ಇಂದಿನಿಂದ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20: ಶಮಿ, ಶ್ರೇಯಸ್‌, ಸಂಜು ಸೇರಿ ತಾರೆಗಳು ಕಣಕ್ಕೆ

| Published : Nov 23 2024, 12:33 AM IST / Updated: Nov 23 2024, 04:11 AM IST

ಸಾರಾಂಶ

38 ತಂಡ ಭಾಗಿ. ಕರ್ನಾಟಕಕ್ಕೆ ಉತ್ತರಾಖಂಡ ಮೊದಲ ಸವಾಲು. ಟೂರ್ನಿಯ ಪಂದ್ಯಗಳಿಗೆ ಬೆಂಗಳೂರು, ಮುಂಬೈ, ಇಂದೋರ್‌, ಹೈದರಾಬಾದ್‌ ಸೇರಿದಂತೆ ದೇಶದ ವಿವಿಧ ನಗರಗಳು ಆತಿಥ್ಯ ವಹಿಸಲಿವೆ.

ಇಂದೋರ್‌: ಐಪಿಎಲ್‌ಗೂ ಮುನ್ನ ದೇಶದ ಯುವ ಹಾಗೂ ತಾರಾ ಕ್ರಿಕೆಟಿಗರ ಟಿ20 ಆಟ ಪ್ರದರ್ಶನಕ್ಕೆ ವೇದಿಕೆ ಒದಗಿಸಿಕೊಡುವ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಗೆ ಶನಿವಾರ ಚಾಲನೆ ಸಿಗಲಿದೆ. ಡಿ.15ರ ವರೆಗೂ ನಡೆಯಲಿರುವ ಟೂರ್ನಿಗೆ ಬೆಂಗಳೂರು, ಮುಂಬೈ, ಇಂದೋರ್‌, ಹೈದರಾಬಾದ್‌ ಸೇರಿದಂತೆ ದೇಶದ ವಿವಿಧ ನಗರಗಳು ಆತಿಥ್ಯ ವಹಿಸಲಿವೆ. 

ಟೂರ್ನಿಯಲ್ಲಿ ಕರ್ನಾಟಕ ಸೇರಿದಂತೆ 38 ತಂಡಗಳು ಪಾಲ್ಗೊಳ್ಳಲಿದ್ದು, 5 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ‘ಎ’, ‘ಬಿ’ ಮತ್ತು ‘ಸಿ’ ಗುಂಪಿನಲ್ಲಿ ತಲಾ 8, ‘ಡಿ’ ಮತ್ತು ‘ಇ’ ಗುಂಪಿನಲ್ಲಿ ತಲಾ 7 ತಂಡಗಳಿವೆ. ಮಯಾಂಕ್‌ ಅಗರ್‌ವಾಲ್‌ ನಾಯಕತ್ವದ ಕರ್ನಾಟಕ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಶನಿವಾರ ಆರಂಭಿಕ ಪಂದ್ಯದಲ್ಲಿ ರಾಜ್ಯ ತಂಡ ಉತ್ತರಾಖಂಡ ವಿರುದ್ಧ ಸೆಣಸಲಿದೆ. ಬಳಿಕ ನ.25ಕ್ಕೆ ತ್ರಿಪುರಾ, ನ.27ಕ್ಕೆ ಸೌರಾಷ್ಟ್ರ, ನ.29ಕ್ಕೆ ಸಿಕ್ಕಿಂ, ಡಿ.1ಕ್ಕೆ ತಮಿಳುನಾಡು, ಡಿ.3ಕ್ಕೆ ಬರೋಡಾ ಹಾಗೂ ಕೊನೆ ಪಂದ್ಯದಲ್ಲಿ ಡಿ.5ರಂದು ಗುಜರಾತ್‌ ವಿರುದ್ಧ ಆಡಲಿದೆ. ಕರ್ನಾಟಕ ತಂಡದ ಗುಂಪು ಹಂತದ ಎಲ್ಲಾ ಪಂದ್ಯಗಳಿಗೆ ಇಂದೋರ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಶಮಿ, ಶ್ರೇಯಸ್‌, ಸಂಜು ಸೇರಿ ತಾರೆಗಳು ಕಣಕ್ಕೆ

ಈ ಬಾರಿ ಟೂರ್ನಿಯಲ್ಲಿ ಹಲವು ತಾರಾ ಆಟಗಾರರು ಕಣಕ್ಕಿಳಿಯಲಿದ್ದಾರೆ. ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಕಾಯುತ್ತಿರುವ ವೇಗಿ ಮೊಹಮದ್‌ ಶಮಿ ಬಂಗಾಳ ಪರ ಆಡಲಿದ್ದು, ಹಾರ್ದಿಕ್‌ ಪಾಂಡ್ಯ ಬರೋಡಾ, ಶ್ರೇಯಸ್‌ ಅಯ್ಯರ್‌ ಮುಂಬೈ(ನಾಯಕ), ಸಂಜು ಸ್ಯಾಮ್ಸನ್‌ ಕೇರಳ(ನಾಯಕ), ಚಹಲ್‌ ಹರ್ಯಾಣ, ಅಭಿನವ್‌ ಮನೋಹರ್ ಕರ್ನಾಟಕ ಪರ ಕಣಕ್ಕಿಳಿಯಲಿದ್ದಾರೆ.

ಡಿ.9ರಿಂದ ಬೆಂಗಳೂರಿನಲ್ಲಿ ನಾಕೌಟ್‌, 15ಕ್ಕೆ ಫೈನಲ್‌

ಡಿ.9ರಿಂದ ನಡೆಯಲಿರುವ ಟೂರ್ನಿಯ ನಾಕೌಟ್‌ ಪಂದ್ಯಗಳಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. 2 ಪ್ರಿ ಕ್ವಾರ್ಟರ್‌ ಫೈನಲ್‌, 4 ಕ್ವಾರ್ಟರ್‌, 2 ಸೆಮಿಫೈನಲ್‌ ಪಂದ್ಯಗಳು ಹಾಗೂ ಫೈನಲ್‌ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿವೆ. ಫೈನಲ್‌ ಡಿ.15ಕ್ಕೆ ನಿಗದಿಯಾಗಿದೆ

ಪಂದ್ಯಗಳು ಪ್ರಸಾರ: ಜಿಯೋ ಸಿನಿಮಾ ಆ್ಯಪ್‌, ಸ್ಪೋರ್ಟ್ಸ್‌ 18 ಚಾನೆಲ್‌