ಸಾರಾಂಶ
ರಾಜ್‌ಕೋಟ್: ಭಾರತದ ತಾರಾ ಆಟಗಾರ್ತಿ ಸ್ಮೃತಿ ಮಂಧನಾ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 4000 ರನ್ ಪೂರ್ಣಗೊಳಿಸಿದ್ದಾರೆ. ಶುಕ್ರವಾರ ಐರ್ಲೆಂಡ್ ವಿರುದ್ಧ ಮೊದಲ ಏಕದಿನದಲ್ಲಿ ಸ್ಮೃತಿ ಈ ಮೈಲುಗಲ್ಲು ಸಾಧಿಸಿದರು. ಏಕದಿನದಲ್ಲಿ ಈ ಸಾಧನೆ ಮಾಡಿದ ಭಾರತದ 2ನೇ, ವಿಶ್ವದ 15ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಸ್ಮೃತಿ ಪಾತ್ರರಾಗಿದ್ದಾರೆ. ಅವರು 95 ಪಂದ್ಯಗಳಲ್ಲಿ 4001 ರನ್ ಬಾರಿಸಿದ್ದಾರೆ. ಇದರಲ್ಲಿ 9 ಶತಕ, 29 ಅರ್ಧಶತಕಗಳೂ ಒಳಗೊಂಡಿವೆ. ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ 211 ಇನ್ನಿಂಗ್ಸ್‌ಗಳಲ್ಲಿ 7805 ರನ್ ಕಲೆಹಾಕಿದ್ದು, ಭಾರತ ಮಾತ್ರವಲ್ಲದೇ ವಿಶ್ವದಲ್ಲೇ ಮಹಿಳಾ ಏಕದಿನ ಕ್ರಿಕೆಟ್‌ನ ಗರಿಷ್ಠ ರನ್ ಸಾಧಕಿ ಎನಿಸಿಕೊಂಡಿದ್ದಾರೆ. ಅವರು 7 ಶತಕ, 64 ಅರ್ಧಶತಕ ಬಾರಿಸಿದ್ದಾರೆ.
ಹರ್ಮನ್‌ಪ್ರೀತ್ ಕೌರ್ ಭಾರತೀಯ ಬ್ಯಾಟರ್‌ಗಳ ಪೈಕಿ 3ನೇ ಗರಿಷ್ಠ ರನ್ ಸಾಧಕಿ. ಅವರು 141 ಇನ್ನಿಂಗ್ಸ್‌ಗಳಲ್ಲಿ 3803 ರನ್ ಕಲೆಹಾಕಿದ್ದಾರೆ. ಅಂಜುಮ್ ಚೋಪ್ರಾ 2856, ಪೂನಂ ರಾವತ್ 2299, ದೀಪ್ತಿ ಶರ್ಮಾ 2143 ರನ್ ಗಳಿಸಿದ್ದಾರೆ.
ಪ್ರತಿಕಾ, ತೇಜಲ್ ಅರ್ಧಶತಕ: ಭಾರತಕ್ಕೆ ಶರಣಾದ ಐರ್ಲೆಂಡ್
ರಾಜ್‌ಕೋಟ್: ಪ್ರತಿಕಾ ರಾವಲ್ ಹಾಗೂ ತೇಜಲ್ ಹಸಬ್ನಿಸ್ ಅರ್ಧಶತಕದ ನೆರವಿನಿಂದ ಐರ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ 6 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ ಇತ್ತಂಡಗಳ ನಡುವಿನ ಚೊಚ್ಚಲ ದ್ವಿಪಕ್ಷೀಯ 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ 7 ವಿಕೆಟ್‌ಗೆ 238 ರನ್ ಕಲೆಹಾಕಿತು. ನಾಯಕಿ ಗ್ಯಾಬಿ ಲೆವಿಸ್ 92 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ಲೀಹ್ ಪೌಲ್ 59 ರನ್ ಬಾರಿಸಿ, ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಪ್ರಿಯಾ ಮಿಶ್ರಾ 2 ವಿಕೆಟ್ ಕಿತ್ತರು.
ಗುರಿ ಬೆನ್ನತ್ತಿದ ಟೀಂ ಇಂಡಿಯಾ 34.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು. ಅಭೂತಪೂರ್ವ ಲಯ ಮುಂದುವರಿಸಿದ ನಾಯಕಿ ಸ್ಮೃತಿ ಮಂಧನಾ 29 ಎಸೆತಗಳಲ್ಲಿ 41 ರನ್ ಗಳಿಸಿ ಔಟಾದರು. ಆದರೆ ಪ್ರತಿಕಾ ರಾವಲ್ 96 ಎಸೆತಗಳಲ್ಲಿ 89, ತೇಜಲ್ ಹಸಬ್ನಿಸ್ 46 ಎಸೆತಗಳಲ್ಲಿ ಔಟಾಗದೆ 53 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಜೋಡಿ 4ನೇ ವಿಕೆಟ್‌ಗೆ 116 ರನ್ ಜೊತೆಯಾಟವಾಡಿತು. ಇತ್ತಂಡಗಳ ನಡುವಿನ 2ನೇ ಪಂದ್ಯ ಭಾನುವಾರ ನಡೆಯಲಿದೆ.ಸ್ಕೋರ್: ಐರ್ಲೆಂಡ್ 50 ಓವರಲ್ಲಿ 238/7(ಲೆವಿಸ್ 92, ಪೌಲ್ 59, ಪ್ರಿಯಾ 2-56), ಭಾರತ 34.3 ಓವರಲ್ಲಿ 241/4 (ಪ್ರತಿಕಾ 89, ತೇಜಲ್ ಔಟಾಗದೆ 53, ಐಮೀ ಮಗ್ಯೂರ್ 3-57)
ಪಂದ್ಯಶ್ರೇಷ್ಠ: ಪ್ರತಿಕಾ ರಾವಲ್