ಸಾರಾಂಶ
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಹಾಕಿ ಕ್ರೀಡೆಯ ತವರೂರು ಎಂದು ಕರೆಸಿಕೊಂಡಿರುವ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಅನುದಾನ ಕಲ್ಪಿಸುವುದು ಸರ್ಕಾರ ಕರ್ತವ್ಯ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಭೋಸರಾಜು ಹೇಳಿದರು.ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿರ್ಮಾಣವಾಗಿರುವ ಸಿಂಥೆಟಿಕ್ ಟರ್ಫ್ ಹಾಕಿ ಕ್ರೀಡಾಂಗಣವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.ಅಂದಿನ ಕ್ರೀಡಾ ಸಚಿವರಾದ ಅಪ್ಪಚ್ಚು ರಂಜನ್ ಅವರು, ಹಾಕಿ ಪ್ರೇಮಿಗಳ ಒತ್ತಾಸೆ ಮೇರೆಗೆ ಟರ್ಫ್ ಮೈದಾನಕ್ಕೆ ಅನುದಾನ ಕಲ್ಪಿಸಿದರು. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಇಲ್ಲಿನ ಶಾಸಕರಾದ ಡಾ. ಮಂತರ್ ಗೌಡ ಮುಂದುವರಿದ ಕಾಮಗಾರಿಗೆ ಅನುದಾನ ತರುವ ಮೂಲಕ ಅತೀ ಬೇಗ ಉದ್ಘಾಟನೆಗೆ ಕಾರಣಕರ್ತರಾಗಿದ್ದಾರೆ. ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿ ಗುರವಾರ ಇದೇ ಟರ್ಫ್ ಮೈದಾನದಲ್ಲಿ ನಡೆಯುವುದು ಇಲ್ಲಿನ ಕ್ರೀಡಾಪ್ರೇಮಗಳಿಗೆ ಹೆಮ್ಮೆಯ ವಿಷಯ ಎಂದರು.
ಕೊಡಗಿನ ಜನರು ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವುದರಿಂದ ಅನೇಕರು ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಯುವಶಕ್ತಿ ಕ್ರೀಡಾಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಪೋಷಕರು ಹೆಚ್ಚಿನ ಸಹಕಾರ ನೀಡಬೇಕು ಎಂದ ಅವರು, ಟರ್ಫ್ ಮೈದಾನಕ್ಕೆ ಬೇಕಾದ ಎಲ್ಲಾ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಹಾಕಿ ಕ್ರೀಡೆ ಎಂಬುವುದು ಕೊಡಗಿನ ಜನರ ರಕ್ತದಲ್ಲಿದೆ. ಟರ್ಫ್ ಮೈದಾನ ಉದ್ಘಾಟನೆಯೊಂದಿಗೆ ಕ್ರೀಡಾಪ್ರೇಮಿಗಳ ಕನಸ್ಸು ನನಸ್ಸಾಗಿದೆ. ಟರ್ಫ್ ಮೈದಾನದ ಗುಣಮಟ್ಟ ಕಾಯ್ದುಕೊಳ್ಳುವುದು ಉತ್ತಮ ನಿರ್ವಹಣೆಯಿಂದ ಮಾತ್ರ ಸಾಧ್ಯ. ಯುವಸಬಲೀಕರಣ ಕ್ರೀಡಾ ಇಲಾಖೆಯ ಇದರ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ತಡೆಗೋಡೆ, ಗ್ಯಾಲರಿ ನಿರ್ಮಾಣಕ್ಕೆ ಸೂಕ್ತ ಅನುದಾನ ತರವುದಾಗಿ ಭರವಸೆ ನೀಡಿದರು.
ಕ್ರೀಡಾಕ್ಷೇತ್ರಕ್ಕೆ ತನ್ನದೆ ಕೊಡುಗೆ ನೀಡಿದ ದೈಹಿಕ ಶಿಕ್ಷಣದ ನಿವೃತ್ತ ಶಿಕ್ಷಕ ಸುಬ್ಬಯ್ಯ, ಬೂಸ್ಟಾರ್ ಹಾಕಿ ಕ್ಲಬ್‍ನ ಮಾಜಿ ಅಧ್ಯಕ್ಷ ಬಿ.ಎಂ.ಸುರೇಶ್, ಮೈದಾನಕ್ಕೆ ಜಾಗವನ್ನು ಉಚಿತವಾಗಿ ನೀಡಿದ ದಿ. ಸಿ.ಕೆ.ಕಾಳಪ್ಪ ಅವರ ಕುಟುಂಬದವರಾದ ಸುದೈವ, ಸುಧರ್ಮ, ಈಶಾನ್ ಅವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯರಾದ ನಾಗರಾಜ್, ಉಪವಿಭಾಗಾಧಿಕಾರಿ ನರ್ವಾಡೆ ವಿನಾಯಕ ಕರ್ಬಾರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿ.ಟಿ.ವಿಸ್ಮಯಿ ಚಕ್ರವರ್ತಿ ಇದ್ದರು. ಆಹ್ವಾನ ಪತ್ರಿಕೆಯಲ್ಲಿದ್ದ ಬಿಜೆಪಿ ಜನಪ್ರತಿನಿಧಿಗಳು ಹಾಗು ಮೇಲಾಧಿಕಾರಿಗಳು ಕಾರ್ಯಕ್ರಮಕ್ಕೆ ಗೈರಾಗಿದ್ದರು. ನಿವೃತ್ತ ಹಾಕಿ ತರಬೇತುದಾರ ಅಂತೋಣಿ ಡಿಸೋಜ ಕಾರ್ಯಕ್ರಮ ನಿರೂಪಿಸಿ, ಹಾಕಿ ತೀರ್ಪುಗಾರ ಶಶಿಧರ್ ವಂದಿಸಿ, ಹಾಕಿ ಸ್ಫೋಟ್ರ್ಸ್ ಹಾಸ್ಟೇಲ್ ಪ್ರಾರಂಭಿಸುವಂತೆ ಕ್ರೀಡಾಪ್ರೇಮಿಗಳ ಪರವಾಗಿ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.ಬಿಜೆಪಿಯಿಂದ ಉಸ್ತುವಾರಿ ಸಚಿವರಿಗೆ ಘೇರಾವ್ ಪ್ರಯತ್ನಪಟ್ಟಣದಲ್ಲಿ ನಿರ್ಮಾಣವಾಗಿರುವ ಸಿಂಥೆಟಿಕ್ ಟರ್ಫ್ ನಿರ್ಮಾಣಕ್ಕೆ ಹೆಚ್ಚಿನ ಶ್ರಮವಹಿಸಿದ್ದ ಪ್ರಮುಖರಿಗೆ ಆಹ್ವಾನ ನೀಡದೆ ಅವಮಾನಿಸಲಾಗಿದೆ ಎಂದು ಬಿಜೆಪಿ ನಗರಾಧ್ಯಕ್ಷ ಎಸ್.ಆರ್. ಸೋಮೇಶ್ ಪ್ರಮುಖರಾದ ಪಿ.ಕೆ. ಚಂದು, ಮೃತ್ಯುಂಜಯ, ಮೋಹಿನಿ, ಬಿ.ಜೆ. ದೀಪಕ್, ಜಯಲಕ್ಷ್ಮಿ, ಶುಭಾಕರ್, ಶರತ್‍ಚಂದ್ರ, ಮನುಕುಮಾರ್ ರೈ ಮತ್ತಿತರರು ಜೂನಿಯರ್ ಕಾಲೇಜು ಮುಖ್ಯದ್ವಾರದಲ್ಲಿ ಉಸ್ತುವಾರಿ ಸಚಿವರಿಗೆ ಘೇರಾವ್ ಮಾಡುವ ಪ್ರಯತ್ನ ಮಾಡಿದರು.
ಡಿವೈಎಸ್‍ಪಿ ಗಂಗಾಧರಪ್ಪ ಮತ್ತು ಬಿಜೆಪಿ ಕಾರ್ಯಕರ್ತರಿಗೂ ಮಾತಿನ ಚಕಮಕಿ ನಡೆಯಿತು. ಮಾಜಿ ಕ್ರೀಡಾ ಸಚಿವ ಅಪ್ಪಚು ರಂಜನ್, ಸಂಸದ ಪ್ರತಾಪ್ ಸಿಂಹ ಅವರನ್ನು ಸೌಜನ್ಯದಿಂದ ಆಹ್ವಾನಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ತಮ್ಮ ಅಹವಾಲು ಹೇಳಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಡಿವೈಎಸ್‍ಪಿ ಅವರಿಗೆ ಮನವಿ ಮಾಡಿದರು.ಟರ್ಫ್ ಕಾಮಗಾರಿ ಉಸ್ತುವಾರಿ ಸಮಿತಿಯ ಅಧ್ಯಕ್ಷರಾಗಿದ್ದ ಎಂ.ಬಿ.ಅಭಿಮನ್ಯು ಕುಮಾರ್ ಅವರು ಉಸ್ತುವಾರಿ ಸಚಿವರೊಂದಿಗೆ ಆಹವಾಲು ಹೇಳಿಕೊಳ್ಳಲು ಅವಕಾಶ ಮಾಡಿಕೊಡಲಾಯಿತು. ಸರ್ಕಾರದ ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ. ಯುವ ಸಬಲೀಕರಣ ಇಲಾಖೆಯ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಕರೆ ಮಾಡಿ ಆಹ್ವಾನ ನೀಡಿದ್ದಾರೆ. ಅಭಿವೃದ್ಧಿಯ ವಿಷಯ ಯಾರನ್ನು ನಿರ್ಲಕ್ಷ್ಯ ಮಾಡುವ ಪ್ರಮೇಯ ಇಲ್ಲ ಎಂದು ಹೇಳಿದರು.