ಸಾರಾಂಶ
ಹೈದರಾಬಾದ್: ಬೌಲರ್‌ಗಳ ಶಿಸ್ತುಬದ್ಧ ದಾಳಿ, ಬಳಿಕ ಅಭಿಷೇಕ್ ಶರ್ಮಾ, ಏಡನ್ ಮಾರ್ಕ್‌ರಮ್ ಅಬ್ಬರದ ಆಟದಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ 17ನೇ ಆವೃತ್ತಿ ಐಪಿಎಲ್‌ನಲ್ಲಿ 2ನೇ ಗೆಲುವು ದಾಖಲಿಸಿದೆ.
ಬೌಲಿಂಗ್, ಬ್ಯಾಟಿಂಗ್ ಎರಡೂ ವಿಭಾಗದಲ್ಲಿ ವೈಫಲ್ಯ ಅನುಭವಿಸಿದ ಹಾಲಿ ಚಾಂಪಿಯನ್ ಚೆನ್ನೈ ವಿರುದ್ಧ ಹೈದರಾಬಾದ್‌ಗೆ 6 ವಿಕೆಟ್ ಜಯ ಲಭಿಸಿತು. ಆರಂಭಿಕ 2 ಪಂದ್ಯ ಗೆದ್ದು ಬೀಗಿದ್ದ ಸಿಎಸ್‌ಕೆಗೆ ಇದು ಸತತ 2ನೇ ಸೋಲು.ಹೈದ್ರಾಬಾದ್-ಮುಂಬೈ ನಡುವೆ ಕಳೆದ ಪಂದ್ಯದಲ್ಲಿ ದಾಖಲೆಯ ರನ್ ಹೊಳೆಯೇ ಹರಿದಿದ್ದ ಕ್ರೀಡಾಂಗಣದಲ್ಲಿ ಈ ಬಾರಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಕಲೆಹಾಕಿದ್ದ 165 ರನ್ ಮಾತ್ರ. ಈ ಗುರಿ ಸನ್‌ರೈಸರ್ಸ್‌ಗೆ ಸವಾಲು ಎನಿಸಲೇ ಇಲ್ಲ.
ಪವರ್-ಪ್ಲೇ ವೇಳೆಗಾಗಲೇ ಗೆಲುವು ಖಚಿತಪಡಿಸಿಕೊಂಡ ತಂಡ 18.1 ಓವರಲ್ಲಿ ಗೆಲುವನ್ನು ಅಧಿಕೃತಗೊಳಿಸಿತು.ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದಿದ್ದ ಮುಕೇಶ್ ಚೌಧರಿಯ ಮೊದಲ ಓವರ್‌ನಲ್ಲೇ ಅಭಿಷೇಕ್ ಶರ್ಮಾ 26 ರನ್ ಚಚ್ಚಿದ ಅಭಿಷೇಕ್, ಆ ಬಳಿಕವೂ ಸುಮ್ಮನಾಗಲಿಲ್ಲ. ಪಂದ್ಯದ 3ನೇ ಓವರ್‌ನಲ್ಲಿ ಸಿಕ್ಸರ್, ಬೌಂಡರಿ ಸಿಡಿಸಿದ ಅವರು 4ನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಆದರೆ 12 ಎಸೆತಗಳಲ್ಲೇ 37 ರನ್ ಸಿಡಿಸಿದ್ದ ಅವರು ಪಂದ್ಯದ ಗತಿಯನ್ನೇ ಬದಲಿಸಿದರು.
ಟ್ರ್ಯಾವಿಸ್ ಹೆಡ್ 24 ಎಸೆತದಲ್ಲಿ 31 ರನ್ ಸಿಡಿಸಿದರೆ, ಮಾರ್ಕ್‌ರಮ್ 36 ಎಸೆತಗಳಲ್ಲಿ 50 ರನ್ ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 9 ಓವರ್‌ನಲ್ಲೇ 100ರ ಗಡಿ ದಾಟಿದ್ದ ತಂಡವನ್ನು ಬಳಿಕ ಚೆನ್ನೈ ಬೌಲರ್‌ಗಳು ಒಂದಷ್ಟು ಕಾಲ ಕಾಡಿದರೂ, ಸೋಲನ್ನು ತಪ್ಪಿಸಲಾಗಲಿಲ್ಲ.
ದುಬೆ ಅಬ್ಬರ: ದೊಡ್ಡ ಮೊತ್ತದ ಗುರಿಯೊಂದಿಗೆ ಚೆನ್ನೈ ಕಣಕ್ಕಿಳಿದಿದ್ದರೂ ಶಿವಂ ದುಬೆ ಹೊರತುಪಡಿಸಿ ಬೇರೆ ಯಾವ ಬ್ಯಾಟರ್‌ಗೆ ಕೂಡಾ ರನ್ ಗಳಿಸುವ ಉತ್ಸಾಹವಿದ್ದಂತೆ ಕಂಡು ಬರಲಿಲ್ಲ. ಋತುರಾಜ್ 26, ರಚಿನ್ ರವೀಂದ್ರ 12, ಡ್ಯಾರಿಲ್ ಮಿಚೆಲ್ 13 ರನ್ ಗಳಿಸಿದರೆ, ರಹಾನೆ 35 ರನ್ ಗಳಿಸಲು 30 ಎಸೆತ ಬಳಸಿಕೊಂಡರು. ಶಿವಂ ದುಬೆ 24 ಎಸೆತಗಳಲ್ಲಿ 45 ರನ್ ಚಚ್ಚಿದರೆ, ಜಡೇಜಾ 31 ರನ್ ಕೊಡುಗೆ ನೀಡಿದರು.ಸ್ಕೋರ್: ಚೆನ್ನೈ 20 ಓವರಲ್ಲಿ 165/5 (ದುಬೆ 45, ರಹಾನೆ 35, ಭುವನೇಶ್ವರ್ 1-28), ಸನ್‌ರೈಸರ್ಸ್ 18.1 ಓವರಲ್ಲಿ 166/4 (ಮಾರ್ಕ್‌ರಮ್ 50, ಅಭಿಷೇಕ್ 37, ಮೊಯೀನ್ 2-23)