ಸಾರಾಂಶ
ಅಮಾನತುಗೊಂಡಿರುವ ಭಾರತೀಯ ಕುಸ್ತಿ ಫೆಡರೇಷನ್ ಆಯೋಜಿಸುವ ಯಾವುದೇ ಕೂಟಗಳಿಗೆ ಮಾನ್ಯತೆ ಇಲ್ಲ ಎಂದು ಕ್ರೀಡಾ ಸಚಿವಾಲಯ ಸ್ಪಷ್ಟಪಡಿಸಿದೆ. ಈ ಮೂಲಕ ಕುಸ್ತಿ ಫೆಡರೇಷನ್ ಅಧ್ಯಕ್ಷ ಸಂಜಯ್ ಸಿಂಗ್‌ರ ಸವಾಲಿಗೆ ಕ್ರೀಡಾ ಸಚಿವಾಲಯ ಖಡಕ್ ವಾರ್ನಿಂಗ್ ಕೊಟ್ಟಿದೆ.
ನವದೆಹಲಿ: ಅಮಾನತುಗೊಂಡಿರುವ ಭಾರತೀಯ ಕುಸ್ತಿ ಫೆಡರೇಷನ್ ಆಯೋಜಿಸುವ ಯಾವುದೇ ಕೂಟಗಳಿಗೆ ಮಾನ್ಯತೆ ಇಲ್ಲ ಎಂದು ಕ್ರೀಡಾ ಸಚಿವಾಲಯ ಸ್ಪಷ್ಟಪಡಿಸಿದೆ. ಈ ಮೂಲಕ ಕುಸ್ತಿ ಫೆಡರೇಷನ್ ಅಧ್ಯಕ್ಷ ಸಂಜಯ್ ಸಿಂಗ್‌ರ ಸವಾಲಿಗೆ ಕ್ರೀಡಾ ಸಚಿವಾಲಯ ಖಡಕ್ ವಾರ್ನಿಂಗ್ ಕೊಟ್ಟಿದೆ.
ಅಮಾನತಾಗಿರುವ ಸಂಸ್ಥೆಯ ಅಧ್ಯಕ್ಷ ಸಂಜಯ್ ಸಿಂಗ್ ಇತ್ತೀಚೆಗೆ ಸಚಿವಾಲಯಕ್ಕೆ ಸಡ್ಡು ಹೊಡೆದು, ಶೀಘ್ರ ರಾಷ್ಟ್ರೀಯ ಚಾಂಪಿಯನ್‌ಶಿಪ್ ಆಯೋಜಿಸುವುದಾಗಿ ಹೇಳಿದ್ದರು. ಆದರೆ ಈ ಕುರಿತು ನೋಟಿಸ್ ಜಾರಿ ಮಾಡಿರುವ ಕ್ರೀಡಾ ಸಚಿವಾಲಯ, ‘ಕುಸ್ತಿ ಸಂಸ್ಥೆ ಅಮಾನತುಗೊಂಡಿರುವ ಕಾರಣ ಇನ್ನು ಮುಂದೆ ಯಾವುದೇ ಕೂಟ ಆಯೋಜಿಸುವ ಅಧಿಕಾರ ಸಂಸ್ಥೆಗೆ ಇಲ್ಲ.
ಯಾವುದೇ ಕೂಟ ನಡೆಸಿದರೂ ಅದಕ್ಕೆ ಸರ್ಕಾರ ಮಾನ್ಯತೆ ನೀಡುವುದಿಲ್ಲ. ಕೂಟ ನಡೆಸಿ ಕುಸ್ತಿಪಟುಗಳಿಗೆ ಪ್ರಶಸ್ತಿ, ಪದಕ ಕೊಟ್ಟರೂ ಅದನ್ನು ನೇಮಕಾತಿಗಳಿಗೆ ಪರಿಗಣಿಸುವುದಿಲ್ಲ ಎಂದು ಸ್ಪಷ್ಟ ಆದೇಶ ಹೊರಡಿಸಿದೆ.
ಅಲ್ಲದೆ ಮುಂದಿನ ಎಲ್ಲಾ ಕೂಟಗಳನ್ನು ಕುಸ್ತಿ ಸಂಸ್ಥೆಯ ಮೇಲುಸ್ತುವಾರಿಗೆ ನೇಮಕಗೊಂಡಿರುವ ಸ್ವತಂತ್ರ ಸಮಿತಿಯೇ ಆಯೋಜಿಸಲಿದೆ ಎಂದು ಸ್ಪಷ್ಟಪಡಿಸಿದೆ. ಜೊತೆಗೆ ಭಾರತದ ಕುಸ್ತಿ ಸಂಸ್ಥೆಯ ಹೆಸರು, ಲೋಗೋ ಹಾಗೂ ಲೆಟರ್ ಹೆಡ್ ಕೂಡಾ ಬಳಸಬಾರದು ಎಂದು ಸಂಜಯ್ ಸಿಂಗ್ ನೇತೃತ್ವದ ಸಮಿತಿಗೆ ಕ್ರೀಡಾ ಸಚಿವಾಲಯ ಸ್ಪಷ್ಟ ಸೂಚನೆ ನೀಡಿದೆ.
ಇತ್ತೀಚೆಗಷ್ಟೇ ಸ್ವತಂತ್ರ ಸಮಿತಿಯು ಫೆ.2ರಿಂದ 5ರ ವರೆಗೆ ಜೈಪುರದಲ್ಲಿ ಹಿರಿಯರ ರಾಷ್ಟ್ರೀಯ ಚಾಂಪಿಯನ್‌ಶಿಪ್ ಆಯೋಜಿಸುವುದಾಗಿ ಘೋಷಿಸಿತ್ತು. ಆದರೆ ಅದಕ್ಕೆ ಸಡ್ಡು ಹೊಡೆದಿದ್ದ ಸಂಜಯ್ ಸಿಂಗ್, ಕೂಟಗಳನ್ನು ನಾವೇ ಆಯೋಜಿಸುತ್ತೇವೆ ಎಂದಿದ್ದರು. ಸ್ವತಂತ್ರ ಸಮಿತಿ ಕೂಟ ಆಯೋಜಿಸಿದರೆ ತಂಡಗಳನ್ನು ಕಳುಹಿಸುವವರು ಯಾರು ಎಂದು ಸವಾಲೆಸೆದಿದ್ದರು.