ರಾಯಲ್ಸ್‌ ಓಟಕ್ಕೆ ಬ್ರೇಕ್‌ ಹಾಕುತ್ತಾ ಸನ್‌ರೈಸರ್ಸ್‌?

| Published : May 02 2024, 12:22 AM IST / Updated: May 02 2024, 04:31 AM IST

ಸಾರಾಂಶ

ಹೈದ್ರಾಬಾದ್‌ಗೆ ಹ್ಯಾಟ್ರಿಕ್‌ ಸೋಲು ತಪ್ಪಿಸುವ ಒತ್ತಡ. ರಾಯಲ್ಸ್‌ಗೆ 9ನೇ ಜಯದ ಗುರಿ. ಈ ಪಂದ್ಯದಲ್ಲಿ ಗೆದ್ದರೆ ತಂಡ ಅಗ್ರ-2ರಲ್ಲೇ ಉಳಿದು ಪ್ಲೇ-ಆಫ್‌ಗೇರುವ ಸಾಧ್ಯತೆ ಹೆಚ್ಚು.

ಹೈದರಾಬಾದ್‌: ಈ ಬಾರಿ ಐಪಿಎಲ್‌ನಲ್ಲಿ ಪ್ಲೇ-ಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿರುವ ಮಾಜಿ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್‌ ಹಾಗೂ ಸ್ಫೋಟಕ ಬ್ಯಾಟಿಂಗ್‌ ಜೊತೆ ಅಸ್ಥಿರ ಆಟಕ್ಕೂ ಹೆಸರುವಾಸಿಯಾಗಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಗುರುವಾರ ಪರಸ್ಪರ ಮುಖಾಮುಖಿಯಾಗಲಿವೆ. 

ಸತತ 2 ಪಂದ್ಯ ಸೋತಿರುವ ಹೈದ್ರಾಬಾದ್‌ ಪಾಲಿಗೆ ಈ ಪಂದ್ಯ ಪ್ಲೇ-ಆಫ್‌ ಕಾರಣಕ್ಕೆ ಮಹತ್ವದ್ದು ಎನಿಸಿಕೊಂಡಿದೆ.ಸಂಜು ಸ್ಯಾಮ್ಸನ್‌ ನಾಯಕತ್ವದ ರಾಯಲ್ಸ್‌ ಟೂರ್ನಿಯಲ್ಲಿ ಆಡಿರುವ 9ರಲ್ಲಿ 8 ಪಂದ್ಯಗಳಲ್ಲಿ ಗೆದ್ದಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಮತ್ತೊಂದು ಗೆಲುವು ತಂಡವನ್ನು ಅಗ್ರ-2ರಲ್ಲೇ ಉಳಿಸಿ ಪ್ಲೇ-ಆಫ್‌ಗೇರಿಸಲಿದೆ. ಎಲ್ಲಾ ವಿಭಾಗದಲ್ಲೂ ತಂಡ ಬಲಿಷ್ಠವಾಗಿ ತೋರುತ್ತಿದ್ದು, ಸನ್‌ರೈಸರ್ಸ್‌ಗೆ ತವರಿನಲ್ಲಿ ದೊಡ್ಡ ಸವಾಲು ಎದುರಾಗುವುದು ಖಚಿತ.

ಮತ್ತೊಂದೆಡೆ ಹೈದ್ರಾಬಾದ್‌ ಆಡಿರುವ 9ರಲ್ಲಿ 5 ಪಂದ್ಯ ಗೆದ್ದಿದೆ. ರಾಜಸ್ಥಾನ ವಿರುದ್ಧ ಗೆದ್ದು ಟಾಪ್‌-4ಗೆ ಮರಳುವುದು ತಂಡದ ಗುರಿ. ಸ್ಫೋಟಕ ಆಟವಾಡುತ್ತಿರುವ ಟೀಂ ಈ ಸಲ 3 ಬಾರಿ 250+ ರನ್‌ ಕಲೆಹಾಕಿದೆ. ತಂಡ ಮೊದಲು ಬ್ಯಾಟಿಂಗ್‌ ಮಾಡಿದಾಗ ಅಬ್ಬರಿಸುತ್ತಿದ್ದರೂ, ಚೇಸಿಂಗ್ ವೇಳೆ ವಿಫಲವಾಗುತ್ತಿದೆ. ಈ ಬಾರಿ 4 ಸಲ ತಂಡಕ್ಕೆ ಚೇಸಿಂಗ್‌ ಸಿಕ್ಕಿದ್ದು, ಕೇವಲ 1 ಪಂದ್ಯ ಗೆದ್ದಿದೆ. ಹೀಗಾಗಿ ತನ್ನ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ.

ಒಟ್ಟು ಮುಖಾಮುಖಿ: 18

ರಾಜಸ್ಥಾನ: 09ಹೈದ್ರಾಬಾದ್‌: 09

ಸಂಭವನೀಯರ ಪಟ್ಟಿ

ರಾಜಸ್ಥಾನ: ಬಟ್ಲರ್‌, ಜೈಸ್ವಾಲ್‌, ಸಂಜು(ನಾಯಕ), ರಿಯಾನ್‌, ಧ್ರುವ್‌, ಹೆಟ್ಮೇಯರ್‌, ಅಶ್ವಿನ್‌, ಬೌಲ್ಟ್‌, ಸಂದೀಪ್‌, ಆವೇಶ್‌, ಚಹಲ್‌.ಹೈದ್ರಾಬಾದ್‌: ಅಭಿಷೇಕ್‌, ಹೆಡ್‌, ಮಾರ್ಕ್‌ರಮ್‌, ಕ್ಲಾಸೆನ್‌, ನಿತೀಶ್‌, ಸಮದ್‌, ಶಾಬಾಜ್‌, ಕಮಿನ್ಸ್‌(ನಾಯಕ), ಭುವನೇಶ್ವರ್‌, ಉನಾದ್ಕಟ್‌, ನಟರಾಜನ್‌.

ಪಂದ್ಯ: ಸಂಜೆ 7.30ಕ್ಕೆ