ಕಾನೂನಿನ ಲೋಪದಿಂದಾಗಿ ಶ್ರೀಶಾಂತ್‌ ಬಚಾವಾದರು: ತನಿಖಾಧಿಕಾರಿ!

| Published : Apr 08 2024, 01:08 AM IST / Updated: Apr 08 2024, 04:44 AM IST

ಸಾರಾಂಶ

ಜಿಂಬಾಬ್ವೆ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಕ್ರೀಡೆಯಲ್ಲಿನ ಫಿಕ್ಸಿಂಗ್‌ಗೆ ಕಠಿಣ ಕಾನೂನುಗಳಿವೆ. ಆದರೆ ಭಾರತದಲ್ಲಿ ಸೂಕ್ತ ಕಾನೂನಿಲ್ಲ ಎಂದು ಫಿಕ್ಸಿಂಗ್‌ ಕೇಸ್‌ ತನಿಖಾಧಿಕಾರಿಯಾಗಿದ್ದ ನೀರಜ್‌ ಹೇಳಿದ್ದಾರೆ.

ನವದೆಹಲಿ: ಭಾರತದ ಮಾಜಿ ವೇಗಿ ಎಸ್‌.ಶ್ರೀಶಾಂತ್ ವಿರುದ್ಧ ಐಪಿಎಲ್‌ನ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳಿದ್ದರೂ ಕಾನೂನಿನಲ್ಲಿನ ಲೋಪದಿಂದಾಗಿ ಬಚಾವಾದರು ಎಂದು ಬಿಸಿಸಿಐನ ಮಾಜಿ ಭದ್ರತಾ ಅಧಿಕಾರಿ, ಫಿಕ್ಸಿಂಗ್‌ ಕೇಸ್‌ ತನಿಖಾಧಿಕಾರಿಯಾಗಿದ್ದ ನೀರಜ್‌ ಕುಮಾರ್‌ ಸ್ಫೋಟಕ ಮಾಹಿತಿ ನೀಡಿದ್ದಾರೆ.

ಐಪಿಎಲ್‌ ಅಧಿಕಾರಿಯಾಗಿ 37 ವರ್ಷ ಸೇವೆ ಸಲ್ಲಿಸಿರುವ ನೀರಜ್‌ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ‘ಜಿಂಬಾಬ್ವೆ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಕ್ರೀಡೆಯಲ್ಲಿನ ಫಿಕ್ಸಿಂಗ್‌ಗೆ ಕಠಿಣ ಕಾನೂನುಗಳಿವೆ. ಆದರೆ ಭಾರತದಲ್ಲಿ ಸೂಕ್ತ ಕಾನೂನಿಲ್ಲ. ಫಿಕ್ಸಿಂಗ್‌ ಪ್ರಕರಣಗಳು ನ್ಯಾಯಾಲಯಕ್ಕೆ ಹೋದರೆ, ಮೋಸ ಹೋದ ಒಬ್ಬ ವ್ಯಕ್ತಿಯನ್ನು ನಮಗೆ ತೋರಿಸಿ ಎಂದು ನ್ಯಾಯಾಲಯ ಹೇಳುತ್ತದೆ. ಹೀಗಾದರೆ ಕಠಿಣ ಶಿಕ್ಷೆ ಹೇಗೆ ಸಾಧ್ಯ’ ಎಂದು ನೀರಜ್‌ ಪ್ರಶ್ನಿಸಿದ್ದಾರೆ.

2013ರಲ್ಲಿ ಸ್ಪಾಟ್ ಫಿಕ್ಸಿಂಗ್‌ ಪ್ರಕರಣದಲ್ಲಿ ಶ್ರೀಶಾಂತ್‌ ಜೊತೆ ರಾಜಸ್ಥಾನ ತಂಡದ ಅಜಿತ್‌ ಚಾಂಡಿಲಾ, ಅಂಕಿತ್‌ ಚೌಹಾಣ್‌ ಸಿಕ್ಕಿಬಿದ್ದಿದ್ದರು. ಆದರೆ 2019ರಲ್ಲಿ ಸುಪ್ರೀಂ ಕೋರ್ಟ್‌ ಶ್ರೀಶಾಂತ್‌ ಮೇಲೆ ಹೇರಲಾಗಿದ್ದ ಆಜೀವ ನಿಷೇಧ ಶಿಕ್ಷೆಯನ್ನು ಪುನರ್‌ಪರಿಶೀಲಿಸುವಂತೆ ಬಿಸಿಸಿಐಗೆ ಸೂಚಿಸಿತ್ತು. 2020ರ ಬಳಿಕ ಕ್ರಿಕೆಟ್‌ಗೆ ಮರಳಿದ್ದ ಶ್ರೀಶಾಂತ್‌, ಕೇರಳ ಪರ ರಣಜಿ ತಂಡದಲ್ಲೂ ಆಡಿದ್ದಾರೆ.