287 ರನ್‌: ಆರ್‌ಸಿಬಿಗೆ ಅಟ್ಟಾಡಿಸಿ ಹೊಡೆದ ಸನ್‌ರೈಸರ್ಸ್‌ನಿಂದ ಮತ್ತೆ ದಾಖಲೆ!

| Published : Apr 16 2024, 01:03 AM IST / Updated: Apr 16 2024, 04:28 AM IST

287 ರನ್‌: ಆರ್‌ಸಿಬಿಗೆ ಅಟ್ಟಾಡಿಸಿ ಹೊಡೆದ ಸನ್‌ರೈಸರ್ಸ್‌ನಿಂದ ಮತ್ತೆ ದಾಖಲೆ!
Share this Article
  • FB
  • TW
  • Linkdin
  • Email

ಸಾರಾಂಶ

ಈ ಆವೃತ್ತಿಯಲ್ಲಿ 2ನೇ ಬಾರಿಗೆ ಐಪಿಎಲ್‌ನಲ್ಲಿ ಗರಿಷ್ಠ ರನ್‌ ದಾಖಲೆ. ಟ್ರ್ಯಾವಿಸ್‌ ಹೆಡ್‌ 39 ಎಸೆತದಲ್ಲಿ 100 ರನ್‌. ಕ್ಲಾಸೆನ್‌ ರೌದ್ರಾವತಾರ. 277 ರನ್‌ ದಾಖಲೆಯನ್ನು ಉತ್ತಮಗೊಳಿಸಿಕೊಂಡ ಹೈದ್ರಾಬಾದ್‌.

 ಬೆಂಗಳೂರು : ಸನ್‌ರೈಸರ್ಸ್‌ ಹೈದರಾಬಾದ್‌ ಈ ಆವೃತ್ತಿಯ ಐಪಿಎಲ್‌ನಲ್ಲಿ ಮತ್ತೊಮ್ಮೆ ಗರಿಷ್ಠ ರನ್‌ ದಾಖಲೆ ಬರೆದಿದೆ. ಕೆಲ ವಾರಗಳ ಹಿಂದಷ್ಟೇ ಮುಂಬೈ ಇಂಡಿಯನ್ಸ್‌ ವಿರುದ್ಧ 277 ರನ್‌ ಚಚ್ಚಿ, ಆರ್‌ಸಿಬಿಯ 263 ರನ್‌ ದಾಖಲೆ ಮುರಿದಿದ್ದ ಸನ್‌ರೈಸರ್ಸ್‌, ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 287 ರನ್‌ ಪೇರಿಸಿ ತನ್ನ ದಾಖಲೆಯನ್ನು ಉತ್ತಮಗೊಳಿಸಿಕೊಂಡಿತು. 

ಟಾಸ್‌ ಗೆದ್ದು ಮೊದಲು ಫೀಲ್ಡ್‌ ಮಾಡಲು ನಿರ್ಧರಿಸಿದ ಆರ್‌ಸಿಬಿಗೆ ಸನ್‌ರೈಸರ್ಸ್‌ ಅಟ್ಟಾಡಿಸಿ ಚಚ್ಚಿತು. ಟ್ರ್ಯಾವಿಸ್‌ ಹೆಡ್‌ ಸ್ಫೋಟಕ ಶತಕ ಸಿಡಿಸಿದರೆ, ಹೈನ್ರಿಕ್‌ ಕ್ಲಾಸೆನ್‌ ವಿಸ್ಫೋಟಕ ಆಟವಾಡಿ, ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. 

ಅಭಿಷೇಕ್‌ ಶರ್ಮಾ, ಅಬ್ದುಲ್‌ ಸಮದ್‌ರ ಸ್ಫೋಟಕ ಆಟವೂ ಆರ್‌ಸಿಬಿ ಬೌಲರ್‌ಗಳ ನಿದ್ದೆಗೆಡಿಸಿತು. ಆರ್‌ಸಿಬಿ ಆಟಗಾರರ ಮನಸ್ಥಿತಿ ಈಗಾಗಲೇ ತಂಡ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದಿದೆ ಎನ್ನುವಂತಿತ್ತು. ಇದರ ಸಂಪೂರ್ಣ ಲಾಭವೆತ್ತಿದ ಸನ್‌ರೈಸರ್ಸ್‌ ಬ್ಯಾಟರ್‌ಗಳು ಮನಬಂದಂತೆ ಬ್ಯಾಟ್‌ ಬೀಸಿ, ಬೌಂಡರಿ ಸಿಕ್ಸರ್‌ಗಳ ಸುರಿಮಳೆಯನ್ನೇ ಸುರಿಸಿದರು. ಮೊದಲ ಓವರಲ್ಲಿ 7 ರನ್‌ ಬಿಟ್ಟುಕೊಟ್ಟಿದ್ದೇ ಇನ್ನಿಂಗ್ಸ್‌ನಲ್ಲಿ ಆರ್‌ಸಿಬಿಯ ಉತ್ತಮ ಬೌಲಿಂಗ್‌ ಸಾಧನೆ. ಆ ಬಳಿಕ ಸನ್‌ರೈಸರ್ಸ್‌ ಬ್ಯಾಟರ್‌ಗಳು ಮುಟ್ಟಿದ್ದೆಲ್ಲಾ ಬೌಂಡರಿ, ಸಿಕ್ಸರ್‌ಗಳೇ.

ಹೆಡ್‌ ವಿಸ್ಫೋಟಕ ಶತಕ!

ಕಳೆದ ವರ್ಷ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಟ್ರ್ಯಾವಿಸ್‌ ಹೆಡ್‌ ಕೊಟ್ಟ ಕಾಟವನ್ನೇ ಭಾರತೀಯ ಅಭಿಮಾನಿಗಳು ಇನ್ನೂ ಮರೆತಿಲ್ಲ. ಅದೇ ಟ್ರ್ಯಾವಿಡ್‌ ಹೆಡ್‌, ಆರ್‌ಸಿಬಿ ಅಭಿಮಾನಿಗಳಿಗೆ ಭಾರಿ ನೋವು ನೀಡಿದರು. 20 ಎಸೆತದಲ್ಲಿ ಅರ್ಧಶತಕ ಪೂರೈಸಿದ ಹೆಡ್‌, 39 ಎಸೆತದಲ್ಲಿ ಶತಕ ಸಿಡಿಸಿ ಚಿನ್ನಸ್ವಾಮಿಯಲ್ಲಿ ನೆರೆದಿದ್ದ ಪ್ರೇಕ್ಷಕರು ಮೌನಕ್ಕೆ ಜಾರುವಂತೆ ಮಾಡಿದರು. 41 ಎಸೆತದಲ್ಲಿ 9 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ 102 ರನ್‌ ಸಿಡಿಸಿ ಔಟಾಗಿ ಹೊರನಡೆದರೂ, ಆರ್‌ಸಿಬಿ ನಿಟ್ಟುಸಿರು ಬಿಡಲಾಗಲಿಲ್ಲ. ಏಕೆಂದರೆ ಕ್ಲಾಸೆನ್‌ ಇನ್ನೂ ಕ್ರೀಸ್‌ನಲ್ಲೇ ಇದ್ದರು. ಕ್ಲಾಸೆನ್‌ 23 ಎಸೆತದಲ್ಲಿ ಅರ್ಧಶತಕ ಬಾರಿಸಿ, ಒಟ್ಟಾರೆ 31 ಎಸೆತದಲ್ಲಿ 2 ಬೌಂಡರಿ, 7 ಸಿಕ್ಸರ್‌ಗಳೊಂದಿಗೆ 67 ರನ್‌ ಚಚ್ಚಿದರು. ಸನ್‌ರೈಸರ್ಸ್‌ ನಿರಾಯಾಸವಾಗಿ ಐಪಿಎಲ್‌ನಲ್ಲಿ ಗರಿಷ್ಠ ರನ್‌ ದಾಖಲೆ ಬರೆಯಿತು.

22 ಸಿಕ್ಸರ್‌: ದಾಖಲೆ!

ಐಪಿಎಲ್‌ ಇನ್ನಿಂಗ್ಸ್‌ವೊಂದರಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯನ್ನು ಸನ್‌ರೈಸರ್ಸ್‌ ಬರೆಯಿತು. ತಂಡದ ಇನ್ನಿಂಗ್ಸಲ್ಲಿ ಒಟ್ಟು 22 ಸಿಕ್ಸರ್‌ಗಳಿದ್ದವು. ಈ ಮೊದಲು 2013ರಲ್ಲಿ ಆರ್‌ಸಿಬಿ, ಪುಣೆ ವಾರಿಯರ್ಸ್‌ ವಿರುದ್ಧ 21 ಸಿಕ್ಸರ್‌ ಸಿಡಿಸಿದ್ದು ದಾಖಲೆ ಎನಿಸಿತ್ತು.

ಆರ್‌ಸಿಬಿ ಹೆಸರಲ್ಲೇ ಇದೆ ಕನಿಷ್ಠ ಮೊತ್ತದ ದಾಖಲೆ!

ಐಪಿಎಲ್‌ನಲ್ಲಿ ಆರ್‌ಸಿಬಿ ಈಗ ಗರಿಷ್ಠ ರನ್‌ ಚಚ್ಚಿಸಿಕೊಂಡ, ಕನಿಷ್ಠ ಮೊತ್ತ ಗಳಿಸಿದ ಎರಡೂ ಅನಗತ್ಯ ದಾಖಲೆಗಳನ್ನು ಹೊಂದಿದೆ. ಸನ್‌ರೈಸರ್ಸ್‌ಗೆ 287 ರನ್‌ ಬಿಟ್ಟುಕೊಟ್ಟಿರುವ ಆರ್‌ಸಿಬಿ, ಕೆಕೆಆರ್‌ ವಿರುದ್ಧ 2017ರಲ್ಲಿ 49 ರನ್‌ಗೆ ಆಲೌಟ್‌ ಆಗಿತ್ತು. 

02ನೇ ತಂಡ: ಟಿ20 ಲೀಗ್‌ವೊಂದರಲ್ಲಿ 2 ಬಾರಿ 250+ ರನ್‌ ಗಳಿಸಿದ 2ನೇ ತಂಡ ಸನ್‌ರೈಸರ್ಸ್‌. ಇಂಗ್ಲೆಂಡ್‌ನ ಸರ್ರೆ ಮೊದಲ ತಂಡ. 

ಕೋಟಿ ವೀರರನ್ನು ಹೊರಗೆ ಕೂರಿಸಿದ ಆರ್‌ಸಿಬಿ!

ಆರ್‌ಸಿಬಿ ತಂಡವು ಆಟಗಾರರ ಖರೀದಿಗೆ ಮೀಸಲಿರುವ ಒಟ್ಟು 100 ಕೋಟಿ ರು.ಗಳಲ್ಲಿ ಅರ್ಧದಷ್ಟು ಹಣವನ್ನು ಕೇವಲ 4-5 ಆಟಗಾರರ ಖರೀದಿಗೆ ಬಳಿಸಿದೆ. ಈ ಪೈಕಿ ಒಟ್ಟು 47 ಕೋಟಿ ರು. ಮೌಲ್ಯದ ನಾಲ್ವರು ಆಟಗಾರರನ್ನು ಸನ್‌ರೈಸರ್ಸ್‌ ವಿರುದ್ಧದ ಪಂದ್ಯದಲ್ಲಿ ಆಡಿಸದೆ ಹೊರಗೆ ಕೂರಿಸಿದ್ದು ಗಮನ ಸೆಳೆಯಿತು. ಕ್ಯಾಮರೂನ್‌ ಗ್ರೀನ್‌ (17.5 ಕೋಟಿ ರು.), ಗ್ಲೆನ್ ಮ್ಯಾಕ್ಸ್‌ವೆಲ್‌ (11.5 ಕೋಟಿ ರು.), ಅಲ್ಜಾರಿ ಜೋಸೆಫ್‌ (11 ಕೋಟಿ ರು.), ಮೊಹಮದ್‌ ಸಿರಾಜ್‌ (7 ಕೋಟಿ ರು.) ಬೆಂಚ್‌ ಕಾಯ್ದರು.