ಇಂಗ್ಲೆಂಡ್‌ ವಿರುದ್ಧ 2ನೇ ಟೆಸ್ಟ್‌ನಲ್ಲಿ ಭಾರತ ಪರಾಕ್ರಮ

| N/A | Published : Jul 04 2025, 11:03 AM IST

India Edgbaston Test Day 2
ಇಂಗ್ಲೆಂಡ್‌ ವಿರುದ್ಧ 2ನೇ ಟೆಸ್ಟ್‌ನಲ್ಲಿ ಭಾರತ ಪರಾಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಆರಂಭಿಕ ಟೆಸ್ಟ್‌ನಲ್ಲಿ ತನ್ನ ಎಡವಟ್ಟುಗಳಿಂದಲೇ ಸೋತಿದ್ದ ಭಾರತ ತಂಡ ಬರ್ಮಿಂಗ್‌ಹ್ಯಾಮ್‌ನಲ್ಲಿ ಅಕ್ಷರಶಃ ಅಬ್ಬರಿಸುತ್ತಿದೆ

ಬರ್ಮಿಂಗ್‌ಹ್ಯಾಮ್‌: ಆರಂಭಿಕ ಟೆಸ್ಟ್‌ನಲ್ಲಿ ತನ್ನ ಎಡವಟ್ಟುಗಳಿಂದಲೇ ಸೋತಿದ್ದ ಭಾರತ ತಂಡ ಬರ್ಮಿಂಗ್‌ಹ್ಯಾಮ್‌ನಲ್ಲಿ ಅಕ್ಷರಶಃ ಅಬ್ಬರಿಸುತ್ತಿದೆ. ಭವಿಷ್ಯದ ಸೂಪರ್‌ಸ್ಟಾರ್‌ ಎಂದೇ ಕರೆಸಿಕೊಳ್ಳುವ ಹೊಸ ನಾಯಕ ಶುಭ್‌ಮನ್‌ ಗಿಲ್‌ರ ಅಮೋಘ, ಚೊಚ್ಚಲ ದ್ವಿಶತಕ ಟೀಂ ಇಂಡಿಯಾ ಬೃಹತ್‌ ಮೊತ್ತ ಕಲೆಹಾಕಲು ನೆರವಾಗಿದೆ. ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 587 ರನ್‌ ಕಲೆಹಾಕಿದೆ. ಇದಕ್ಕುತ್ತರವಾಗಿ ಇಂಗ್ಲೆಂಡ್‌ ಉತ್ತಮ ಆರಂಭ ಪಡೆದಿದ್ದು, 2ನೇ ದಿನವೇ 50ರ ಗಡಿ ದಾಟಿದೆ.

ಭಾರತ ಮೊದಲ ದಿನ 5 ವಿಕೆಟ್‌ಗೆ 310 ರನ್‌ ಗಳಿಸಿತ್ತು. ಗಿಲ್‌ ಹಾಗೂ ರವೀಂದ್ರ ಜಡೇಜಾ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು. ಗುರುವಾರ ಭಾರತೀಯ ಬ್ಯಾಟರ್‌ಗಳು ಅಭೂತಪೂರ್ವ ಪ್ರದರ್ಶನ ನೀಡಿದರು. 6ನೇ ವಿಕೆಟ್‌ಗೆ ಗಿಲ್‌-ಜಡೇಜಾ ಜೋಡಿ 279 ಎಸೆತಗಳಲ್ಲಿ 203 ರನ್‌ ಜೊತೆಯಾಟವಾಡಿತು. ಮೊದಲ ಅವಧಿಯಲ್ಲಿ ಭಾರತ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಆದರೆ ಊಟದ ವಿರಾಮದ ಅಲ್ಪ ಮೊದಲು ಜಡೇಜಾ(137 ಎಸೆತಗಳಲ್ಲಿ 89) ಔಟಾಗಿ, ಶತಕ ವಂಚಿತರಾದರು. ಬಳಿಕ ಗಿಲ್‌ಗೆ ಜೊತೆಯಾಗಿದ್ದು ವಾಷಿಂಗ್ಟನ್‌ ಸುಂದರ್‌. ಬ್ಯಾಟಿಂಗ್‌ ವಿಭಾಗಕ್ಕೆ ಬಲ ನೀಡಲೆಂದೇ ತಂಡಕ್ಕೆ ಸೇರ್ಪಡೆಗೊಂಡಿದ್ದ ಸುಂದರ್‌ 7ನೇ ವಿಕೆಟ್‌ಗೆ ಗಿಲ್‌ ಜೊತೆಗೂಡಿ 144 ರನ್‌ ಸೇರಿಸಿದರು. ಇವರಿಬ್ಬರು ತಂಡವನ್ನು 550ರ ಗಡಿ ದಾಟಿಸಿದರು. ವಾಷಿಂಗ್ಟನ್‌ 42 ರನ್‌ಗೆ ಔಟಾದರು.

ತ್ರಿಶತಕ ಮಿಸ್‌: ಸುಮಾರು 4 ಅವಧಿಗಳಲ್ಲಿ ಇಂಗ್ಲೆಂಡ್‌ ಬೌಲರ್‌ಗಳ ಬೆವರಿಳಿಸಿದ ಗಿಲ್‌ ತ್ರಿಶತಕದ ನಿರೀಕ್ಷೆಯಲ್ಲಿದ್ದರೂ ಅದು ಕೈಗೂಡಲಿಲ್ಲ. ಟೆಸ್ಟ್‌ನಲ್ಲಿ ಚೊಚ್ಚಲ ದ್ವಿಶತಕ ಬಾರಿಸಿದ ಗಿಲ್‌, 387 ಎಸೆತಗಳಲ್ಲಿ 30 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 269 ರನ್‌ ಗಳಿಸಿದರು. ಜೋಶ್ ಟಂಗ್‌ರ ಶಾರ್ಟ್‌ ಬಾಲ್‌ ಎಸೆತದಲ್ಲಿ ತಪ್ಪಾಗಿ ಹೊಡೆದ ಗಿಲ್‌, ಸ್ಕ್ವೇರ್‌ ಲೆಗ್‌ನಲ್ಲಿದ್ದ ಓಲಿ ಪೋಪ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಕೊನೆ 2 ವಿಕೆಟ್‌ ಕೀಳಲು ಇಂಗ್ಲೆಂಡ್‌ಗೆ ಹೆಚ್ಚು ಸಮಯ ಬೇಕಾಗಲಿಲ್ಲ. ತಂಡ ಒಟ್ಟು 151 ಓವರ್‌ ಬ್ಯಾಟ್‌ ಮಾಡಿತು.

ಬಳಿಕ ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ 3 ಓವರ್‌ಗಳಲ್ಲೇ ಇಬ್ಬರ ವಿಕೆಟ್‌ ಕಳೆದುಕೊಂಡಿತು. ಆಕಾಶ್‌ದೀಪ್‌ ಸತತ 2 ಎಸೆತಗಳಲ್ಲಿ ಬೆನ್‌ ಡಕೆಟ್‌ ಹಾಗೂ ಓಲಿ ಪೋಪ್‌ ವಿಕೆಟ್‌ ಕಬಳಿಸಿ ಭಾರತಕ್ಕೆ ಮೇಲುಗೈ ಒದಗಿಸಿದರು.

ಹಲವು ದಾಖಲೆ ಪುಡಿಗಟ್ಟಿದ ಶುಭ್‌ಮನ್‌ 

ಅತ್ಯಾಕರ್ಷಕ ದ್ವಿಶತಕ ಸಿಡಿಸಿದ ಶುಭ್‌ಮನ್‌ ಗಿಲ್‌(269 ರನ್‌) ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಪುರುಷರ ಟೆಸ್ಟ್‌ನಲ್ಲಿ ಗರಿಷ್ಠ ರನ್‌ ಸಿಡಿಸಿದ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾದರು. 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್‌ ಕೊಹ್ಲಿ 254 ರನ್‌ ಗಳಿಸಿದ್ದು ಈ ವರೆಗಿನ ದಾಖಲೆ ಎನಿಸಿಕೊಂಡಿತ್ತು.

ಒಟ್ಟಾರೆ ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತೀಯ ಬ್ಯಾಟರ್‌ಗಳ ಪೈಕಿ 7ನೇ ಗರಿಷ್ಠ ಸ್ಕೋರ್‌. 2008ರಲ್ಲಿ ಚೆನ್ನೈನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ ವಿರೇಂದ್ರ ಸೆಹ್ವಾಗ್‌ ಗಳಿಸಿದ 319 ರನ್‌ ಈಗಲೂ ಭಾರತೀಯರ ಪೈಕಿ ಅತಿ ಹೆಚ್ಚು. ಭಾರತದ ಪೈಕಿ ಸೆಹ್ವಾಗ್‌(2 ಬಾರಿ), ಕರುಣ್‌ ನಾಯರ್‌(1 ಬಾರಿ) ಮಾತ್ರ ತ್ರಿಶತಕ ಗಳಿಸಿದ್ದಾರೆ..

ಟೆಸ್ಟ್‌ನಲ್ಲಿ ಭಾರತೀಯರ ಗರಿಷ್ಠ ರನ್‌

ಆಟಗಾರ ರನ್‌ ಎದುರಾಳಿ ಸ್ಥಳ ವರ್ಷ

ಸೆಹ್ವಾಗ್‌ 319 ದ.ಆಫ್ರಿಕಾ ಚೆನ್ನೈ 2008

ಸೆಹ್ವಾಗ್‌ 309 ಪಾಕಿಸ್ತಾನ ಮುಲ್ತಾನ್‌ 2004

ಕರುಣ್‌ 303 ಇಂಗ್ಲೆಂಡ್‌ ಚೆನ್ನೈ 2016

ಸೆಹ್ವಾಗ್‌ 293 ಶ್ರೀಲಂಕಾ ಮುಂಬೈ 2009

ಲಕ್ಷ್ಮಣ್‌ 281 ಆಸ್ಟ್ರೇಲಿಯಾ ಕೋಲ್ಕತಾ 2001

ದ್ರಾವಿಡ್‌ 270 ಪಾಕಿಸ್ತಾನ ರಾವಲ್ಪಿಂಡಿ 2004

ಗಿಲ್‌ 269 ಇಂಗ್ಲೆಂಡ್‌ ಬರ್ಮಿಂಗ್‌ಹ್ಯಾಂ 2025

ವಿರಾಟ್‌ 254 ದ.ಆಫ್ರಿಕಾ ಪುಣೆ 2019

ಸೆಹ್ವಾಗ್‌ 254 ಪಾಕಿಸ್ತಾನ ಲಾಹೋರ್‌ 2006

ಸಚಿನ್‌ 248 ಬಾಂಗ್ಲಾದೇಶ ಢಾಕಾ 2004

ಭಾರತ ನಾಯಕರಾಗಿ ಗರಿಷ್ಠ ರನ್‌

ಆಟಗಾರ ರನ್‌ ಎದುರಾಳಿ

ಗಿಲ್‌ 269 ಇಂಗ್ಲೆಂಡ್‌

ವಿರಾಟ್‌ 254 ದ.ಆಫ್ರಿಕಾ

ವಿರಾಟ್‌ 243 ಶ್ರೀಲಂಕಾ

ವಿರಾಟ್‌ 235 ಇಂಗ್ಲೆಂಡ್‌

ಧೋನಿ 224 ಆಸ್ಟ್ರೇಲಿಯಾ

ಇಂಗ್ಲೆಂಡ್‌ನ ಭಾರತದ

ಬ್ಯಾಟರ್‌ನ ಗರಿಷ್ಠ ರನ್‌

ಗಿಲ್‌ ಇಂಗ್ಲೆಂಡ್‌ನಲ್ಲಿ ಗರಿಷ್ಠ ರನ್‌ ಗಳಿಸಿದ ಭಾರತೀಯ ಬ್ಯಾಟರ್‌ ಎನಿಸಿಕೊಂಡರು. 1979ರಲ್ಲಿ ಓವಲ್‌ ಕ್ರೀಡಾಂಗಣದಲ್ಲಿ ಸುನಿಲ್‌ ಗವಾಸ್ಕರ್‌ 221 ರನ್‌ ಗಳಿಸಿದ್ದ ಈ ವರೆಗಿನ ದಾಖಲೆಯಾಗಿತ್ತು.

06ನೇ ಬ್ಯಾಟರ್‌

ಗಿಲ್‌ ಟೆಸ್ಟ್‌ನಲ್ಲಿ 250+ ರನ್‌ ಗಳಿಸಿದ ಭಾರತದ 6ನೇ ಬ್ಯಾಟರ್‌. ಸೆಹ್ವಾಗ್‌(4 ಬಾರಿ), ಲಕ್ಷ್ಮಣ್‌, ದ್ರಾವಿಡ್‌, ಕರುಣ್‌, ಕೊಹ್ಲಿ ಈ ಸಾಧನೆ ಮಾಡಿದ್ದಾರೆ.

Read more Articles on