ಸಾರಾಂಶ
ಹೈದರಾಬಾದ್: ಅನಿರೀಕ್ಷಿತ ಕಮ್‌ಬ್ಯಾಕ್, ರಣರೋಚಕ ಪೈಪೋಟಿ ಹಾಗೂ ಕೊನೆ ಓವರ್ ಥ್ರಿಲ್ಲರ್‌ಗೆ ಸಾಕ್ಷಿಯಾದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ರಾಜಸ್ಥಾನ 1 ರನ್ ವೀರೋಚಿತ ಸೋಲುಂಡಿದೆ. ಕೊನೆ ಎಸೆತದವರೆಗೂ ರೋಚಕತೆ ಕಾಯ್ದುಕೊಂಡಿದ್ದ ಪಂದ್ಯದಲ್ಲಿ ಅತ್ಯದ್ಭುತ ಜಯ ದಾಖಲಿಸಿದ ಹೈದ್ರಾಬಾದ್ 10ರಲ್ಲಿ 6ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ರಾಜಸ್ಥಾನ 10ರಲ್ಲಿ 8 ಜಯದೊಂದಿಗೆ ಅಗ್ರಸ್ಥಾನದಲ್ಲೇ ಉಳಿದಿದೆ.
ಮೊದಲು ಬ್ಯಾಟ್ ಮಾಡಿದ ಹೈದರಾಬಾದ್, ಆರಂಭಿಕ ಆಘಾತದಿಂದ ಚೇತರಿಸಿ 3 ವಿಕೆಟ್‌ಗೆ 201 ರನ್ ಕಲೆಹಾಕಿತು. ರಾಜಸ್ಥಾನ 7 ವಿಕೆಟ್‌ಗೆ 200 ರನ್ ಗಳಿಸಿ ಸೋಲೊಪ್ಪಿತು.ಮೊದಲ ಓವರ್‌ನಲ್ಲೇ ಬಟ್ಲರ್ ಹಾಗೂ ಸ್ಯಾಮ್ಸನ್‌ರನ್ನು ಭುವನೇಶ್ವರ್ ಪೆವಿಲಿಯನ್‌ಗೆ ಅಟ್ಟಿದರು. ಆದರೆ 3ನೇ ವಿಕೆಟ್‌ಗೆ ಜೈಸ್ವಾಲ್(40 ಎಸೆತದಲ್ಲಿ 67) ಹಾಗೂ ರಿಯಾನ್(49 ಎಸೆತಗಳಲ್ಲಿ 77) 134 ರನ್ ಸೇರಿಸಿದರು.
ಆದರೆ ಕೊನೆ ಕ್ಷಣದಲ್ಲಿ ಮತ್ತೆ ತಂಡ ಎಡವಿತು. ಪೊವೆಲ್ 15 ಎಸೆತದಲ್ಲಿ 27 ರನ್ ಸಿಡಿಸಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ. ಕೊನೆ ಓವರಲ್ಲಿ 13, ಕೊನೆ ಎಸೆತದಲ್ಲಿ 2 ರನ್ ಬೇಕಿದ್ದಾಗ ಹೈದ್ರಾಬಾದ್ ಗೆಲುವು ತನ್ನದಾಗಿಸಿಕೊಂಡಿತು.ಕಮ್‌ಬ್ಯಾಕ್: ಸನ್‌ರೈಸರ್ಸ್‌ನ ಆರಂಭ ತೀರಾ ಕಳಪೆಯಾಗಿತ್ತು. ಪವರ್‌ಪ್ಲೇನಲ್ಲಿ 2 ವಿಕೆಟ್‌ಗೆ 37, 10 ಓವರಲ್ಲಿ 75 ರನ್ ಗಳಿಸಿದ್ದ ತಂಡ ಬಳಿಕ ಗೇರ್ ಚೇಂಜ್ ಮಾಡಿತು. ನಿತೀಶ್ ರೆಡ್ಡಿ 42 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್‌ನೊಂದಿಗೆ 76 ರನ್ ಚಚ್ಚಿದರೆ, ಹೆಡ್ 58 ರನ್ ಸಿಡಿಸಿದರು. ಕ್ಲಾಸೆನ್ 19 ಎಸೆತಗಳಲ್ಲಿ ಔಟಾಗದೆ 42 ರನ್ ಸಿಡಿಸಿ ತಂಡವನ್ನು 200ರ ಗಡಿ ದಾಟಿಸಿದರು.
ಸ್ಕೋರ್: ಹೈದ್ರಾಬಾದ್ 20 ಓವರಲ್ಲಿ 201/3 (ನಿತೀಶ್ 76, ಹೆಡ್ 58, ಆವೇಶ್ 2-39), ರಾಜಸ್ಥಾನ 20 ಓವರಲ್ಲಿ 200/7 (ರಿಯಾನ್ 77, ಜೈಸ್ವಾಲ್ 67, ಭುವನೇಶ್ವರ್ 3-41)