ಸಾರಾಂಶ
ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಶುರುವಾಗಿದೆ ಮಳೆ ಭೀತಿ. ಪಂದ್ಯ ವಾಶೌಟ್ ಆದರೆ ಫೈನಲ್ ಪ್ರವೇಶಿಸುತ್ತೆ ಭಾರತ. ಇಂಗ್ಲೆಂಡ್ ಪಾಳಯದಲ್ಲಿ ಶುರುವಾಗಿದೆ ಭಯ.
ಪ್ರಾವಿಡೆನ್ಸ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದ್ದು, ಒಂದು ವೇಳೆ ಪಂದ್ಯ ರದ್ದಾದರೆ ಭಾರತ ಫೈನಲ್ ಪ್ರವೇಶಿಸಲಿದೆ.ಗುರುವಾರ ಗಯಾನದ ಪ್ರಾವಿಡೆನ್ಸ್‌ನಲ್ಲಿ ಮಳೆಯಾಗುವ ಸಾಧ್ಯತೆ ಶೇ.88ರಷ್ಟಿದ್ದು, ಗುಡುಗು ಸಹಿತ ಭಾರಿ ಮಳೆಯೂ ಸುರಿಯಬಹುದು ಎಂದು ಸ್ಥಳೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಪಂದ್ಯ ಮಳೆಗೆ ಬಲಿಯಾದರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.
ಮೀಸಲು ದಿನವಿಲ್ಲ: 2ನೇ ಸೆಮಿಫೈನಲ್‌ಗೆ ಮೀಸಲು ದಿನ ನಿಗದಿಯಾಗಿಲ್ಲ. ಇದು ಬೆಳಗ್ಗಿನ ಪಂದ್ಯವಾಗಿರುವ ಕಾರಣ, ಪಂದ್ಯ ಮುಕ್ತಾಯಗೊಳಿಸಲು ಹೆಚ್ಚೂವರಿ 250 ನಿಮಿಷಗಳ ಕಾಲಾವಕಾಶವನ್ನು ಐಸಿಸಿ ಒದಗಿಸಲಿದೆ. ಒಂದು ವೇಳೆ ಫಲಿತಾಂಶ ಸಾಧ್ಯವಾಗದೆ ಇದ್ದರೆ, ಸೂಪರ್-8 ಹಂತದ ಗುಂಪು-1ರಲ್ಲಿ ಅಗ್ರಸ್ಥಾನ ಪಡೆದ ಭಾರತ ಫೈನಲ್‌ಗೇರಲಿದೆ. ಗುಂಪು-2ರಲ್ಲಿದ್ದ ಇಂಗ್ಲೆಂಡ್ 2ನೇ ಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿದೆ.ತಲಾ 10 ಓವರ್ ಕಡ್ಡಾಯ: ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ಫಲಿತಾಂಶ ಹೊರಬೀಳಬೇಕಿದ್ದರೆ ಎರಡೂ ಇನ್ನಿಂಗ್ಸ್‌ಗಳಲ್ಲಿ ಕನಿಷ್ಠ 10 ಓವರ್ ಆಟ ನಡೆಯಲೇಬೇಕು. ಗುಂಪು ಹಂತ, ಸೂಪರ್-8 ಹಂತದ ಪಂದ್ಯಗಳಲ್ಲಿ ಕನಿಷ್ಠ 5 ಓವರ್ ನಡೆದಿದ್ದರೆ ಸಾಕಾಗಿತ್ತು. ಆದರೆ ಸೆಮೀಸ್, ಫೈನಲ್ ಪಂದ್ಯಕ್ಕೆ ಐಸಿಸಿ ಪ್ರತ್ಯೇಕ ನಿಯಮ ರೂಪಿಸಿದೆ.