ಸಾರಾಂಶ
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂನಲ್ಲಿ ಪುರುಷರ ಸಿಂಗಲ್ಸ್ ವಿಶ್ವ ನಂ.1 ಯಾನ್ನಿಕ್ ಸಿನ್ನರ್ ಹಾಗೂ ಮಹಿಳಾ ಸಿಂಗಲ್ಸ್ ವಿಶ್ವ ನಂ.2 ಇಗಾ ಸ್ವಿಯಾಟೆಕ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಟೂರ್ನಿಯಲ್ಲಿ ತಮ್ಮ ಅಮೋಘ ಆಟ ಪ್ರದರ್ಶಿಸಿರುವ ಈ ಇಬ್ಬರು, ಮತ್ತೊಂದು ಸುಲಭ ಗೆಲುವು ದಾಖಲಿಸಿದ್ದಾರೆ.
ಬುಧವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಸಿನ್ನರ್, 8ನೇ ಶ್ರೇಯಾಂಕಿತ ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೌರ್ ವಿರುದ್ಧ 6-3, 6-2, 6-1 ನೇರ ಸೆಟ್‌ಗಳಲ್ಲಿ ಜಯಿಸಿದರು. ಮತ್ತೊಂದು ಕ್ವಾರ್ಟರಲ್ಲಿ ಇಟಲಿಯ ಶ್ರೇಯಾಂಕ ರಹಿತ ಆಟಗಾರ ಲೊರೆನ್ಜೋ ಸೊನೆಗೊ ವಿರುದ್ಧ 21ನೇ ಶ್ರೇಯಾಂಕಿತ, ಅಮೆರಿಕದ ಬೆನ್ ಶೆಲ್ಟನ್‌ಗೆ 6-4, 7-5, 4-6, 7-6(7/4) ಸೆಟ್‌ಗಳಲ್ಲಿ ಜಯ ದೊರೆಯಿತು. ಸೆಮೀಸ್‌ನಲ್ಲಿ ಸಿನ್ನರ್ ಹಾಗೂ ಶೆಲ್ಟನ್ ಮುಖಾಮುಖಿಯಾಗಲಿದ್ದಾರೆ. ಮತ್ತೊಂದು ಸೆಮೀಸ್‌ನಲ್ಲಿ ಜೋಕೋವಿಚ್ ಹಾಗೂ ಜ್ವೆರೆವ್ ಸೆಣಸಲಿದ್ದಾರೆ.
ಇನ್ನು, ಮಹಿಳಾ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಪೋಲೆಂಡ್‌ನ ಸ್ವಿಯಾಟೆಕ್‌ಗೆ 8ನೇ ಶ್ರೇಯಾಂಕಿತೆ ಅಮೆರಿಕದ ಎಮ್ಮಾ ನವಾರ್ರೋ ವಿರುದ್ಧ 6-1, 6-2 ಸೆಟ್‌ಗಳಲ್ಲಿ ಗೆಲುವು ಒಲಿಯಿತು. ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಉಕ್ರೇನ್‌ನ ಎಲೆನಾ ಸ್ವಿಟೋಲಿನಾ ವಿರುದ್ಧ ಅಮೆರಿಕದ ಮ್ಯಾಡಿಸನ್ ಕೀಸ್ 3-6, 6-3, 6-4ರಲ್ಲಿ ಜಯಿಸಿ ಉಪಾಂತ್ಯಕ್ಕೆ ಕಾಲಿಟ್ಟರು.
ಸೆಮೀಸ್‌ನಲ್ಲಿ ಸ್ವಿಯಾಟೆಕ್ ಹಾಗೂ ಕೀಸ್ ಪರಸ್ಪರ ಎದುರಾಗಲಿದ್ದು, ಮತ್ತೊಂದು ಸೆಮೀಸ್‌ನಲ್ಲಿ ಅಗ್ರಶ್ರೇಯಾಂಕಿತೆ ಸಬಲೆಂಕಾ ಹಾಗೂ ಬಡೋಸಾ ಸೆಣಸಲಿದ್ದಾರೆ.