ ಅಮರ್ 272.537 ಕಿ.ಮೀ. ದೂರ ಕ್ರಮಿಸಿ ಬಂಗಾರ ಗೆಲ್ಲುವುದರ ಜೊತೆಗೆ, ತಮ್ಮದೇ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಅವರು 2022ರಲ್ಲಿ 257.618 ಕಿ.ಮೀ. ದೂರ ಕ್ರಮಿಸಿ ದಾಖಲೆ ಬರೆದಿದ್ದರು. ಇದೇ ವೇಳೆ ಭಾರತದ ಪುರುಷರ ತಂಡವೂ ಚಿನ್ನ ಸಂಪಾದಿಸಿತು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಉಲ್ಲಾಸ್ ನಾರಾಯಣ(245.574 ಕಿ.ಮೀ) ಹಾಗೂ ಸೌರವ್ ರಂಜನ್(240.137) ಕ್ರಮವಾಗಿ 3 ಮತ್ತು 4ನೇ ಸ್ಥಾನಿಯಾದರು.