ಸಾರಾಂಶ
ಕೊಲಂಬೊ: ಜಾಫ್ರಿ ವ್ಯಾಂಡರ್ಸೆ ಹಾಗೂ ಚರಿತ್ ಅಸಲಂಕ ಮಾರಕ ದಾಳಿಗೆ ತತ್ತರಿಸಿದ ಭಾರತ, ಶ್ರೀಲಂಕಾ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ 32 ರನ್ ಆಘಾತಕಾರಿ ಸೋಲುಂಡಿದೆ. ಆರಂಭಿಕ ಪಂದ್ಯದಲ್ಲಿ ಗೆಲ್ಲುವ ಪಂದ್ಯವನ್ನು ಟೈ ಮಾಡಿಕೊಂಡಿದ್ದ ರೋಹಿತ್ ಶರ್ಮಾ ಪಡೆ, 2ನೇ ಪಂದ್ಯದಲ್ಲೂ ಹೀನಾಯ ಪ್ರದರ್ಶನ ತೋರಿತು. 3 ಪಂದ್ಯಗಳ ಸರಣಿಯಲ್ಲಿ ಲಂಕಾ 1-0 ಮುನ್ನಡೆ ಸಾಧಿಸಿತು.ಮೊದಲು ಬ್ಯಾಟ್ ಮಾಡಿದ ಲಂಕಾ 9 ವಿಕೆಟ್‌ಗೆ 240 ರನ್ ಕಲೆಹಾಕಿತು.
ರನ್ ಖಾತೆ ತೆರೆಯುವ ಮೊದಲೇ ನಿಸ್ಸಾಂಕ ಔಟಾದರೂ, ಬಳಿಕ ಆವಿಷ್ಕಾ ಫೆರ್ನಾಂಡೊ 40, ಕುಸಾಲ್ ಮೆಂಡಿಸ್ 30, ಕಮಿಂಡು ಮೆಂಡಿಸ್ 40, ವೆಲ್ಲಲಗೆ 39 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ವಾಷಿಂಗ್ಟನ್ ಸುಂದರ್ 30ಕ್ಕೆ 3 ವಿಕೆಟ್ ಕಿತ್ತರು.ಸುಲಭ ಗುರಿ ಪಡೆದರೂ ಲಂಕಾ ಸ್ಪಿನ್ನರ್‌ಗಳ ದಾಳಿಗೆ ಕುಸಿದ ಭಾರತ 42.2 ಓವರ್‌ಗಳಲ್ಲಿ 208 ರನ್‌ಗೆ ಸರ್ವಪತನ ಕಂಡಿತು. ರೋಹಿತ್ ಶರ್ಮಾ(64) ಹಾಗೂ ಶುಭ್‌ಮನ್ ಗಿಲ್(35) ಮೊದಲ ವಿಕೆಟ್‌ಗೆ 97 ರನ್ ಜೊತೆಯಾಟವಾಡಿದರು.
ಆದರೆ ರೋಹಿತ್ ಔಟಾದ ಬಳಿಕ ತಂಡ ದಿಢೀರ್ ಕುಸಿತಕ್ಕೊಳಗಾಯಿತು. ಮೊದಲ 6 ಬ್ಯಾಟರ್‌ಗಳನ್ನು ಪೆವಿಲಿಯನ್‌ಗಟ್ಟಿದ ವ್ಯಾಂಡರ್ಸೆ ಪಂದ್ಯದ ದಿಕ್ಕನ್ನೇ ಬದಲಿಸಿದರು. ಈ ಹಂತದಲ್ಲಿ ಅಕ್ಷರ್(44) ಹೋರಾಡಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ. ಅಸಲಂಕ 3 ವಿಕೆಟ್ ಪಡೆದರು.ಸ್ಕೋರ್: ಶ್ರೀಲಂಕಾ 50 ಓವರಲ್ಲಿ 240/9 (ಫೆರ್ನಾಂಡೊ 40, ಕಮಿಂಡು 40, ಸುಂದರ್ 3-30), ಭಾರತ 42.2 ಓವರ್‌ಗಳಲ್ಲಿ 208/10 (ರೋಹಿತ್ 64, ಅಕ್ಷರ್ 44, ವ್ಯಾಂಡೆರ್ಸೆ 6-33, ಅಸಲಂಕ 3-20)