ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಷಿಯೇನ್(ಕೆಎಸ್‌ಸಿಎ) ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಹಿರಿಯ ಪತ್ರಿಕೋದ್ಯಮಿ ಕೆ.ಎನ್.ಶಾಂತಕುಮಾರ್ ಅವರು ಸಲ್ಲಿಸಿರುವ ನಾಮಪತ್ರ ಅಂಗೀಕರಿಸಲು ಸೂಚಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿದ್ದ ಮೇಲ್ಮನವಿ ವಜಾ
ಬೆಂಗಳೂರು : ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಷಿಯೇನ್(ಕೆಎಸ್‌ಸಿಎ) ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಹಿರಿಯ ಪತ್ರಿಕೋದ್ಯಮಿ ಕೆ.ಎನ್.ಶಾಂತಕುಮಾರ್ ಅವರು ಸಲ್ಲಿಸಿರುವ ನಾಮಪತ್ರ ಅಂಗೀಕರಿಸಲು ಚುನಾವಣಾಧಿಕಾರಿಗೆ ಸೂಚಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿದ್ದ ಮೇಲ್ಮನವಿಯನ್ನು ವಿಭಾಗೀಯ ಪೀಠ ಬುಧವಾರ ವಜಾಗೊಳಿಸಿದೆ. ಇದರೊಂದಿಗೆ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಬೆಂಬಲದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿಯುತ್ತಿರುವ ಶಾಂತಕುಮಾರ್ ಅವರ ಸ್ಪರ್ಧೆ ಖಚಿತವಾಗಿದೆ. ಅಲ್ಲದೆ, ಕೆಎಸ್‌ಸಿಎ ಚುನಾವಣೆ ನಿಗದಿಯಂತೆ ಡಿ.7ರಂದೇ ನಡೆಯಲಿದೆ.
ನಾಮಪತ್ರ ಸಲ್ಲಿಸಿ, ಹಿಂಪಡೆದುಕೊಂಡಿದ್ದ ಕಲ್ಪನಾ ವೆಂಕಟಾಚಾರ್
ಕೆಎಸ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ, ನಂತರ ಅದನ್ನು ಹಿಂಪಡೆದುಕೊಂಡಿದ್ದ ಕಲ್ಪನಾ ವೆಂಕಟಾಚಾರ್(ವೆಂಕಟೇಶ್ ಪ್ರಸಾದ್ ಬಣ) ಅವರು ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ, ಪ್ರಕರಣದಲ್ಲಿ ಮೇಲ್ಮನವಿದಾರರು ಬಾಧಿತರಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ತಿರಸ್ಕರಿಸಿತು.
ಹಿನ್ನೆಲೆ:
ಕೆಎಸ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಕೆ.ಎನ್.ಶಾಂತಕುಮಾರ್ ಅವರು, ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಸ್ಪೋರ್ಟ್ ಕ್ಲಬ್ ಪ್ರತಿನಿಧಿಸುತ್ತಿದ್ದಾರೆ. ಈ ಕ್ಲಬ್ ಕೆಎಸ್‌ಸಿಎಗೆ ಬಾಕಿ ಉಳಿಸಿಕೊಂಡಿದ್ದ ₹200 ಚಂದಾ ಪಾವತಿಸಿದ ರಶೀದಿ ಸಲ್ಲಿಸಿಲ್ಲವೆಂದು ಶಾಂತಕುಮಾರ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕರಿಸಿದ್ದರು. ಅದನ್ನು ಪ್ರಶ್ನಿಸಿ ಶಾಂತಕುಮಾರ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ನಾಮಪತ್ರ ಅಂಗೀಕರಿಸಿ ನಿಗದಿಯಂತೆ ಡಿ.7ರಂದು ಚುನಾವಣೆ ನಡೆಸಿ ಫಲಿತಾಂಶ ಪ್ರಕಟಿಸಲು ಸೂಚಿಸಿತ್ತು. ಈ ಆದೇಶ ಪ್ರಶ್ನಿಸಿ ಕಲ್ಪನಾ ವೆಂಕಟಾಚಾರ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತು.
ಭಾರೀ ಕುತೂಹಲಕ್ಕೆ ಕಾರಣವಾಗಿರುವ ಕೆಎಸ್‌ಸಿಎ ಚುನಾವಣೆ ಭಾನುವಾರ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಶಾಂತಕುಮಾರ್ ಹಾಗೂ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಸ್ಪರ್ಧಿಸುತ್ತಿದ್ದಾರೆ. ಶಾಂತಕುಮಾರ್ ಬಣ ಬ್ರಿಜೇಶ್ ಪಟೇಲ್ ಬೆಂಬಲದೊಂದಿಗೆ ಕಣಕ್ಕಿಳಿಯುತ್ತಿದ್ದು, ವೆಂಕಟೇಶ್ ಪ್ರಸಾದ್ ಬಣಕ್ಕೆ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಬೆಂಬಲ ಘೋಷಿಸಿದ್ದಾರೆ.
