ಮಾಂಟೆ ಕಾರ್ಲೋ ಟೆನಿಸ್‌ನಲ್ಲಿ ಪ್ರಧಾನ ಸುತ್ತಿಗೇರಿದ ನಗಾಲ್‌

| Published : Apr 08 2024, 01:09 AM IST / Updated: Apr 08 2024, 04:42 AM IST

ಸಾರಾಂಶ

42 ವರ್ಷ ಬಳಿಕ ಈ ಸಾಧನೆ ಮಾಡಿದ ಮೊದಲ ಭಾರತೀಯ. 1982ರಲ್ಲಿ ರಮೇಶ್‌ ಕೃಷ್ಣನ್‌ ಟೂರ್ನಿಯಲ್ಲಿ ಪ್ರಧಾನ ಸುತ್ತು ತಲುಪಿದ್ದರು.

ಪ್ಯಾರಿಸ್‌: ಭಾರತದ ಅಗ್ರ ಟೆನಿಸಿಗ ಸುಮಿತ್‌ ನಗಾಲ್‌ ಮಾಂಟೆ ಕಾರ್ಲೋ ಟೆನಿಸ್‌ ಟೂರ್ನಿಯ ಪ್ರಧಾನ ಸುತ್ತಿಗೆ ಪ್ರವೇಶಿಸಿದ್ದಾರೆ. ಈ ಮೂಲಕ 42 ವರ್ಷ ಬಳಿಕ ಈ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಆಡಲಿರುವ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾನುವಾರ ಪುರುಷರ ಸಿಂಗಲ್ಸ್‌ ಅರ್ಹತಾ ಸುತ್ತಿನ ಕೊನೆ ಪಂದ್ಯದಲ್ಲಿ ನಗಾಲ್‌, ವಿಶ್ವ ನಂ.55, ಅರ್ಜೆಂಟೀನಾದ ಫ್ಯಾಕುಂಡೊ ಡಯಾಜ್‌ ಅಕೋಸ್ಟಾ ವಿರುದ್ಧ 7-5, 2-6, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿ, ಮುಖ್ಯ ಸುತ್ತಿಗೇರಿದರು. 1982ರಲ್ಲಿ ರಮೇಶ್‌ ಕೃಷ್ಣನ್‌ ಟೂರ್ನಿಯಲ್ಲಿ ಪ್ರಧಾನ ಸುತ್ತು ತಲುಪಿದ್ದರು. ಆದರೆ ಅವರು ಮೊದಲ ಪಂದ್ಯದಲ್ಲೇ ಸೋತು ಹೊರಬಿದ್ದಿದ್ದರು.

ಹಾಕಿ: ಆಸೀಸ್‌ ವಿರುದ್ಧ ಭಾರತಕ್ಕೆ 2ನೇ ಸೋಲು

ಪರ್ಥ್‌: ಆಸ್ಟ್ರೇಲಿಯಾ ವಿರುದ್ಧ ಹಾಕಿ ಸರಣಿಯಲ್ಲಿ ಭಾರತ ಪುರುಷರ ತಂಡ ಸತತ 2ನೇ ಸೋಲನುಭವಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 0-2 ಹಿನ್ನಡೆ ಅನುಭವಿಸಿದೆ. ಮೊದಲ ಪಂದ್ಯದಲ್ಲಿ ಶನಿವಾರ 1-5 ಗೋಲುಗಳಿಂದ ಸೋತಿದ್ದ ಭಾರತ ತಂಡ ಭಾನುವಾರ 2-4 ಅಂತರದಲ್ಲಿ ಪರಾಭವಗೊಂಡಿತು. 6ನೇ ನಿಮಿಷದಲ್ಲೇ ಆಸೀಸ್‌ ಗೋಲಿನ ಖಾತೆ ತೆರೆದರೂ, ಜುಗ್ರಾಜ್‌ ಸಿಂಗ್‌(9ನೇ ನಿಮಿಷ) ಹಾಗೂ ಹರ್ಮನ್‌ಪ್ರೀತ್‌ ಸಿಂಗ್‌(30ನೇ ನಿಮಿಷ) ಗೋಲು ಬಾರಿಸಿ ಭಾರತಕ್ಕೆ 2-1ರ ಮುನ್ನಡೆ ಒದಗಿಸಿದರು. ಆದರೆ ಬಳಿಕ 3 ಗೋಲು ಬಾರಿಸಿದ ಆತಿಥೇಯ ತಂಡ ಗೆಲುವನ್ನು ತನ್ನದಾಗಿಸಿಕೊಂಡಿತು. 3ನೇ ಪಂದ್ಯ ಏ.10ಕ್ಕೆ ನಡೆಯಲಿದೆ.