ಸಾರಾಂಶ
ಕೋಲ್ಕತಾ: ಹಾಲಿ ಚಾಂಪಿಯನ್ ಕೆಕೆಆರ್ ಹಾಗೂ ಕಳೆದ ವರ್ಷದ ರನ್ನರ್-ಅಪ್ ಸನ್‌ರೈಸರ್ಸ್ ಗುರುವಾರ ಈಡನ್ ಗಾರ್ಡನ್ಸ್‌ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಆಡಿರುವ 3 ಪಂದ್ಯಗಳಲ್ಲಿ ತಲಾ 2 ಸೋಲು ಕಂಡಿರುವ ಉಭಯ ತಂಡಗಳು ಲಯ ಕಂಡುಕೊಳ್ಳಲು ಎದುರು ನೋಡುತ್ತಿವೆ. ಕೆಕೆಆರ್‌ಗೆ ಸರಿಯಾದ ಸಂಯೋಜನೆಯೊಂದಿಗೆ ಕಣಕ್ಕಿಳಿಯುವುದೇ ಸವಾಲಾಗಿ ಪರಿಣಮಿಸಿದ್ದು, ನಾಯಕ ಅಜಿಂಕ್ಯ ರಹಾನೆ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ. ಇನ್ನು ದುಬಾರಿ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ನಿರೀಕ್ಷೆ ಉಳಿಸಿಕೊಳ್ಳಲು ವಿಫಲರಾಗುತ್ತಿದ್ದು, ಅನುಭವಿಗಳಾದ ನರೈನ್ ಹಾಗೂ ರಸೆಲ್ ಸಹ ಮಂಕಾದಂತೆ ಕಂಡುಬರುತ್ತಿದೆ.
ಮತ್ತೊಂದೆಡೆ ಮೊದಲ ಪಂದ್ಯದಲ್ಲಿ 286 ರನ್ ಚಚ್ಚಿದ ಸನ್‌ರೈಸರ್ಸ್ ಆ ಬಳಿಕ ಹೆಚ್ಚು ಸದ್ದು ಮಾಡಿಲ್ಲ. ಈ ಪಂದ್ಯದಲ್ಲಿ ಪುಟಿದೇಳುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.
ಪಂದ್ಯ: ಸಂಜೆ 7.30ಕ್ಕೆ
ಈ ವರ್ಷ ಭಾರತಕ್ಕೆ ವಿಂಡೀಸ್, ದ.ಆಫ್ರಿಕಾ ವಿರುದ್ಧ ಸರಣಿ
ನವದೆಹಲಿ: ಈ ವರ್ಷ ಭಾರತ ತಂಡ ತವರಿನಲ್ಲಿ ಆಡಲಿರುವ ಸರಣಿಗಳ ವೇಳಾಪಟ್ಟಿಯನ್ನು ಬುಧವಾರ ಬಿಸಿಸಿಐ ಪ್ರಕಟಿಸಿತು. ಅಕ್ಟೋಬರ್-ಡಿಸೆಂಬರ್‌ನಲ್ಲಿ ಭಾರತ, ವೆಸ್ಟ್‌ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ವಿಂಡೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ ನಿಗದಿಯಾಗಿದ್ದು, ಅ.2ರಿಂದ ಅಹಮದಾಬಾದ್‌ನಲ್ಲಿ ಮೊದಲ ಟೆಸ್ಟ್, ಅ.10ರಿಂದ ಕೋಲ್ಕತಾದಲ್ಲಿ 2ನೇ ಟೆಸ್ಟ್ ನಡೆಯಲಿದೆ. ದ.ಆಫ್ರಿಕಾ ವಿರುದ್ಧ 2 ಟೆಸ್ಟ್, 3 ಏಕದಿನ, 5 ಟಿ20 ಪಂದ್ಯಗಳು ನಡೆಯಲಿವೆ.ನ.14ರಿಂದ ನವದೆಹಲಿ, ನ.22ರಿಂದ ಗುವಾಹಟಿಯಲ್ಲಿ ಟೆಸ್ಟ್‌ಗಳು ನಡೆಯಲಿವೆ. ರಾಂಚಿ, ರಾಯ್ಪುರ, ವಿಶಾಖಪಟ್ಟಣಂನಲ್ಲಿ ಕ್ರಮವಾಗಿ ನ.30, ಡಿ.3, ಡಿ.6ರಂದು ಏಕದಿನ ಪಂದ್ಯಗಳು ನಡೆಯಲಿವೆ. ಡಿ.9, ಡಿ.11, ಡಿ.14, ಡಿ.17, ಡಿ.19ರಂದು ಕ್ರಮವಾಗಿ ಕಟಕ್, ನವ ಚಂಡೀಗಢ, ಧರ್ಮಶಾಲಾ, ಲಖನೌ, ಅಹಮದಾಬಾದ್‌ನಲ್ಲಿ ಟಿ20 ಪಂದ್ಯಗಳು ನಡೆಯಲಿವೆ.