ಸಾರಾಂಶ
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್ ಚೋಪ್ರಾ, ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ
ಪ್ಯಾರಿಸ್: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್ ಚೋಪ್ರಾ, ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ 89.45 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ರಜತ ಪದಕ ತಮ್ಮದಾಗಿಸಿಕೊಂಡರು.
ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ 5ನೇ ಒಲಿಂಪಿಕ್ ಪದಕ ತಮ್ಮದಾಗಿಸಿಕೊಂಡಿದೆ. ಇನ್ನು ಇದು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಜಯಿಸಿದ ಮೊದಲ ಬೆಳ್ಳಿ ಪದಕ ಎನಿಸಿದೆ. ನೆರೆಯ ಪಾಕಿಸ್ತಾನದ ಆರ್ಷದ್ ನದೀಮ್(92.97 ಮೀಟರ್) ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.
26 ವರ್ಷದ ನೀರಜ್ ಚೋಪ್ರಾ, ಮಂಗಳವಾರ ನಡೆದ ಅರ್ಹತಾ ಸುತ್ತಿನಲ್ಲಿ ಮೊದಲ ಪ್ರಯತ್ನದಲ್ಲೇ 89.34 ಮೀಟರ್ ದೂರ ಎಸೆಯುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದ್ದರು. ಫೈನಲ್‌ನಲ್ಲಿ ನೀರಜ್ ಚೋಪ್ರಾ ಮತ್ತೊಮ್ಮೆ ಚಿನ್ನದ ಪದಕ ಜಯಿಸಲಿದ್ದಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಮೊದಲ ಪ್ರಯತ್ನವನ್ನು ಪೌಲ್ ಮಾಡಿದ ನೀರಜ್ ಚೋಪ್ರಾ, ಎರಡನೇ ಪ್ರಯತ್ನದಲ್ಲಿ ಈ ಸೀಸನ್‌ನ ಬೆಸ್ಟ್ ಪ್ರದರ್ಶನ 89.45 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟರು.
ಪಾಕಿಸ್ತಾನದ ಆರ್ಷದ್ ನದೀಮ್ ಎರಡನೇ ಪ್ರಯತ್ನದಲ್ಲಿ 92.97 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕ ಖಚಿತಪಡಿಸಿಕೊಂಡರು. ಇನ್ನು ಗ್ರೆನೇಡಾದ ಆಂಡರ್ಸನ್ ಪೀಟರ್ಸ್ 87.87 ಮೀಟರ್ ದೂರ ಎಸೆಯುವ ಮೂಲಕ ಕಂಚಿನ ಪದಕ ತಮ್ಮದಾಗಿಸಿಕೊಂಡರು.